Agumbe Ghat: ಆಗುಂಬೆ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ವಾಹನ ಸವಾರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ
National Highway: ಮಳೆಗಾಲ ಬಂತೆಂದರೆ ಸಾಕು ಕೆಲವೆಡೆ ಗುಡ್ಡ ಕುಸಿತದಂತಹ ಘಟನೆಗಳು ಸಂಭವಿಸಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳಿವೆ. ಈ ಸಾಲಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟ್ ಮೂಲಕ ಹಾದುಹೋಗಿರುವ, ಮಲೆನಾಡು-ಕರಾವಳಿ ಭಾಗಗಳ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ-169ಎ ಕೂಡ ಸೇರಿದೆ. ಇದೀಗ ಈ ಮಾರ್ಗದಲ್ಲಿ ಸಂಚಾರ ಮಾಡುವ ವಾಹನ ಸವಾರರು ಗಮನಿಸಲೇಬೇಕಾದ ಮಹತ್ವದ ಸೂಚನೆಯೊಂದನ್ನ ನೀಡಲಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಈಗಾಗಲೇ ರಾಜ್ಯದ ಹಲವೆಡೆ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಈ ಹಿನ್ನೆಲೆ ಮುಂದಾಗುವ ಅನಾಹುತಗಳ ಮುನ್ಸೂಚನೆಯನ್ನ ಅರಿತ ಶಿವಮೊಗ್ಗ ಜಿಲ್ಲಾಡಳಿತವು ಆಗುಂಬೆ ಘಾಟ್‌ನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-169ಎ ನಲ್ಲಿ ಭಾರಿ ವಾಹನಗಳ ಸಂಚಾರವನ್ನ ನಿಷೇಧಿಸಿ ಆದೇಶ ಹೊರಡಿಸಿದೆ. ಇದು ಎಲ್ಲಿಯವರೆಗೂ ಜಾರಿಯಲ್ಲಿರುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ವಾಹನ ಸವಾರರಿಗೆ ಮಹತ್ವದ ಮಾಹಿತಿ
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್‌ನಲ್ಲಿ ಇದೇ ಜೂನ್ 15ರಿಂದ ಮಳೆಗಾಲ ಮುಗಿಯುವವರೆಗೂ ಭಾರಿ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಮಳೆಗಾಲದಲ್ಲಿ ತೀವ್ರ ತಿರುವುಗಳನ್ನು ಹೊಂದಿರುವ ಘಾಟಿ ರಸ್ತೆಯಲ್ಲಿ ಭೂಕುಸಿತ, ರಸ್ತೆ ಕುಸಿತ ಮತ್ತು ಸಂಭಾವ್ಯ ಭೀಕರ ಅಪಘಾತಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆಮೆಗತಿಯಲ್ಲಿ ಸಾಗಿರುವ ಕಾಮಗಾರಿ
ಅಲ್ಲದೆ ಹುಲಿಕಲ್ ಘಾಟಿಯಲ್ಲಿ ಕಾಮಗಾರಿಗಳು ಇನ್ನು ಬಾಕಿ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಾರಿ ವಾಹನಗಳ ಸಂಚಾರಕ್ಕಾಗಿ ಜಿಲ್ಲಾಡಳಿತ ಎರಡು ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ. ಉಡುಪಿ- ತೀರ್ಥಹಳ್ಳಿ ಕಡೆಗೆ ಹೋಗುವ ವಾಹನಗಳು ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಮತ್ತು ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ- ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ತೀರ್ಥಹಳ್ಳಿ, ಉಡುಪಿಗೆ ಹೋಗುವವರಿಗೆ ಪರ್ಯಾಯ ಮಾರ್ಗಗಳು
* ತೀರ್ಥಹಳ್ಳಿ - ನಾಗೋಡಿ - ಕೊಲ್ಲೂರು - ಕುಂದಾಪುರ - ಉಡುಪಿ
* ತೀರ್ಥಹಳ್ಳಿ - ಶೃಂಗೇರಿ - ಬಜಗೋಳಿ - ಕಾರ್ಕಳ - ಉಡುಪಿ
ನಿಷೇಧಕ್ಕೆ ಕಾರಣವಾದ ಪ್ರಮುಖ ಅಂಶಗಳು
ಈ ಹಿಂದೆ ಶಿವಮೊಗ್ಗದಿಂದ ಹೊಸನಗರ ಮತ್ತು ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಹಾಗೂ ಉಡುಪಿ ಜಿಲ್ಲೆಗಳಿಗೆ ಸುಲಭ ಸಂಪರ್ಕ ಕಲ್ಪಿಸುತ್ತಿದ್ದ ಹುಲಿಕಲ್ ಘಾಟಿಯಲ್ಲಿ ತೀವ್ರ ಭೂಕುಸಿತ ಸಂಭವಿಸಿತ್ತು. ಆ ಘಟನೆಯ ನಂತರ ಹುಲಿಕಲ್ ಘಾಟಿಯಲ್ಲಿ ರಕ್ಷಣಾತ್ಮಕ ಕಾಮಗಾರಿಗಳು ಮತ್ತು ರಸ್ತೆ ದುರಸ್ತಿ ಕಾರ್ಯಗಳು ಪ್ರಸ್ತುತ ನಡೆಯುತ್ತಿವೆ. ಆದರೆ ಈ ಕಾಮಗಾರಿಗಳು ಇನ್ನು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಭಾರಿ ಮತ್ತು ಸರಕು ಸಾಗಣೆ ವಾಹನಗಳು ಆಗುಂಬೆ ಘಾಟಿ ರಸ್ತೆಯನ್ನೇ ಅವಲಂಬಿಸುವಂತಾಗಿದೆ. ಇದರ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಆಗುಂಬೆ ಘಾಟ್‌ನಲ್ಲಿ ಭಾರಿ ವಾಹನಗಳ ದಟ್ಟಣೆ ಮತ್ತು ಓಡಾಟ ಗಣನೀಯವಾಗಿ ಹೆಚ್ಚಾಗಿದೆ.
ಆಗುಂಬೆ ಘಾಟಿ ಪ್ರದೇಶವು ಅತ್ಯಂತ ಕಡಿದಾದ ಮತ್ತು ತೀವ್ರ ತಿರುವುಗಳಿಂದ ಕೂಡಿದೆ. ಮುಂಬರುವ ಭಾರಿ ಮಳೆಯ ದಿನಗಳಲ್ಲಿಯೂ ಇದೇ ರೀತಿ ಬೃಹತ್ ವಾಹನಗಳ ಸಂಚಾರ ಮುಂದುವರಿದರೆ ರಸ್ತೆಯ ಬದಿಗಳಲ್ಲಿ ತೀವ್ರ ಭೂಕುಸಿತ ಉಂಟಾಗುವ, ರಸ್ತೆ ಕುಸಿಯುವ ಅಥವಾ ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಇದು ಸಾರ್ವಜನಿಕರ ಮುಕ್ತ ಹಾಗೂ ಸುರಕ್ಷಿತ ಓಡಾಟಕ್ಕೆ ಅಡ್ಡಿ ಉಂಟುಮಾಡಬಹುದು ಎಂಬ ಆತಂಕ ಎದುರಾಗಿದೆ.
ಆಗುಂಬೆ ಘಾಟಿ ಕೇವಲ ಸಾಮಾನ್ಯ ಸಾರಿಗೆಗಷ್ಟೇ ಅಲ್ಲದೆ, ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೂ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ಸಾವಿರಾರು ನಾಗರಿಕರು ಉನ್ನತ ಮಟ್ಟದ ಆರೋಗ್ಯ ಚಿಕಿತ್ಸೆಗಾಗಿ ಕರಾವಳಿಯ ಮಣಿಪಾಲ್, ಉಡುಪಿ ಮತ್ತು ಮಂಗಳೂರಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ.
ಒಂದು ವೇಳೆ ಮಳೆಗಾಲದಲ್ಲಿ ಅತಿಯಾದ ವಾಹನ ದಟ್ಟಣೆಯಿಂದಾಗಿ ಆಗುಂಬೆ ಘಾಟ್ ಸಂಪೂರ್ಣವಾಗಿ ಬಂದ್ ಆದರೆ ಅಥವಾ ರಸ್ತೆ ಕುಸಿತ ಸಂಭವಿಸಿದಲ್ಲಿ ಈ ನಾಲ್ಕು ಜಿಲ್ಲೆಗಳ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಈ ಎಲ್ಲಾ ಗಂಭೀರ ಸೂಕ್ಷ್ಮತೆಗಳನ್ನು ಅವಲೋಕಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಜಿಲ್ಲಾಧಿಕಾರಿಗಳು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಮಳೆಗಾಲದ ಅವಧಿಯಲ್ಲಿ ಪ್ರಯಾಣಿಕರು ಯಾವುದೇ ಅಡಚಣೆ ಇಲ್ಲದೆ ಸುರಕ್ಷಿತವಾಗಿ ಪ್ರಯಾಣಿಸಲು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.












Click it and Unblock the Notifications