ಅನ್ನ ಸಾರು, ಇಡ್ಲಿ, ದೋಸೆ ತಿಂದೇ ತೂಕ ಇಳಿಸಿಕೊಳ್ಳಬಹುದು!ಕರೀನಾ ಕಪೂರ್ ಡಯೆಟೀಶಿಯನ್ ರುಜುತಾ ದಿವೇಕರ್ ಸಲಹೆ
ಬಾಲಿವುಡ್‌ನ ಜನಪ್ರಿಯ ನಟಿ ಕರೀನಾ ಕಪೂರ್ ಅವರ 'ಸೈಜ್ ಜೀರೋ' ಟ್ರಾನ್ಸ್‌ಫಾರ್ಮೇಶನ್‌ನ ಹಿಂದಿನ ರೂವಾರಿ, ಖ್ಯಾತ ಸೆಲೆಬ್ರಿಟಿ ನ್ಯೂಟ್ರಿಷಿಯಾನಿಸ್ಟ್ ರುಜುತಾ ದಿವೇಕರ್. ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ತೂಕ ಇಳಿಸಿಕೊಳ್ಳುವ ಕುರಿತು ಮಹತ್ವದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಅತಿರೇಕದ ಡಯೆಟ್ ಪದ್ಧತಿಗಳನ್ನು ಅವರು ಟೀಕಿಸಿದ್ದಾರೆ. ತೂಕ ಕಳೆದುಕೊಳ್ಳಲು ಇರುವ ಆರೋಗ್ಯಕರ ಮತ್ತು ಸುಸ್ಥಿರ ಜೀವನಶೈಲಿಯ ಮೂರು ಪ್ರಮುಖ ಸೂತ್ರಗಳನ್ನು ತಿಳಿಸಿದ್ದಾರೆ.
ರುಜುತಾ ದಿವೇಕರ್ ಅವರು ಸೂಚಿಸಿರುವ ಆ ಮೂರು ನಿಯಮಗಳು ಇಲ್ಲಿವೆ:
1. ಆತುರ ಬೇಡ, ಸ್ಥಿರತೆಗೆ ಆದ್ಯತೆ ನೀಡಿ:
ತೂಕ ಇಳಿಕೆ ಎನ್ನುವುದು ದೀರ್ಘಕಾಲೀನ ಪ್ರಕ್ರಿಯೆ. ವೇಗವಾಗಿ ತೂಕ ಇಳಿಸಿಕೊಳ್ಳುವುದು ಯಾವತ್ತೂ ಆರೋಗ್ಯಕರವಲ್ಲ. ಹಾಗಾಗಿ ವೇಗವಾಗಿ ತೂಕ ಇಳಿಸಿಕೊಳ್ಳುವ ಭರದಲ್ಲಿ ಆರೋಗ್ಯದೊಂದಿಗೆ ಚೆಲ್ಲಾಟವಾಡಬೇಡಿ ಎಂದು ರುಜುತಾ ಎಚ್ಚರಿಸಿದ್ದಾರೆ. ನೀವು 2 ಕೆಜಿ ಇಳಿಸಿಕೊಳ್ಳಬೇಕೋ ಅಥವಾ 20 ಕೆಜಿ ಇಳಿಸಿಕೊಳ್ಳಬೇಕೋ ಎನ್ನುವ ನಿಮ್ಮ ದೃಷ್ಟಿಕೋನ ಸುಸ್ಥಿರವಾಗಿರಬೇಕು. ವರ್ಷಕ್ಕೆ ನಿಮ್ಮ ದೇಹದ ತೂಕದ ಶೇ. 5 ರಿಂದ 10 ರಷ್ಟು ಇಳಿಕೆ ಅತ್ಯುತ್ತಮ ಎಂದು ಸಲಹೆ ನೀಡಿದ್ದಾರೆ. ಒಮ್ಮೆಲೇ ತೂಕ ಇಳಿಸಿಕೊಳ್ಳುವ ಬದಲು ಹಂತ ಹಂತವಾಗಿ ತೂಕ ಇಳಿಸುವ ಪ್ರಕ್ರಿಯೆಗೆ ಒತ್ತು ನೀಡಬೇಕು. ಹೀಗಾದಾಗ ಮಾತ್ರ ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆಗಳು, ಆಸ್ಟಿಯೊಪೊರೋಸಿಸ್ ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯ ಕಡಿಮೆಯಾಗುತ್ತದೆ. ಚರ್ಮ ಹಾಗೂ ಕೂದಲಿನ ಆರೋಗ್ಯವೂ ಸುಧಾರಿಸುತ್ತದೆ. ಯೂರಿಕ್ ಆಮ್ಲದ ಸಮಸ್ಯೆಗಳೂ ಕಡಿಮೆಯಾಗುತ್ತವೆ. ರೋಗನಿರೋಧಕ ಶಕ್ತಿ ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡಿಕೊಂಡು ತೂಕ ಇಳಿಸಿಕೊಳ್ಳುವುದು ಬಹಳ ಮುಖ್ಯ.

2. ಸಾಂಪ್ರದಾಯಿಕ ಆಹಾರ ಪದ್ಧತಿಗೆ ಮರಳಿ:
ಇಂದಿನ ದಿನಗಳಲ್ಲಿ ಮ್ಯಾಕ್ರೋ-ನ್ಯೂಟ್ರಿಯೆಂಟ್‌ಗಳ (ಪ್ರೋಟೀನ್, ಫೈಬರ್) ಲೆಕ್ಕಾಚಾರದಲ್ಲಿ ಸಿಲುಕಿ ಜನರು ಪರದಾಡುತ್ತಿದ್ದಾರೆ. ಊಟದಲ್ಲಿ 30 ಗ್ರಾಂ ಪ್ರೋಟೀನ್, 30 ಗ್ರಾಂ ಫೈಬರ್ ಮತ್ತು ನಿರ್ದಿಷ್ಟ ಪ್ರಮಾಣದ ಒಮೆಗಾ-3 ಇರಬೇಕು ಎನ್ನುವ ಲೆಕ್ಕಾಚಾರ ಇರಬಾರದು. ಇಂತಹ ಕೃತಕ ಲೆಕ್ಕಾಚಾರಗಳು ಆಹಾರ ಉದ್ಯಮದ ಲಾಭವನ್ನು ಹೆಚ್ಚಿಸುತ್ತವೆಯೇ ಹೊರತು ನಮ್ಮ ಆರೋಗ್ಯವನ್ನಲ್ಲ ಎನ್ನುವುದು ರುಜುತಾ ಅಭಿಪ್ರಾಯ. "ನಮ್ಮ ಪೂರ್ವಜರು ಸೇವಿಸುತ್ತಿದ್ದ ದ್ವಿದಳ ಧಾನ್ಯಗಳು, ಅನ್ನ, ಇಡ್ಲಿ, ದೋಸೆ, ಕೋಳಿ ಮೀನಿನ ಸಾರು-ಹೀಗೆ ಪ್ರಾದೇಶಿಕ ಮತ್ತು ಸಾಂಪ್ರದಾಯಿಕ ಆಹಾರವೇ ಅತ್ಯುತ್ತಮ. ದೇಹ ತೂಕ ಕಳೆದುಕೊಳ್ಳುವುದಕ್ಕೂ ಇದೇ ಆಹಾರಗಳನ್ನು ಸೇವಿಸಿದರೆ ಸಾಕಾಗುತ್ತದೆ.ಅಲ್ಲದೆ ಪ್ರತಿಯೊಬ್ಬರೂ ಒಂದೇ ರೀತಿಯ ಡಯೆಟ್ ಮಾಡಬೇಕು ಎನ್ನುವುದು ಅನಿವಾರ್ಯವಲ್ಲ, ಎಲ್ಲರಿಗೂ ಒಂದೇ ರೀತಿಯ ಡಯಟ್ ಸೂಟ್ ಆಗುವುದೂ ಇಲ್ಲ. ನಮ್ಮ ಸಂಸ್ಕೃತಿಗೆ ಒಗ್ಗುವ ಆಹಾರವೇ ನಮಗೆ ಶ್ರೀರಕ್ಷೆ. ನಾವು ನಿತ್ಯ ಸೇವಿಸುವ ಆಹಾರವನ್ನು ತಿನ್ನುವ ಮೂಲಕವೇ ಸುಸ್ಥಿರ ತೂಕ ಕಳೆದುಕೊಳ್ಳಬಹುದು, ಎನ್ನುವುದನ್ನು ಅವರು ಒತ್ತಿ ಹೇಳಿದ್ದಾರೆ.
3. ಮ್ಯಾಜಿಕ್ ಉತ್ಪನ್ನ'ಗಳಿಗಿಂತ ಪ್ರಕ್ರಿಯೆಗೆ ನಂಬಿಕೆ ಇಡಿ:
ಇಂಟರ್‌ನೆಟ್‌ನಲ್ಲಿ ವೈರಲ್ ಆಗುವ 'ಸೂಪರ್‌ಫುಡ್'ಗಳು, ನಿರ್ದಿಷ್ಟ ಶೇಕ್ ಅಥವಾ ಕಷಾಯಗಳು ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಮ್ಯಾಜಿಕ್ ಮಾಡುತ್ತವೆ ಎಂಬುದು ಸುಳ್ಳು. ಅಲ್ಪಾವಧಿಯ ಇಂಟರ್ನೆಟ್ ಗಿಮಿಕ್‌ಗಳಿಂದ ದೂರವಿರಲು ಅವರು ಜನರಿಗೆ ಸಲಹೆ ನೀಡಿದ್ದಾರೆ. ಆಹಾರದಲ್ಲಿ ಯಾವುದೇ ಮ್ಯಾಜಿಕ್ ಇರಬಾರದು. ರಾತ್ರಿಯ ಊಟ ಬಿಟ್ಟು ಶೇಕ್ ಕುಡಿಯುವುದು, ಅಥವಾ ಬೆಳಿಗ್ಗೆ ಎದ್ದು ಮೆಂತ್ಯೆ ನೀರು, ಗೋಂದ್ ಕಟೀರಾ, ಅರಶಿನ ಶುಂಠಿ ನೀರು ಕುಡಿಯುವುದರಿಂದ ತೂಕ ಇಳಿಕೆಯಾಗುವುದಿಲ್ಲ. ಮ್ಯಾಜಿಕ್ ಇರುವುದು ಉತ್ಪನ್ನಗಳಲ್ಲಿ ಅಲ್ಲ, ನಾವು ನಿಯಮಿತವಾಗಿ ಅನುಸರಿಸುವ ದಿನಚರಿ ಸ್ಥಿರತೆಯಲ್ಲಿ ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಟ್ರೆಂಡ್‌ಗಳನ್ನು ಮುಂದೆ ಹಿಂದೆ ಯೋಚನೆ ಮಾಡದೆ ಕುರುಡಾಗಿ ಅನುಸರಿಸುವ ಬದಲು, ನಮ್ಮ ಅಡುಗೆ ಮನೆಯಲ್ಲಿ ಸಿಗುವ ಸಾಂಪ್ರದಾಯಿಕ ಆಹಾರಗಳನ್ನೇ ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ತೂಕ ಇಳಿಕೆ ಎನ್ನುವುದು ಒತ್ತಡದಿಂದ ಕೂಡಿರಬಾರದು. ಬದಲಿಗೆ ಸಂತೋಷ, ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಇರಬೇಕು. ಜೊತೆಗೆ ಅರೋಗ್ಯಕರವಾಗಿದ್ದುಕೊಂಡು ಸುಲಭವಾಗಿ ತೂಕ ಇಳಿಸಿಕೊಳ್ಳುವ ಮಾರ್ಗವನ್ನು ಆರಿಸಿಕೊಳ್ಳಬೇಕು ಎಂದು ರುಜುತಾ ದಿವೇಕರ್ ತಿಳಿಸಿದ್ದಾರೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications