ವಯಸ್ಸಿನ್ನೂ 33, ಆರಂಕಿ ಸಂಬಳದ ಕಾರ್ಪೋರೇಟ್ ಕೆಲಸ ಬಿಟ್ಟು, ಆರೋಗ್ಯಕ್ಕಾಗಿ ವೇಟ್ರಸ್ ಆದ ಮಹಿಳೆ
ಕಾರ್ಪೋರೇಟ್ ಜಗತ್ತಿನಲ್ಲಿ ಸಾಮಾನ್ಯವಾಗಿ ಕೇಳಿ ಬರೋ ಸಮಸ್ಯೆ ಅಂದ್ರೆ ಸ್ಟ್ರೆಸ್, ಒತ್ತಡ. ಕಂಪನಿಯೇ ಉದ್ಯೋಗಿಗಳಿಗೆ ಅಷ್ಟು ಒತ್ತಡ ಕೊಡುತ್ತೋ ಅಥವಾ ಉದ್ಯೋಗಿಗಳಿಗೆ ಅದನ್ನು ನಿಭಾಯಿಸುವ ಜಾಣ್ಮೆ ಇರುವುದಿಲ್ಲವೋ ಗೊತ್ತಿಲ್ಲ. ಈ ಸ್ಟ್ರೆಸ್ ಅನ್ನೋದು ತರೋ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಒಂದೆರಡಲ್ಲ. ಸ್ಟ್ರೆಸ್ ಮ್ಯಾನೇಜ್ ಮಾಡಲು ಫೇಲ್ ಆಗುವ ಅನೇಕರು ಕೈ ತುಂಬಾ ಸಂಬಳ ತೆಗೆದುಕೊಳ್ಳುತ್ತಿದ್ದರೂ ಕೆಲಸ ಬಿಟ್ಟು ತಮ್ಮಿಷ್ಟದಂತೆ ಬದುಕಲು ಯತ್ನಿಸುತ್ತಾರೆ. ಅದರಿಂದ ದುಡ್ಡಿಲ್ಲವೆಂದಾದರೂ ಮಾನಸಿಕ ನೆಮ್ಮದಿ ಸಿಕ್ಕು, ಆರೋಗ್ಯವಾಗಿದ್ದೇವೆ ಎನ್ನುತ್ತಾರೆ. ಆದರೆ, ಭಾರತ ಸೇರಿ ಏಷ್ಯಾದ ಜನರು ಅದೆಷ್ಟೇ ಕಷ್ಟವಾದರೂ ಕೈ ತುಂಬಾ ವೇತನ ತರೋ ಕೆಲಸ ಬಿಡೋದು ಅಪರೂಪ. ಈಗಿನ ಜೆನ್ ಜೀ ತಮ್ಮಿಚ್ಛೆಯಂತೆ ಬದುಕೋದು ಹೆಚ್ಚುತ್ತಿದೆ. ಆದರೆ, ವಿದೇಶದಲ್ಲಿ ಕೆಲವು ರಾಷ್ಟ್ರಗಳಲ್ಲಿ ಆರೋಗ್ಯಕ್ಕಾಗಿ ಕೆಲಸ ಬಿಡೋದು ಸಾಮಾನ್ಯ. ಅಂಥದ್ದೊಂದು ಸುದ್ದಿಯನ್ನು ಮಹಿಳೆಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಆರಂಕಿ ವೇತನ ಬರೋ ಕಾರ್ಪೋರೇಟ್ ಉದ್ಯೋಗ ಬಿಟ್ಟು ರೆಸ್ಟೋರೆಂಟ್‌ವೊಂದರಲ್ಲಿ ವೇಟ್ರಸ್ ಆಗಿ ಕೆಲಸಕ್ಕೆ ಸೇರಿ ಕೊಂಡಿದ್ದೇನೆ. ಜೀವನದ ಈ ನಿರ್ಧಾರದಿಂದ ಏನಾಯಿತೋ, ಏನೋ ಗೊತ್ತಿಲ್ಲ. ನನ್ನ ಆರೋಗ್ಯವಂತೂ ಸುಧಾರಿಸಿದೆ. ಬಹಳ ದಿನಗಳಿಂದ ಅನುಭವಿಸುತ್ತಿದ್ದ ಅನಾರೋಗ್ಯಕ್ಕೆ ತಿಲಾಂಜಲಿ ಇಟ್ಟು, ನೆಮ್ಮದಿಯಾಗಿದ್ದೇನೆ ಎಂದು ಬರೆದು ಕೊಂಡಿದ್ದಾಳೆ. ಈ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಲ್‌ಚಲ್ ಸೃಷ್ಟಿಸಿದ್ದು, ವೃತ್ತಿ ಜೀವನದ ಬದಲಾವಣೆ ಹಾಗೂ ಬದುಕಿನ ಬಗ್ಗೆ ಚರ್ಚೆಗಳಾಗುತ್ತಿವೆ. ಆರೋಗ್ಯಕ್ಕೆ ಆದ್ಯತೆ ಕೊಡಬೇಕೋ, ಕೈ ತುಂಬಾ ಸಂಬಳ ಕೊಟ್ಟು, ಲೈಫ್‌ಸ್ಟೈಲ್ ಅನ್ನು ಚಂದವಾಗಿಸಿ, ಸ್ಟ್ರೆಸ್ ಹೆಚ್ಚಿಸೋ ಉದ್ಯೋಗ ಮುಖ್ಯವೋ ಎಂಬ ಚರ್ಚೆಯಾಗುತ್ತಿದೆ. ಈ ಬಗ್ಗೆ ತರಹೇವಾರಿ ಕಮೆಂಟ್ಸ್ ಸಹ ಬಂದಿದೆ.

ಸರೆಮ್ ಕಾರ್ನಿಶ್ (Sarame Cornish) ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದು, ಕಳೆದ ಆರು ತಿಂಗಳಿಂದ ವಿಚಿತ್ರ ಯಾತನೆ ಅನುಭವಿಸುತ್ತಿದ್ದೆ. ಅದಕ್ಕೆ ಹಲವು ವೈದ್ಯರನ್ನು ಸಂಪರ್ಕಿಸಿದರೂ ಕಾಯಿಲೆಗೆ ಮೂಲ ಯಾವುದೆಂದು ಅರ್ಥವಾಗಲಿಲ್ಲ. ಆದರೆ, ಸ್ಟ್ರೆಸ್ ಅನ್ನೋದು ಅರಿವಿಗೆ ಬಂದ ಕೂಡಲೇ ನಾನು ಆರಂಕಿ ಸಂಬಳ ಪಡೆಯುವ ಕೆಲಸವನ್ನು ಬಿಡಲು ನಿರ್ಧರಿಸಿದೆ. ಸೇರಿಕೊಂಡಿದ್ದು ವೇಟರ್ ಆಗಿ. ಸಮಾಜದಲ್ಲಿ ಅಷ್ಟೇನೂ ಗೌರವವಿಲ್ಲದ, ಕೈ ತುಂಬಾ ಸಂಬಳ ಬಾರದೇ ಹೋದರೂ ಈ ಕೆಲಸ ಮನಸ್ಸಿಗೆ ಖುಷಿ ಕೊಡುತ್ತಿದೆ. ಸುದೀರ್ಘ ಕಾಲ ಅನುಭವಿಸಿದ ಮಾನಸಿಕ ಯಾತನೆಗೆ, ನೋವಿಗೆ ಫುಲ್ ಸ್ಟಾಪ್ ಇಟ್ಟಿದ್ದೇನೆ. ಈಗ ಆರೋಗ್ಯವಾಗಿದ್ದೇನೆ, ಎಂದಿದ್ದಾರೆ.
ಅಷ್ಟಕ್ಕೂ ಕಾರ್ನಿಶ್‌ಗಿದ್ದ ಕಾಯಿಲೆ ಏನು?
ಆರು ತಿಂಗಳ ಕಾಲ ಈ ಮಹಿಳೆ ಬದುಕಿದ್ದು ಕೇವಲ ಗಾಳಿ ಮತ್ತು ಹಸಿರು ತರಕಾರಿಗಳನ್ನು. ಅವಳನ್ನು ಕಾಡುತ್ತಿದ್ದ ರೋಗದ ಹೆಸರು ಐಬಿಎಸ್ (IBS - ಇರಿಟೇಬಲ್ ಬೋವಲ್ ಸಿಂಡ್ರೋಮ್). ಈ ಕಿರಿಕಿರಿ ಅನಿಸುವ ಸಮಸ್ಯೆ ಕಾರಣ ತಿಳಿದುಕೊಳ್ಳಲು ಕಾರ್ನಿಶ್ ಎಡತಾಕಿದ ಆಸ್ಪತ್ರೆಗಳಿಗೆ ಲೆಕ್ಕವೇ ಇಲ್ಲ. ಸಂಪರ್ಕಿಸಿದ ಎಲ್ಲ ಗ್ಯಾಸ್ಟ್ರೋಇಂಟೆಸ್ಟೈನಲ್ ತಜ್ಞರು ಹೇಳಿದ ಎಲ್ಲ ಚಿಕಿತ್ಸೆ, ಪರೀಕ್ಷೆಗಳನ್ನೂ ಮಾಡಿಸಿಕೊಂಡರೂ ಸಮಸ್ಯೆಯಿಂದ ಮುಕ್ತಳಾಗಲಿಲ್ಲ. ಕಾರಣವೇ ಗೊತ್ತಾಗಲಿಲ್ಲ. ಒಂದು ಫೈನ್ ಡೇ ಇದು ಕಾರ್ಪೋರೇಟ್ ಸ್ಟ್ರೆಸ್‌ನಿಂದ ಅನುಭವಿಸುತ್ತಿರುವ ಯಾತನೆ ಎಂಬುವುದು ಅರ್ಥವಾಯಿತು. ಹಿಂದೂ ಮುಂದು ಯೋಚಿಸದೇ ಕೆಲಸ ಬಿಟ್ಟೆ. ಕೆಲವೇ ದಿನಗಳಲ್ಲಿ ರೋಗ ಲಕ್ಷಣಗಳೂ ಮಾಯವಾದವು. ನಾನು ಹಿಂದೆಂದೂ ಇಷ್ಟು ಆರೋಗ್ಯವಾಗಿರಲಿಲ್ಲ. ಈ ಆರೋಗ್ಯ ನೀಡುತ್ತಿರುವ ಖುಷಿಗೆ ನಾನು ಜೀವಮಾನ ಪೂರ್ತಿ ನೆಲ ಒರೆಸಲು ರೆಡಿ, ಆರೋಗ್ಯವೇ ಭಾಗ್ಯವೆಂದು ನಗ್ ನಗ್ತಾ ನೆಲ ಓರೆಸುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದುರ ಜನರು ವಿಭಿನ್ನವಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಕಾರ್ನಿಶ್ ಪೋಸ್ಟಿಗೆ ಕಮೆಂಟ್ಸ್ ಏನಿವೆ?
ಆರೋಗ್ಯವೇ ಭಾಗ್ಯವೆಂದು ಕಾರ್ನಿಶ್ ಮಾಡಿರುವ ಪೋಸ್ಟಿಗೆ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾರ್ಪೋರೇಟ್ ಸಂಸ್ಕೃತಿ ನಮ್ಮನ್ನು ಪೂರ್ತಿ ಬದಲಾಯಿಸಿದೆ. ಆರೋಗ್ಯವಲ್ಲ, ದುಡ್ಡೇ ಮುಖ್ಯ ಎಂಬುದನ್ನು ಕಲಿಸಿದೆ. ಇದು ನಮಗೇ ಆಶ್ಚರ್ಯ ತರುತ್ತೆ ಎಂದರೆ, ಮತ್ತೊಬ್ಬರು, ನಿನಗೆ ಯಾವುದು ಇಷ್ಟವೋ ಅದನ್ನೇ ಮಾಡು! ನೀನು ಸಂತೋಷವಾಗಿ ಮತ್ತು ಆರೋಗ್ಯವಾಗಿ ಇರುವವರೆಗೆ ಯಾವುದೇ ಜಾಬ್ ಟೈಟಲ್ಸ್ (ಹುದ್ಗೆ)ಗೂ ಅರ್ಥವಿರುವುದಿಲ್ಲ, ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯ ನೀಡಿರುವ ಕಾರ್ನಿಶ್, ಈ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದಾಳೆ.
ಮತ್ತೊಬ್ಬರು 'ಈ ಸಮಸ್ಯೆಗೆ ನಾನು ಶೇ. ನೂರರಷ್ಟು ಕನೆಕ್ಟ್ ಮಾಡಿಕೊಳ್ಳಬಲ್ಲೆ. ಕಳೆದ ವರ್ಷ ನಾನೂ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಫುಲ್ ಟೈಮ್ ಕೆಲಸ ಬಿಟ್ಟು, ಈಗ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದೇನೆ. ಇದು ನನ್ನ ಆರೋಗ್ಯವನ್ನು ಸುಧಾರಿಸಿದ್ದು, ಮುಂಚಿಗಿಂತಲೂ ತುಂಬಾ ಖುಷಿಯಾಗಿದ್ದೇನೆ,' ಎಂದು ಹೇಳಿ ಕೊಂಡಿದ್ದಾರೆ.
ಹಾಗಂಥ ಎಲ್ಲರೂ ಕಾರ್ನಿಶ್ ನಿರ್ಧಾರಕ್ಕೆ ಭೇಷ್ ಎಂದಿದ್ದಾರೆ ಎಂದು ಕೊಳ್ಳಬೇಡಿ. ಕೆಲವರು ಆರ್ಥಿಕ ದೃಷ್ಟಿಯಿಂದ ಈ ನಿರ್ಧಾರ ತಪ್ಪು, ವೇಟ್ರಸ್ ಕೆಲಸ ನಿಮ್ಮ ದುಡ್ಡಿನ ಸಮಸ್ಯೆಯನ್ನು ನೀಗಿಸುವುದಿಲ್ಲವೆಂದೂ ಹೇಳಿದ್ದಾರೆ. ಆರ್ಥಿಕ ಸ್ವಾವಲಂಬನೆಗೆ ವೇಟ್ರಸ್ ಕೆಲಸ ಉತ್ತರವಾಗುವುದಿಲ್ಲ ಎನ್ನುವುದು ಹಲವರು ಅಭಿಪ್ರಾಯ. ಅಷ್ಟೇ ಅಲ್ಲ ಮತ್ತೊಬ್ಬರು ವೇಟ್ರಸ್ ಕೆಲಸದಿಂದ ಅನುಭವಿಸಿದ ಮಾನಸಿಕ ಯಾತನೆಯನ್ನು ಹೇಳಿಕೊಂಡಿದ್ದಾರೆ. ನಾನೂ ಬೇಸಿಗೆಯಲ್ಲಿ ವೇಟ್ರೆಸ್ ಆಗಿ ಕೆಲಸ ಮಾಡಿದ್ದೆ. ಕನಿಷ್ಠ ವೇತನ ಸಿಗುತ್ತಿತ್ತು. ಅಷ್ಟೇ ಅಲ್ಲ ಕೆಲಸ ಕಡಿಮೆ ಇದ್ದಾಗ ಆ ಸಂಬಳವೂ ಕಟ್ ಆಗುತ್ತಿತ್ತು, ಮನೆಗೆ ಕಳುಹಿಸುತ್ತಿದ್ದರು. ಗ್ರಾಹಕರೊಂದಿಗಿನ ನೇರ ಸಂಪರ್ಕ ಹಾಗೂ ಕಡಿಮೆ ಸಂಬಳದಿಂದಲೇ ನಾನು ಒತ್ತಡಕ್ಕೆ ಒಳಗಾಗುತ್ತಿದ್ದೆ ಸಿಕ್ಕಾಪಟ್ಟೆ ಇನ್‌ಸೆಕ್ಯುರಿಟಿ ಇತ್ತು. ಇದೇ ನನ್ನ ಒತ್ತಡವನ್ನು ಹೆಚ್ಚಿಸುತ್ತಿತ್ತು. ಇಎಂಐ ಹಾಗೂ ಬಾಡಿಗೆ ಕಟ್ಟಲೂ ಪರದಾಡುವಂಥ ಸ್ಥಿತಿಗೆ ಬಂದಿದ್ದೆ. ಕುಟುಂಬ ಮ್ಯಾನಜ್ ಮಾಡಲು ಹೆಣಗಾಡುತ್ತಿದ್ದೆ. ಸಮಸ್ಯೆ ಇರುವುದು ಮಾಡುವ ಕೆಲಸದಲ್ಲಲ್ಲ. ಬದಲಾಗಿ ಕಾರ್ಪೋರೇಟ್ ವ್ಯವಸ್ಥೆಯಲ್ಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮಹಿಳೆಯ ವಾದವೂ ಸರಿ ಇದೆ. ದುಡ್ಡಿರುವವರಿಗೆ ಕೆಲಸವೇ ಸಮಸ್ಯೆ ಆಗಬಹುದು. ಆದರೆ, ದುಡ್ಡಿಗಾಗಿಯೇ ಕೆಲಸ ಮಾಡುವವರಿಗೆ, ಸಂಸಾರ ನಿಭಾಯಿಸುವ ಹೊಣೆ ಇರುವ ಅನೇಕರಿಗೆ ಸಂಬಳವೇ ಮುಖ್ಯವಾಗುತ್ತೆ ಹೊರತು, ಅಲ್ಲಿಯ ಕೆಲಸ ಸ್ಟ್ರೆಸ್ ಅನಿಸುವುದಿಲ್ಲ. ಆರ್ಥಿಕ ಸಮಸ್ಯೆ ತಂದೊಡ್ಡುವ ಸ್ಟ್ರೆಸ್‌ಗಿಂತ ಕಾರ್ಪೋರೇಟ್ ಜಗತ್ತಿನ ಸ್ಟ್ರೆಸ್ ಮ್ಯಾನೇಜ್ ಮಾಡೋದು ಸುಲಭ ಅನ್ನುವುದೂ ಹಲವರ ಅಭಿಪ್ರಾಯ.














Click it and Unblock the Notifications