ಸಕ್ಕರೆ ಬದಲು ಬೆಲ್ಲ, ಜೇನು ತುಪ್ಪ ಆರೋಗ್ಯಕರ ಆಯ್ಕೆಯೇ? ಗೊಂದಲಕ್ಕೆ ತೆರೆ ಎಳೆದಿದ್ದಾರೆ ತಜ್ಞ ವೈದ್ಯರು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು, ಫುಡ್ ಲೇಬಲ್‌ಗಳು ಮತ್ತು ಎಐ (AI) ಚಾಟ್‌ಬಾಟ್‌ಗಳು ನಾವು ಏನು ತಿನ್ನಬೇಕು, ಏನು ಕುಡಿಯಬೇಕು ಎಂಬುದನ್ನು ನಿರ್ಧರಿಸುವ ಮಟ್ಟಕ್ಕೆ ನಮ್ಮ ಮೇಲೆ ಪ್ರಭಾವ ಬೀರುತ್ತಿವೆ. ನಮಗೆ ಎದುರಾಗುವ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸುವ ಬದಲು ನಾವು ಪರಿಹಾರವನ್ನು ಎಐ ಬಳಿ ಕೇಳುತ್ತೇವೆ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿಯೂ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ.
ಹೆಚ್ಚುತ್ತಿದೆ ಮಿಸ್‌ಇನ್ಫ್ಲುಯೆನ್ಸರ್'ಗಳ ಹಾವಳಿ:
ಇದೀಗ 'ನೋ ಆಡೆಡ್ ಶುಗರ್, 'ಹೆಲ್ದಿ', 'ಪ್ಯೂರ್' ಎಂಬಂತಹ ಜಾಹೀರಾತುಗಳ ಭರಾಟೆಯಲ್ಲಿ ಜನ ಗೊಂದಲಕ್ಕೆ ಸಿಲುಕುತ್ತಿದ್ದಾರೆ. ಇಲ್ಲಿ ಅತಿಯಾದ ಪ್ರಚಾರಗಳು ನಿಜಾಂಶವನ್ನು ಮರೆಮಾಚುವ ಕೆಲಸ ಮಾಡುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ 'ಮಿಸ್‌ಇನ್ಫ್ಲುಯೆನ್ಸರ್'ಗಳ (Mis-influencers) ಹಾವಳಿ ಹೆಚ್ಚಾಗಿದೆ. ಒಂದು ವಿಷಯದ ಬಗ್ಗೆ ಆಳವಾದ ಜ್ಞಾನವಿಲ್ಲದಿದ್ದರೂ ವೈಜ್ಞಾನಿಕವಾಗಿ ಸಾಬೀತಾಗದ ಸಲಹೆಗಳನ್ನು ನೀಡುತ್ತಿರುತ್ತಾರೆ.
ಉದಾಹರಣೆಗೆ ಪಾಲಿಎಂಡೋಕ್ರೈನ್ ಮೆಟಾಬಾಲಿಕ್ ಓವೇರಿಯನ್ ಸಿಂಡ್ರೋಮ್ (PMOS) ಗುಣಪಡಿಸಲಾಗದ ದೀರ್ಘಕಾಲದ ಸ್ಥಿತಿಯಾಗಿದೆ ಎಂದು ವೈದ್ಯಕೀಯವಾಗಿ ದೃಢಪಟ್ಟಿದೆ. ಆದರೆ ಕೆಲವು ಕ್ಯುರೇಟೆಡ್ ಆಹಾರಕ್ರಮಗಳು ಮತ್ತು ವ್ಯಾಯಾಮದೊಂದಿಗೆ ರೋಗ ನಿವಾರಣೆ ಮಾಡಬಹುದು ಎನ್ನುವುದನ್ನು ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ಕಾಣಬಹುದು.

ಎರಡು ಆಹಾರ ಪದ್ದತಿಯ ಬಗ್ಗೆ ಚರ್ಚೆ:
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ಆಹಾರ ಪದ್ದತಿಯ ಬಗ್ಗೆ ಅತಿಯಾಗಿ ಮಾತನಾಡಿಕೊಳ್ಳಲಾಗುತ್ತದೆ. ವೈದ್ಯಕೀಯ ಲೋಕದಲ್ಲಿ ಇದು ಸಾಬೀತಾಗದೆ ಇದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಇದನ್ನು ಸತ್ಯ ಎಂದೇ ಬಿಂಬಿಸಲಾಗುತ್ತಿದೆ. ಅವುಗಳೆಂದರೆ :
1.ಬೆಲ್ಲ ಬ್ರೌನ್ ಶುಗರ್ ಮತ್ತು ಜೇನು ತುಪ್ಪ ಸಕ್ಕರೆಗೆ ಪರ್ಯಾಯ:
ಸಾಮಾಜಿಕ ಜಾಲತಾಣಗಳಲ್ಲಿ ಬಿಳಿ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲ, ಜೇನುತುಪ್ಪ ಅಥವಾ ಬ್ರೌನ್ ಶುಗರ್ ಆರೋಗ್ಯಕರ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದು ಶುದ್ದ ಸುಳ್ಳು ಎನ್ನುವುದನ್ನು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ವೈದ್ಯರ ಅಭಿಪ್ರಾಯ: ಮದರ್‌ಹುಡ್ ಆಸ್ಪತ್ರೆಯ ಸಲಹೆಗಾರರಾದ ಡಾ. ದೀಪಿಕಾ ಆಳ್ವಾ ಅವರ ಪ್ರಕಾರ, ಹಣ್ಣುಗಳು, ಧಾನ್ಯಗಳು ಮತ್ತು ಹಾಲಿನಲ್ಲಿರುವ ನೈಸರ್ಗಿಕ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಬೆಲ್ಲ, ಜೇನುತುಪ್ಪ ಮತ್ತು ಬ್ರೌನ್ ಶುಗರ್ ಕೂಡ ಆಡೆಡ್ ಶುಗರ್ (Added Sugar) ವಿಭಾಗಕ್ಕೆ ಬರುತ್ತವೆ. ಇವುಗಳಲ್ಲಿ ಕೆಲವೊಂದು ಆಂಟಿಆಕ್ಸಿಡೆಂಟ್‌ಗಳಿರಬಹುದು, ಆದರೆ ಇವು ಸಕ್ಕರೆಯ ಪರ್ಯಾಯಗಳಲ್ಲ. ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡುವುದೇ ಉತ್ತಮ ಮಾರ್ಗ ಎಂದು ಅವರು ಸಲಹೆ ನೀಡಿದ್ದಾರೆ.
2. ಪ್ರೋಟೀನ್ ಭರಿತ ಆಹಾರ ಮತ್ತು ಕಿಡ್ನಿ ಆರೋಗ್ಯ:
ಪ್ರೋಟೀನ್ ಹೆಚ್ಚು ಸೇವಿಸಿದರೆ ಕಿಡ್ನಿ ಅಥವಾ ಲಿವರ್ ಹಾಳಾಗುತ್ತದೆ ಎಂಬ ಭಯ ಜನರಲ್ಲಿ ವ್ಯಾಪಕವಾಗಿದೆ. ಆದರೆ ಇದು ಸಂಪೂರ್ಣ ಸತ್ಯವಲ್ಲ.
ತಜ್ಞರ ಸ್ಪಷ್ಟನೆ: ಝಾಂಡ್ರಾ ಹೆಲ್ತ್‌ಕೇರ್‌ನ ಮಧುಮೇಹ ಮತ್ತು ಬೊಜ್ಜು ತಜ್ಞರಾದ ಡಾ. ರಾಜೀವ್ ಕೋವಿಲ್ (ಡಯಾಬಿಟೀಸ್ ಆಂಡ್ ಒಬೇಸಿಟಿ ಸ್ಪೆಷಲಿಸ್ಟ್) ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಕಿಡ್ನಿ ಸಮಸ್ಯೆಯಿಲ್ಲದ ಆರೋಗ್ಯವಂತ ವ್ಯಕ್ತಿಗಳಲ್ಲಿ, ಹೆಚ್ಚಿನ ಪ್ರೋಟೀನ್ ಸೇವನೆಯಿಂದ ಕಿಡ್ನಿ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಕಿಡ್ನಿ ಸಮಸ್ಯೆಯಿರುವವರಿಗೆ ಮಾತ್ರ ಪ್ರೋಟೀನ್ ಮಿತಗೊಳಿಸಲು ಸೂಚಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಸ್ನಾಯುಗಳ ಆರೋಗ್ಯ, ಚಯಾಪಚಯ ಕ್ರಿಯೆ ಮತ್ತು ತೂಕ ನಿರ್ವಹಣೆಗೆ ಪ್ರೋಟೀನ್ ಅತ್ಯಗತ್ಯ. ಹಾಗಾಗಿ ಹೆಚ್ಚಿನ ತಜ್ಞರು ದಾಲ್, ಹಾಲು, ಮೊಟ್ಟೆ ಮತ್ತು ಮೀನಿನಂತಹ ನೈಸರ್ಗಿಕ ಮೂಲದ ಪ್ರೋಟೀನ್‌ಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಡಯಟ್ ಅಥವಾ ಆರೋಗ್ಯ ಸಲಹೆಗಳನ್ನು ಕುರುಡಾಗಿ ಅನುಸರಿಸುವ ಬದಲು, ವೈದ್ಯಕೀಯ ತಜ್ಞರ ಸಲಹೆ ಪಡೆಯುವುದು ಅಗತ್ಯ ಎನ್ನುವುದನ್ನು ನಾವು ಅರಿತುಕೊಳ್ಳಬೇಕು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications