₹25 ಲಕ್ಷ ಖರ್ಚು ಮಾಡಿ ಸೆರೆ ಹಿಡಿದ ಪುಂಡಾನೆ ರಾಮನಗರ ಜಿಲ್ಲೆಗೆ ವಾಪಸ್: ಹೆಚ್ಚಿದ ಆತಂಕ
ರಾಮನಗರ, ಫೆಬ್ರವರಿ 16: ಜಿಲ್ಲೆಯ ತೆಂಗಿನಕಲ್ಲು ಅರಣ್ಯ ಹಾಗೂ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು ರೈತರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಐದು ಸಾಕಾನೆಗಳನ್ನು ಬಳಸಿ ಸೆರೆಹಿಡಿಯಲಾಗಿತ್ತು. ಆದರೆ ಕಾಡಾನೆ ಮರಳಿ ಬಂದಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ. ಇತ್ತ ಅರಣ್ಯಾಧಿಕಾರಿಗಳಿಗೆ ಮತ್ತೆ ಸಮಸ್ಯೆ ಎದುರಾಗಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗದ್ದ ಎರಡು ಪುಂಡಾನೆಗಳಲ್ಲಿ ಒಂದು ಪುಂಡಾನೆ ಮತ್ತೆ ಜಿಲ್ಲೆಗೆ ವಾಪಸ್ಸು ಬಂದಿದ್ದು, ಮತ್ತೆ ತನ್ನ ಪುಂಡಾಟಿಕೆ ಮತ್ತೆ ಆರಂಭಿಸಿದೆ. ಬುಧವಾರ ಕೂಡ ಎನ್.ಆರ್.ಕಾಲೋನಿ ಬಳಿ ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ ಇದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.
ಕಾವೇರಿ ವನ್ಯಜೀವಿ ವಲಯದ ಮುತ್ತತ್ತಿ ಅರಣ್ಯ ಪ್ರದೇಶದಿಂದ ವಲಸೆ ಬಂದಿರುವ ಸುಮಾರು 25 ಆನೆಗಳ ಹಿಂಡು, ಚಿಕ್ಕ ಚಿಕ್ಕ ಗುಂಪುಗಳಾಗಿ ಜಿಲ್ಲೆಯ ತೆಂಗಿನಕಲ್ಲು ಅರಣ್ಯ ಪ್ರದೇಶ ಹಾಗೂ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು, ರೈತರ ಜಮೀನುಗಳ ಮೇಲೆ ದಾಳಿಯಿಟ್ಟು ನಿರಂತರವಾಗಿ ಉಪಟಳ ನೀಡುತ್ತಿವೆ. ಅರಣ್ಯ ಸಿಬ್ಬಂದಿ ಹಲವು ಬಾರಿ ಆನೆ ಓಡಿಸುವ ಕಾರ್ಯಚರಣೆ ನಡೆಸಿದರು ಪ್ರಯೋಜನವಾಗುತ್ತಿಲ್ಲ.

ಪುಂಡಾನೆ ಸೆರೆಗೆ 25 ಲಕ್ಷ ರೂಪಾಯಿ ವ್ಯಯಿಸಿದ್ದ ಅರಣ್ಯ ಇಲಾಖೆ
ಕಳೆದ ಹಲವು ವರ್ಷಗಳಿಂದ ರಾಮನಗರ ಹಾಗೂ ಚನ್ನಪಟ್ಟಣದ ವ್ಯಾಪ್ತಿಯ ಗಡಿಗ್ರಾಮಗಳಲ್ಲಿ ಆನೆಗಳ ಹಾವಳಿ ವಿಪರೀತವಾಗಿದ್ದು, ಆನೆಗಳ ದಾಳಿಯಿಂದ ರೈತರು ಹೈರಾಣಾಗಿದ್ದರು. ಅಲ್ಲದೇ ಬಿ.ವಿ.ಹಳ್ಳಿ ಬಳಿ ಓರ್ವ ಮಹಿಳೆ ಆನೆ ದಾಳಿಗೆ ಬಲಿಯಾಗಿದ್ದರು. ಅರಣ್ಯ ಇಲಾಖೆ ಸಾಕಾನೆಗಳನ್ನು ಬಳಸಿ ಎರಡು ಪುಂಡಾನೆಯನ್ನು ಸೆರೆ ಹಿಡಿದು ಬೇರೆ ಕಾಡಿಗೆ ಸ್ಥಳಾಂತರ ಮಾಡಿದ್ದರು.
ಕಾಡಾನೆ ಸೆರೆ ಕಾರ್ಯಚರಣೆಗೆ ದುಬಾರೆ ಆನೆ ಶಿಬಿರದಿಂದ ಪ್ರಶಾಂತ್, ಹರ್ಷ, ಲಕ್ಷ್ಮಣ ಹಾಗೂ ಮತ್ತಿಗೋಡು ಆನೆ ಶಿಬಿರದಿಂದ ಮಹಾರಾಷ್ಟ್ರ ಭೀಮ, ಗಣೇಶ ಐದು ಸಾಕಾನೆಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು , ಸಿಬ್ಬಂದಿ ಹಾಗೂ ಮಾವುತರು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆ ನಡೆಸಿ ಎರಡು ಆನೆಗಳನ್ನು ಸೆರೆ ಹಿಡಿದಿದ್ದರು. ಆನೆ ಸೆರೆ ಕಾರ್ಯಾಚರಣೆಗೆ ಸುಮಾರು 25 ಲಕ್ಷ ರೂ. ವೆಚ್ಚವಾಗಿತ್ತು ಎನ್ನಲಾಗಿದೆ.

ಅರಣ್ಯಕ್ಕೆ ಬಿಟ್ಟ ಮರುದಿನವೇ ಪ್ರಯಾಣ ಪ್ರಾರಂಭಿಸಿದ ಆನೆ
ಐದು ಸಾಕಾನೆ ಬಳಸಿಕೊಂಡು ಆಗಸ್ಟ್ 13ರಂದು ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆ ಆರಂಭಿಸಿದ ಮರುದಿನವೇ (ಆ.14 ರಂದು) ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯ ಕೆಂಪಿಕಟ್ಟೇ ಬಳಿ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಸೆರೆ ಹಿಡಿದ ಆನೆಯನ್ನು ಮಲೆಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಬಿಡಲಾಗಿತ್ತು.
ಮಲೆಮಹದೇಶ್ವರ ಬೆಟ್ಟದಿಂದ ಆಚೆ ತಮಿಳುನಾಡು ಗಡಿಪ್ರದೇಶದ ಅರಣ್ಯಕ್ಕೆ ಬಿಡಲಾಗಿದ್ದ ಆನೆ ಸುಮಾರು 150 ಕಿಲೋ ಮೀಟರ್ ಪ್ರಯಾಣ ಮಾಡಿ ಜಿಲ್ಲೆಯ ಅರಣ್ಯಕ್ಕೆ ಮರಳಿದ್ದು, ಇದೀಗ ಆನೆ ಉಪಟಳ ಹೆಚ್ಚಾಗಿದೆ. ತಮಿಳುನಾಡು ಗಡಿ ಪ್ರದೇಶದ ಅರಣ್ಯಕ್ಕೆ ಆನೆಯನ್ನು ಬಿಟ್ಟ ಮರುದಿನದಲ್ಲೇ ಆನೆ ತನ್ನ ಪ್ರಯಾಣ ಪ್ರಾರಂಭಿಸಿದೆ. ಎರಡು ತಿಂಗಳ ಹಿಂದೆಯೇ ಆಗಮಿಸಿ ಕಾವೇರಿ ನದಿ ತಟದಲ್ಲಿ ಬೀಡುಬಿಟ್ಟಿದೆ.

ಆನೆಗೆ ರೇಡಿಯೋ ಕಾಲರ್ ಅಳವಡಿಸಿದ್ದ ಅರಣ್ಯ ಇಲಾಖೆ
ರಾಮನಗರ ಮತ್ತು ಚಾಮರಾಜನಗರವನ್ನು ವಿಭಜಿಸುವ ಕಾವೇರಿ ನದಿಯ ಬಳಿ ಬೀಡುಬಿಟ್ಟಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದ ಕಾರಣ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುವವರೆಗೆ ಅಲ್ಲೇ ಕಾದು ಕುಳಿತಿದ್ದ ಆನೆ ನಂತರ ಸಾತನೂರಿನ ಮೂಲಕ ತೆಂಗಿನಕಲ್ಲು ಅರಣ್ಯ ಪ್ರವೇಶಿಸಿದೆ.
ಪುಂಡಾನೆ ಸೆರೆ ಹಿಡಿದ ನಂತರ ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿದ್ದ ಅರಣ್ಯ ಇಲಾಖೆ ಆನೆಯ ಚಲನವನದ ಮೇಲೆ ನಿಗಾ ಇಟ್ಟಿತ್ತು. ರೇಡಿಯೋ ಕಾಲರ್ ಸಹಾಯದಿಂದ ಆನೆ ಜಿಲ್ಲೆಗೆ ಮರಳುತ್ತಿರುವುದನ್ನು ಪತ್ತೆಹಚ್ಚಿದ ಅರಣ್ಯ ಇಲಾಖೆ, ನದಿ ದಾಟುವ ವೇಳೆ ಹಾಗೂ ಸಾತನೂರು ಅರಣ್ಯ ಪ್ರವೇಶಿಸುವ ವೇಳೆ ಆನೆಯನ್ನು ಹಿಮ್ಮಟಿಸಲು ಕಾರ್ಯಾಚರಣೆ ನಡೆಸಿದರಾದರೂ ,ಅರಣ್ಯ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿದ ಆನೆ ಜಿಲ್ಲೆಯ ಅರಣ್ಯ ಪ್ರದೇಶ ಪ್ರವೇಶಿಸಲು ಯಶಸ್ವಿಯಾಗಿದೆ.

ರೇಡಿಯೋ ಕಾಲರ್ ಸಹಾಯದಿಂದ ಆನೆ ಗುರುತು ಪತ್ತೆ
ಆನೆ ಜಿಲ್ಲೆಯ ಅರಣ್ಯಕ್ಕೆ ಮರಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್, "ಕಳೆದ ವರ್ಷ ಆಗಸ್ಟ್‌ನಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಬೇರೆ ಕಡೆಯ ಅರಣ್ಯಕ್ಕೆ ಬಿಟ್ಟಿದ್ದ ಮಖ್ನಾ ಆನೆ ಮರಳಿ ಬಂದಿದೆ. ರೇಡಿಯೋ ಕಾಲರ್ ಸಹಕಾರದಿಂದ ಇದು ಮಖ್ನಾ ಆನೆಯೇ ಎಂದು ದೃಢಪಟ್ಟಿದೆ. ಆನೆಯನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ.
"ಆನೆಗಳನ್ನು ಸೆರೆಹಿಡಿದು ಬೇರೆ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬಿಟ್ಟ ನಂತರ ಆನೆಗಳನು ಮರಳಿ ತಮ್ಮ ಸ್ವಸ್ಥಾನಕ್ಕೆ ಮರಳಲು ಪ್ರಯತ್ನಿಸುವುದು ಸಾಮಾನ್ಯ. ಆದರೆ, ಈ ಪ್ರಯತ್ನದಲ್ಲಿ ಎಲ್ಲ ಆನೆಗಳು ಸಫಲವಾಗುವುದಿಲ್ಲ. ಮರಳುವ ಯತ್ನದಲ್ಲಿ ಕೆಲವು ಆನೆಗಳು ದಾರಿ ತಪ್ಪಿದರೆ ಇನ್ನು ಕೆಲವು ಆನೆಗಳು ಸಾವನ್ನಪುತ್ತವೆ. ಆದರೆ ಚುರುಕು ಬುದ್ಧಿಯ ಆನೆಗಳು ಮಾತ್ರ ಎಷ್ಟೇ ಅಡೆತಡೆ ಎದುರಾದರೂ ತಮ್ಮ ಸ್ವಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗುತ್ತವೆ" ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್ ಹೇಳಿದ್ದಾರೆ.












Click it and Unblock the Notifications