ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಯಕರ್ತರ ಮೇಲೆ ಎಫ್‌ಐಆರ್‌ ದಾಖಲಿಸಿದ್ದೇಕೆ? ಚನ್ನಪಟ್ಟಣ ಪೊಲೀಸರಿಗೆ ನಿಖಿಲ್‌ ಪ್ರಶ್ನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ಚನ್ನಪಟ್ಟಣ, ಅಕ್ಟೋಬರ್‌ 02; ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕಾರಿಗೆ ಮೊಟ್ಟೆ ಮತ್ತು ಕಲ್ಲು ತೂರಿದ ಘಟನೆ ಹಿನ್ನೆಲೆಯಲ್ಲಿ ಸುಮಾರು 14 ಜನ ಜೆಡಿಎಸ್ ಕಾರ್ಯಕರ್ತರ ಮೇಲೆ ಎಪ್ಐಆರ್ ದಾಖಲು ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಬೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡಿದ್ದ ಕಾರ್ಯಕರ್ತರ ಮನೆಗಳಿಗೆ ಬೇಟಿ ನೀಡಿ ಧೈರ್ಯ ತುಂಬಿದರು.

ಡಿವೈಎಸ್‌ಪಿ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಅಲ್ಲದೇ ಪೊಲೀಸರಿಂದ ಏಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮಾಯಕರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿದರು.

ಯೋಗೇಶ್ವರ್ ಕಾರಿಗೆ ಮೊಟ್ಟೆ, ಕಲ್ಲು ಎಸೆತ; ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು

ಕ್ಷೇತ್ರದ ಶಾಸಕರಿಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಶಾಸಕರನ್ನು ಕಡೆಗಣಿಸಲಾಗಿದೆ. ಶಿಷ್ಟಾಚಾರ ಪಾಲನೆ ಮಾಡದೇ, ಕಾರ್ಯಕ್ರಮ ರದ್ದುಗೊಂಡ ಆದೇಶ ಪತ್ರ ಸಿಕ್ಕರೂ ಸಹ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಅಗತ್ಯತೆ ಸಿ.ಪಿ.ಯೋಗೇಶ್ವರ್ ‌ಅವರಿಗರ ಏನಿತ್ತು? ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾರ್ಯಕ್ರಮ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

ಪೊಲೀಸರಿಗೆ ನಿಖಿಲ್‌ ಪ್ರಶ್ನೆಗಳ ಸುರಿಮಳೆ

ಪೊಲೀಸರಿಗೆ ನಿಖಿಲ್‌ ಪ್ರಶ್ನೆಗಳ ಸುರಿಮಳೆ

ಕಾರ್ಯಕ್ರಮ ರದ್ದು ಮಾಡಿದ್ದರೂ ಕೂಡ ಯಾಕೆ ಶಂಕುಸ್ಥಾಪನೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಲು ಬಂದ ಅಮಾಯಕ ಜೆಡಿಎಸ್ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ. ಯಾವ ಅಧಾರದ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ? ಲಾಠಿಯಲ್ಲಿ ಏಟು ತಿಂದು ಆಸ್ಪತ್ರೆಯಲ್ಲಿ ದಾಖಲಾಗಿರವ ಕಾರ್ಯಕರ್ತರ ಮೇಲೆ ಎಫ್ಐಆರ್ ಹೇಗೆ ಮಾಡಿದ್ದೀರಿ? ಎಂದು ಡಿವೈಎಸ್‌ಪಿ ಅವರ ಬಳಿ ಪ್ರಶ್ನೆ ಮಾಡಿದರೆ ಉತ್ತರ ಇಲ್ಲ. ಗಾಳಿಯಲ್ಲಿ ಕಲ್ಲು ತೋರಿ ಬರುವ ವಿಡಿಯೋ ಇದೆ ಎನ್ನುತ್ತಾರೆ ಪೊಲೀಸರು. ಇದರ ಅರ್ಥ‌ ಎನು? ಗಾಳಿಯಲ್ಲಿ ಕಲ್ಲು ತೂರಿ ಬರುವ ವಿಡಿಯೋ ಇದ್ದರೆ ಯಾರನ್ನಾದರೂ ಬಂಧಿಸಬಹುದಾ? ಇದರ ಹಿಂದಿನ ಉದ್ದೇಶ ಏನು? ಯಾರ‍್ಯಾರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಉತ್ತರ ನೀಡಬೇಕಾಗುತ್ತದೆ. ನಮ್ಮ ಕಾರ್ಯಕರ್ತರರಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಾಲೂಕಿನ ರಾಂಪುರ ಗ್ರಾಮದಲ್ಲೇ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂಬ ಸರ್ಕಾರಿ ಅಧಿಕಾರಿಗಳ ಆದೇಶ ಇತ್ತು. ಆದರೂ ಕಾಮಾಗಾರಿಗೆ ಪೂಜೆ ಮಾಡಲು ಅನುವು ಮಾಡಿಕೊಟ್ಟಿದ್ದು ಏಕೆ? ಇದಕ್ಕೆ ಯಾರು ಉತ್ತರ ನೀಡುತ್ತಾರೆ? ಕ್ಷೇತ್ರದ ಶಾಸಕರಿಗೆ ಗೌರವ ಇಲ್ಲವಾ? ಪ್ರೋಟೋಕಾಲ್ ಇಲ್ಲವಾ? ಇದನ್ನೆಲ್ಲ ನಮ್ಮ ಕಾರ್ಯಕರ್ತರು ಪ್ರಶ್ನೆ ಮಾಡಬಾರದಾ? ನಿನ್ನೆ ನಡೆದ ಅಹಿತಕರ ಘಟನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇರ ಕಾರಣ ಎಂದು ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ

ಸಿಪಿವೈ ಏನ್ ಬೇಕಿದ್ದರೂ ಹೇಳಬಹುದು, ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಅವರು ರಾಜಕೀಯ ಮಾಡಲ್ಲ. ಇಲ್ಲಿ ಯಾರೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ನಾವು ಸ್ವಾಗತ ಮಾಡುತ್ತೇವೆ. ಮಾಜಿ ಸಿಎಂ ಹೆಚ್‌ಡಿಕೆ ಅವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ತಾಲೂಕು ಅಭಿವೃದ್ಧಿ ವಿಚಾರದಲ್ಲಿ ನಮ್ಮ ಕುಟುಂಬ ಹಾಗೂ ಜೆಡಿಎಸ್ ಪಕ್ಷ ಈ ಹಿಂದೆಯೂ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ವಾಸ್ತವವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನವೇ ಇರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸಿ.ಪಿ. ಯೋಗೇಶ್ವರ್‌ ಆರೋಪಕ್ಕೆ ತಿರುಗೇಟು ನೀಡಿದರು.

‌‌‌ಸಿ.ಪಿ.ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ಮತ್ತು ಕಲ್ಲು ತೂರಿದ್ದಾರೆ ಎಂದು ನಮ್ಮ ಕಾರ್ಯಕರ್ತರ ಮೇಲೆ ಆರೋಪ ಮಾಡಲು ಸಾಕ್ಷಿ ಏನಿದೆ? ಅವರ ಬೆಂಬಲಿಗರೇ ಕಲ್ಲು, ಮೊಟ್ಟೆ ಎಸೆದಿರಬಹುದಲ್ಲವಾ? ಕಾರಿನ ಮೇಲೆ ಮೊಟ್ಟೆ ಮತ್ತು ಕಲ್ಲು ಯಾರು ಎಸೆದದ್ದು ಎಂದು ಯೋಗೇಶ್ವರ್‌ ಮತ್ತು ಅವರ ಬೆಂಬಲಿಗರೇ ಆತ್ಮ ಮುಟ್ಟಿಕೊಂಡು ಪ್ರಶ್ನಿಸಿಕೊಳ್ಳಲಿ. "ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೈಗೊಂಡಿರುವ ಅಭಿವೃದ್ಧಿ ಕಾಮಾಗಾರಿಗಳನ್ನು ಕಂಡು ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಅವರಿಗೆ ಒಳಗೊಳಗೇ ಆತಂಕವಿದೆ. ಹಾಗಾಗಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ತಾಲೂಕಿನಲ್ಲಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ." ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಯೋಗೇಶ್ವರ್‌ ವಿರುದ್ಧ ಆರೋಪ‌ ಮಾಡಿದ್ದಾರೆ.

ಕಳೆದ 20 ವರ್ಷದಲ್ಲಿ ಕ್ಷೇತ್ರಕ್ಕೆ ಏನು ‌ಮಾಡಿದ್ದಾರೆ ಎಂದು ಅವರೇ ಉತ್ತರ ಕೊಡಬೇಕು. "ಕಳೆದ 20 ವರ್ಷಗಳಲ್ಲಿ ಮಾಡಿದ ಪಾಪದ ಕರ್ಮಕಾಂಡವನ್ನು ಹೆಚ್‌ಡಿಕೆ ಅವರು ತೊಳೆಯುತ್ತಿದ್ದಾರೆ. ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ತಾಲೂಕಿನ ಮೇಲಿರುವ ಬದ್ಧತೆ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳಲ್ಲಿ ಎದ್ದು ಕಾಣುತ್ತದೆ. ನಿನ್ನೆಯ ಘಟನೆ ಇಟ್ಟುಕೊಂಡು ಸಿ.ಪಿ.ಯೋಗೇಶ್ವರ್ ರಾಜಕೀಯ ಲಾಭ ಗಳಿಸಲು ಹುಚ್ಚುತನದಿಂದ ಹೊರಟಿದ್ದಾರೆ," ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಸಿ.ಪಿ.ವೈ ವಿರುದ್ಧ ನಿಖಿಲ್‌ ಕೆಂಡಾಮಂಡಲ

ಸಿ.ಪಿ.ವೈ ವಿರುದ್ಧ ನಿಖಿಲ್‌ ಕೆಂಡಾಮಂಡಲ

ಕ್ಷೇತ್ರದ ಜನರನ್ನು ಎಂದಿಗೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಿ.ಪಿ.ಯೋಗೇಶ್ವರ್‌ಗೆ ತಿಳಿಸಬಯಸುತ್ತೇನೆ. ಜನರು ಪ್ರಜ್ಞಾವಂತರಿದ್ದಾರೆ. ಯಾರು ಅಭಿವೃದ್ಧಿ ಮಾಡಿದ್ದಾರೆ ಎಂದು ತಾಲೂಕಿನ ಜನರಿಗೆ ಸ್ಪಷ್ಟ ಅರಿವು ಇದೆ. ಚನ್ನಪಟ್ಟಣದ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಸಿ.ಪಿ.ಯೋಗೇಶ್ವರ್ ಕಲಾವಿದರ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಎಂಎಲ್‌ಸಿಯೊಬ್ಬರಿಗೆ ಇಷ್ಟೊಂದು ಅನುದಾನ ಕೊಟ್ಟ ಉದಾಹರಣೆ ಇಲ್ಲ. ಇದರ ಹಿಂದಿನ ಉದ್ದೇಶ ಏನು? ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಏನು ಮಾಡಲು ಆಗಲ್ಲ. ನಮಗೆ ಜನರ ಆಶೀರ್ವಾದ ಇದೆ. ನಾವು ಮಾಡಿರುವ ಕೆಲಸವೇ ನಮಗೆ ಶ್ರೀರಕ್ಷೆ ಇದ್ದಂತೆ. ಮಾಜಿ ಪ್ರಧಾನಿ ದೇವೇಗೌಡರು ಮಾಜಿ ಸಿಎಂ ಹೆಚ್‌ಡಿಕೆ ಜೆಡಿಎಸ್​ ಪಕ್ಷ ಹೋರಾಟದ ಹಿನ್ನೆಲೆಯಲ್ಲಿ ರಾಜಕಾರಣ ಮಾಡುತ್ತಿರುವುದು ಎಂದು ಸವಾಲ್ ಹಾಕಿದರು.

ಹೋರಾಟದ ಎಚ್ಚರಿಕೆ ನೀಡಿದ ನಿಖಿಲ್‌

ಹೋರಾಟದ ಎಚ್ಚರಿಕೆ ನೀಡಿದ ನಿಖಿಲ್‌

ಜೆಡಿಎಸ್ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿರುವ ಪೊಲೀಸರಿಗೆ ಇಲ್ಲಿಗೆ ಈ ಘಟನೆಯನ್ನು ಕೈಬಿಡಲು ಮನವಿ ಮಾಡಿದ್ದೇನೆ. ಬೇರೆಯವರಂತೆ ದುರಹಂಕಾರದಿಂದ ನಡೆದುಕೊಂಡಿಲ್ಲ. ಮನವಿ ಸಲ್ಲಿಸಿ ಗೌರವಯುತವಾಗಿ ನಡೆದುಕೊಂಡಿದ್ದೇನೆ. ಇದನ್ನು ಇಲ್ಲಿಗೆ ಕೈಬಿಟ್ಡರೇ ಸರಿ, ಇಲ್ಲದಿದ್ದರೆ ಹೋರಾಟ ನಡೆಸುವುದು ನಮಗೆ ಗೊತ್ತಿದೆ. ಪೊಲೀಸರು ಪೂರ್ವಗ್ರಹ ಪೀಡಿತರಾಗಿ ವರ್ತಿಸದೆ ಪಾರದರ್ಶಕವಾಗಿ ತನಿಖೆ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ನಿನ್ನೇಯ ಘಟನೆಗೆ ಯಾರ‍್ಯಾರು ಕುಮ್ಮಕ್ಕು ನೀಡಿದ್ದಾರೆ ಅನ್ನುವುದು ತಿಳಿದಿದೆ. ಈ ಘಟನೆಗೆ ಸಿ.ಪಿ.ಯೋಗೆಶ್ವರ್‌ ಮತ್ತು ಅವರ ಬೆಂಬಲಿಗರೇ ಕಾರಣ. ಹಾಗಾಗಿ ಅವರ ಮೇಲೂ ಎಫ್ಐಆರ್ ದಾಖಲು ಮಾಡಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.

English summary
Nikhil Kumaraswamy spoke with police officers of Chennaptna regarding the FIR registered against 14 JDS workers in the taluk. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X