ರಾಮದೇವರ ಬೆಟ್ಟದಲ್ಲಿ ಪಟ್ಟಾಭಿರಾಮ ನೆಲೆನಿಂತಿದ್ದು ಹೇಗೆ ಗೊತ್ತಾ?
ರಾಮನಗರ, ಜನವರಿ 20: ಪ್ರವಾಸಿ ತಾಣವಾಗಿ, ಪವಿತ್ರ ಕ್ಷೇತ್ರವಾಗಿ ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರನ್ನೂ ಆಕರ್ಷಿಸುವ ರಾಮದೇವರ ಬೆಟ್ಟವು ರಾಮನಗರಕ್ಕೊಂದು ಮುಕುಟ ಮಣಿಯಾಗಿದ್ದು, ಶಿಲಾಬೆಟ್ಟಗಳ ಮೇಲೆ ವೀರಾಜಮಾನನಾಗಿರುವ ಪಟ್ಟಾಭಿರಾಮ ತನ್ನೆಡೆಗೆ ಬರುವ ಭಕ್ತರನ್ನು ಹರಸುತ್ತಿದ್ದಾನೆ.
ಬೃಹತ್ ಶಿಲೆಗಳನ್ನು ಜೋಡಿಸಿಟ್ಟಂತೆ ಸೃಷ್ಟಿಯಾಗಿರುವ ರಾಮದೇವರಬೆಟ್ಟವು ದೂರದಿಂದಲೇ ನೋಡುಗರನ್ನು ಸೆಳೆಯುತ್ತದೆ. ಯತಿರಾಜಗಿರಿ, ಶಿವರಾಮಗಿರಿ, ಸೋಮಗಿರಿ, ರೇವಣ್ಣಸಿದ್ದೇಶ್ವರ ಬೆಟ್ಟ, ಕೃಷ್ಣಗಿರಿ, ಸಿಡಿಕಲ್ಲು ಬೆಟ್ಟ ಮತ್ತು ಜಲಸಿದ್ದೇಶ್ವರ ಬೆಟ್ಟಗಳೆಂಬ ಏಳು ಶಿಲಾ ಬೆಟ್ಟಗಳು ಇಲ್ಲಿನ ಆಕರ್ಷಣೆಯಾಗಿದೆ.

ಇದೆಲ್ಲದಕ್ಕೆ ಕಳಸವಿಟ್ಟಂತೆ ಸಮುದ್ರಮಟ್ಟದಿಂದ 3ಸಾವಿರ ಅಡಿ ಎತ್ತರದಲ್ಲಿರುವ ರಾಮದೇವರ ಬೆಟ್ಟದ ಮೇಲೆ ಪಟ್ಟಾಭಿರಾಮ ದೇಗುಲವಿರುವುದು ವಿಶೇಷವಾಗಿದೆ. ಈ ದೇಗುಲಕ್ಕೆ ತೆರಳಲು ಬೆಟ್ಟದ ಪಾದದಿಂದ ಆರುನೂರು ಮೆಟ್ಟಿಲನ್ನು ನಿರ್ಮಿಸಲಾಗಿದೆ. ದೇಗುಲಕ್ಕೆ ಸುಮಾರು ಹತ್ತು ಶತಮಾನಗಳ ಇತಿಹಾಸವಿದೆ ಎಂದು ಹೇಳಲಾಗಿದೆ. ಪಟ್ಟದಲ್ಲಿ ಕುಳಿತ ಭಂಗಿಯಲ್ಲಿ ರಾಮನ ವಿಗ್ರಹವಿರುವುದು ಇಲ್ಲಿನ ವಿಶೇಷವಾಗಿದೆ.
ಸುಗ್ರೀವನೇ ಪ್ರತಿಷ್ಟಾಪನೆ ಮಾಡಿದ ವಿಗ್ರಹ
ಪಟ್ಟಾಭಿಷಕ್ತನಾದ ಶ್ರೀರಾಮನು ತನ್ನ ಎಡ ತೊಡೆ ಮೇಲೆ ಪತ್ನಿ ಸೀತಾಮಾತೆಯನ್ನು ಕುಳ್ಳರಿಸಿಕೊಂಡಿದ್ದು, ಬಲಭಾಗದಲ್ಲಿ ಸಹೋದರ ಲಕ್ಷ್ಮಣ ಮತ್ತು ಪಾದದ ಬಳಿ ಭಂಟ ಆಂಜನೇಯನಿದ್ದಾನೆ. ಇಂತಹ ಅದ್ಭುತ ವಿಗ್ರಹವಿರುವುದು ಈ ದೇಗುಲದ ವೈಶಿಷ್ಟ್ಯತೆಯಾಗಿದೆ. ಇಂತಹದೊಂದು ಆಕರ್ಷಕ ವಿಗ್ರಹವನ್ನು ಸುಗ್ರೀವನೇ ಪ್ರತಿಷ್ಟಾಪನೆ ಮಾಡಿದ್ದಾನೆಂಬ ಪೌರಾಣಿಕ ನಂಬಿಕೆಯೂ ಜನರಲ್ಲಿದೆ.

ಹೆಸರಿನಲ್ಲಿಯೇ ರಾಮನಿರುವ ರಾಮನಗರದ ರಾಮದೇವರ ಬೆಟ್ಟ ಶ್ರೇಣಿಗಳಲ್ಲಿ ವನವಾಸದ ಕಾಲದಲ್ಲಿ ಶ್ರೀರಾಮನು ಪತ್ನಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ಕೆಲಕಾಲ ಇಲ್ಲಿ ವಾಸ್ತವ್ಯ ಹೂಡಿದ್ದನು ಎಂದು ಹೇಳಲಾಗುತ್ತದೆ. ಅಂದು ಶ್ರೀರಾಮನು ಪಾದಸ್ಪರ್ಶ ಮಾಡಿದ ಈ ಸ್ಥಳ ಇಂದಿಗೂ ಪರಮಪುಣ್ಯ ಸ್ಥಳವಾಗಿ ಗಮನಸೆಳೆಯುತ್ತಿದೆ.
ಶ್ರೀರಾಮನ ಪಟ್ಟಾಭಿಷೇಕದ ಪ್ರತೀಕ
ಇಲ್ಲಿರುವ ರಾಮದೇಗುಲದಲ್ಲಿ ಶ್ರೀರಾಮನು ಪಟ್ಟಾಭಿರಾಮನಾಗಿ ಪ್ರತಿಷ್ಠಾಪನೆಯಾಗಿರುವ ಬಗ್ಗೆ ಪೌರಾಣಿಕ ಹಿನ್ನೆಲೆಯಿದೆ. ಅದು ಏನೆಂದರೆ ಲಂಕೆಯಲ್ಲಿ ರಾವಣ ಸೇರಿದಂತೆ ರಾಕ್ಷಸರನ್ನೆಲ್ಲ ಸಂಹಾರ ಮಾಡಿದ ಬಳಿಕ ಲಂಕೆಯಲ್ಲಿ ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ ವಾನರ ರಾಜ ಸುಗ್ರೀವ ಸೇರಿದಂತೆ ವಾನರರೊಂದಿಗೆ ಅಯೋಧ್ಯೆಗೆ ಮರಳಿದ ಶ್ರೀರಾಮನಿಗೆ ವೈಭವವದ ಪಟ್ಟಾಭಿಷೇಕ ನಡೆಯುತ್ತದೆ.

ಈ ವೇಳೆ ರಾಮನ ಎಡಭಾಗದ ತೊಡೆಯ ಮೇಲೆ ಸೀತೆ ಕುಳಿತು, ಪಕ್ಕದಲ್ಲಿ ಲಕ್ಷ್ಮಣ, ಪಾದದ ಬಳಿ ಆಂಜನೇಯ ಆಸೀನನಾದ ಭವ್ಯ ದೃಶ್ಯವೊಂದು ಸುಗ್ರೀವನ ಗಮನಸೆಳೆಯುತ್ತದೆ. ಈ ಕಲ್ಪನೆಯ ವಿಗ್ರಹವನ್ನು ಏಕ ಶಿಲೆಯಲ್ಲಿ ಮಾಡಿಸಿದ ಆತ ಅದನ್ನು ತನ್ನ ರಾಜ್ಯಕ್ಕೆ ಕೊಂಡೊಯ್ದು ಅಲ್ಲಿ ಪ್ರತಿಷ್ಠಾಪಿಸಿ ನಿತ್ಯ ಶ್ರೀರಾಮನನ್ನು ಪೂಜಿಸುವ ಬಗ್ಗೆ ಆಲೋಚಿಸುತ್ತಾನೆ. ಅದರಂತೆ ವಿಗ್ರಹವನ್ನು ನಿರ್ಮಿಸಿ ಅದನ್ನು ಅಯೋಧ್ಯೆಯಿಂದ ಕಿಷ್ಕಿಂಧೆಗೆ ಕೊಂಡೊಯ್ಯಲು ಮುಂದಾಗುತ್ತಾನೆ.
ಸುಖಾಸುರನನ್ನು ಸಂಹರಿಸಿದ ಸುಗ್ರೀವ
ಕಿಷ್ಕಿಂಧೆಗೆ ತೆರಳುವ ವೇಳೆ ಮಾರ್ಗ ಮಧ್ಯೆ ರಾಮದೇವರ ಬೆಟ್ಟದಲ್ಲಿದ್ದ ಸುಖಾಸುರ ಎಂಬ ರಾಕ್ಷಸ ಸುಗ್ರೀವನ್ನು ಅಡ್ಡಗಟ್ಟುತ್ತಾನೆ. ಈ ವೇಳೆ ಕೈಯ್ಯಲ್ಲಿದ್ದ ವಿಗ್ರಹವನ್ನು ಬೆಟ್ಟದ ಮೇಲಿಟ್ಟ ಸುಗ್ರೀವ ಗದೆ ಹಿಡಿದುಕೊಂಡು ಸುಖಾಸುರನೊಂದಿಗೆ ಯುದ್ಧಕ್ಕಿಳಿಯುತ್ತಾನೆ. ಈ ಸಂದರ್ಭ ಇಬ್ಬರಿಗೂ ಘೋರ ಯುದ್ಧ ನಡೆಯುತ್ತದೆ. ಕೊನೆಗೂ ಸುಗ್ರೀವನಿಂದ ಸುಖಾಸರ ಹತನಾಗುತ್ತಾನೆ. ದುಷ್ಟ ರಾಕ್ಷಸನನ್ನು ಸಂಹಾರ ಮಾಡಿದ ಬಳಿಕ ಸುಗ್ರೀವ ತಾನು ವಿಗ್ರಹವಿಟ್ಟ ಸ್ಥಳಕ್ಕೆ ಬಂದು ಅದನ್ನು ಮತ್ತೆ ಎತ್ತಿಕೊಂಡು ಹೊರಡಲು ತೀರ್ಮಾನಿಸುತ್ತಾನೆ.

ಸುಗ್ರೀವನಿಗೆ ಅಲ್ಲೊಂದು ಅಚ್ಚರಿ ಕಾದಿರುತ್ತದೆ. ತಾನು ಇರಿಸಿದ ವಿಗ್ರಹ ಅಲ್ಲಿಯೇ ಪ್ರತಿಷ್ಟಾಪನೆಯಾಗಿ ಬಿಡುತ್ತದೆ. ಅದನ್ನು ಮೇಲೆತ್ತಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಆತ ಮುಂದೇನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಅಶರೀರ ವಾಣಿಯೊಂದು ಮೊಳಗುತ್ತದೆ. ಅದು ವಿಗ್ರಹ ಇರಲು ಇದು ಸೂಕ್ತ ಸ್ಥಳವಾಗಿದ್ದು, ಇಲ್ಲಿಯೇ ಇಟ್ಟು ಹೋಗುವಂತೆ ಹೇಳುತ್ತದೆ. ಅದರಂತೆ ಕೊನೆಯದಾಗಿ ವಿಗ್ರಹಕ್ಕೆ ನಮಸ್ಕರಿಸಿದ ಸುಗ್ರೀವ ಅಲ್ಲಿಂದ ತನ್ನ ರಾಜ್ಯದತ್ತ ಪ್ರಯಾಣ ಬೆಳೆಸುತ್ತಾನೆ.
ರಾಮನ ಬಾಣದಿಂದ ಸೃಷ್ಟಿಯಾದ ತೀರ್ಥ
ಇವತ್ತು ರಾಮದೇಗುಲದಲ್ಲಿರುವ ವಿಗ್ರಹ ಅವತ್ತು ಸುಗ್ರೀವ ಪ್ರತಿಷ್ಠಾಪನೆ ವಿಗ್ರಹವೆಂದೇ ಜನ ನಂಬಿದ್ದಾರೆ. ದೇಗುಲದ ಮುಂಭಾಗ ಕಲ್ಯಾಣಿಯಿದ್ದು, ಇಲ್ಲಿರುವ ನೀರನ್ನು ರಾಮತೀರ್ಥ ಎಂದು ಕರೆಯಲಾಗುತ್ತದೆ. ವನವವಾಸದ ಕಾಲದಲ್ಲಿ ಇಲ್ಲಿಗೆ ರಾಮ ಬಂದ ವೇಳೆ ಜತೆಯಲ್ಲಿದ್ದ ಸೀತೆಗೆ ಬಾಯರಿಕೆಯಾಗುತ್ತದೆ. ಆಗ ನೀರಿನ ಸೆಲೆ ಎಲ್ಲೂ ಕಾಣಿಸದಿದ್ದಾಗ, ರಾಮ ಬಾಣ ಬಿಟ್ಟು ನೀರು ಬರಿಸಿ ಸೀತೆಯ ದಾಹ ನೀಗಿಸಿದಂತೆ.
ರಾಮದೇವರಬೆಟ್ಟವು ರಣಹದ್ದು ಅಭಯಾರಣ್ಯವಾಗಿದೆ. ಚಾರಣಿಗರಿಗೆ ಹುರುಪು ತುಂಬುವ ಬೆಟ್ಟವಾಗಿಯೂ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ 50 ಕಿಮೀ ದೂರದಲ್ಲಿರುವ ಈ ತಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದು ಒಂದಷ್ಟು ಸಮಯವನ್ನು ಕಳೆದು ಹೋಗುತ್ತಾರೆ. ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಟಾಟನೆಯ ಸಡಗರ ಸಂಭ್ರಮ ಮನೆ ಮಾಡಿದ್ದರೆ, ಇತ್ತ ಶ್ರೀರಾಮನ ಪಟ್ಟಾಭಿಷೇಕದ ನೆನಪನ್ನು ರಾಮದೇವರ ಬೆಟ್ಟದಲ್ಲಿ ನೆಲೆನಿಂತ ಪಟ್ಟಾಭಿರಾಮ ಮಾಡಿಕೊಡುತ್ತಿರುವುದು ಗಮನಾರ್ಹವಾಗಿದೆ.












Click it and Unblock the Notifications