ವೀಡಿಯೋ ವೈರಲ್; ದರ್ಗಾಕ್ಕೆ ನುಗ್ಗಿ ಪೂಜೆ ಸ್ವೀಕರಿಸಿದ ಬಸವ
Recommended Video
ರಾಮನಗರ, ಜನವರಿ 8: ಕೆಲ ದಿನಗಳ ಹಿಂದಷ್ಟೇ ಮಂಡ್ಯ ಜಿಲ್ಲೆಯ ಡಣ್ಣಾಯಕನಪುರ ಗ್ರಾಮದಲ್ಲಿ ಅಳುತ್ತಿದ್ದ ಮಗುವಿನ ತೊಟ್ಟಿಲು ತೂಗಿ ಮಲಗಿಸಿ ಅಚ್ಚರಿ ಮೂಡಿಸಿದ್ದ ದೈವೀ ಸ್ವರೂಪಿ ಬಸವಣ್ಣ ಮತ್ತೊಂದು ಅಚ್ಚರಿಯನ್ನು ಮೂಡಿಸಿದೆ.
ಬಳ್ಳಾರಿಯ ಕಾಂತೆಬೆನ್ನೂರು ಗ್ರಾಮದಲ್ಲಿನ ಮುಸ್ಲಿಂ ಪ್ರಾರ್ಥನಾ ಮಂದಿರಕ್ಕೆ ತೆರಳಿದ ಈ ಬಸವ ಪೂಜೆ ಪಡೆದು ಜನರಲ್ಲಿ ಆಶ್ಚರ್ಯ ಉಂಟು ಮಾಡಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಕಾಂತೆಬೆನ್ನೂರು ಗ್ರಾಮದ ಮಹಾದೇವ ಸದ್ಗುರುಗಳ ಉತ್ಸವದಲ್ಲಿ ಪಾಲ್ಗೊಂಡಿದ್ದ ರಾಮನಗರ ತಾಲ್ಲೂಕು ಕವಣಾಪುರ ಬಸವಣ್ಣ, ಉತ್ಸವದ ವೇಳೆ ಗ್ರಾಮದಲ್ಲಿನ ಪ್ರತಿ ದೇವಾಲಯಗಳಿಗೂ ತೆರಳಿ ಪೂಜೆ ಸ್ವೀಕರಿಸುತ್ತ ಮುಂದೆ ಸಾಗಿದೆ. ಇದೇ ಸಂದರ್ಭ ದಾರಿಯಲ್ಲಿದ್ದ ಮುಸ್ಲಿಂ ಪ್ರಾರ್ಥನಾ ಮಂದಿರಕ್ಕೂ ಪ್ರವೇಶಿಸಿದೆ. ಬಸವಣ್ಣ ಬಂದಿದ್ದರಿಂದ ಅಲ್ಲಿ ನೆರೆದಿದ್ದವರಿಗೆ ಕ್ಷಣಕಾಲ ಗೊಂದಲ ಉಂಟಾಗಿದೆ.
ಕೊನೆಗೆ ದರ್ಗಾದಲ್ಲಿ ನಿತ್ಯ ಪ್ರಾರ್ಥನೆ ಸಲ್ಲಿಸುವ ಮುಸ್ಲಿಂ ಧರ್ಮಗುರುಗಳು ಬಂದು ಮುಸ್ಲಿಂ ಪದ್ಧತಿಯಂತೆ ಪೂಜೆ ಸಲ್ಲಿಸಿದ್ದಾರೆ. ಪೂಜೆ ಪಡೆದ ನಂತರ ಬಸವ ದರ್ಗಾದಿಂದ ಹೊರಟಿದೆ. "ಧರ್ಮ ಬೇರೆಯಾದರೂ ದೇವರೊಬ್ಬನೆ" ಎಂಬ ಮಾತಿನಂತೆ ಬಸವಣ್ಣ ದರ್ಗಾದಲ್ಲಿ ಪೂಜೆ ಸ್ವೀಕರಿಸಿದ ವಿಸ್ಮಯ ನೋಡಿ ಮರುಳಾಗಿದ್ದಾರೆ.

ರಾಮನಗರದ ಕವಾಣಪುರ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಬಸವೇಶ್ವರ ದೇವಾಲಯದಲ್ಲಿ ಎರಡು ವರ್ಷಗಳ ಹಿಂದೆ ಬಸವನನ್ನು ಬಿಡಲಾಗಿತ್ತು. ಅಂದಿನಿಂದಲೂ ದೈವಿ ಸ್ವರೂಪಿ ಬಸಪ್ಪ ಎಂದೇ ಹೆಸರುವಾಸಿಯಾಗಿದೆ. ಜಮೀನು ವ್ಯಾಜ್ಯ, ದೇವಾಲಯಕ್ಕೆ ಪೂಜಾರಿಗಳನ್ನು ಗೊತ್ತು ಮಾಡುವುದು, ಭೀತಿ ಶಂಕೆ ಪರಿಹಾರ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ತನ್ನ ದೈವೀಶಕ್ತಿಯಿಂದ ಪರಿಹಾರ ನೀಡುತ್ತಿದೆ ಎಂದೇ ಜನರು ನಂಬಿದ್ದಾರೆ.












Click it and Unblock the Notifications