ಚನ್ನಪಟ್ಟಣದಲ್ಲಿ ಬೈಕ್ -ಮಿನಿ ಬಸ್ ಅಪಘಾತ; ಇಬ್ಬರು ಯುವಕರ ಸಾವು
ಚನ್ನಪಟ್ಟಣ, ಮಾರ್ಚ್ 2: ಬೈಕ್ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಮಂಳಾವಾರಪೇಟೆ ಸಮೀಪದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ತಾಲ್ಲೂಕಿನ ಕುಡ್ಲೂರು ಗ್ರಾಮದ ವಾಸಿಗಳಾದ ಸಚಿನ್ (22), ಪ್ರತಾಪ್ (18) ಅಪಘಾತದಲ್ಲಿ ಮೃತಪಟ್ಟವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕರು ಗ್ರಾಮದಿಂದ ಕೆಲಸಕ್ಕೆ ಹೋಗುವ ಮಾರ್ಗಮಧ್ಯೆ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ಹಾಕಿಸಿಕೊಂಡು ಹೊರಬರುವಾಗ ಅಪಘಾತ ನಡೆದಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬುಲೆಟ್ ಬೈಕಿನಲ್ಲಿ ಬೆಂಗಳೂರಿನ ಕಡೆಗೆ ತೆರಳುತಿದ್ದ ಯುವಕರಿಗೆ ಮೈಸೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬೈಕಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದು, ಈ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.












Click it and Unblock the Notifications