ನ್ಯಾಯಮಂಡಳಿಯ ನಿಯಮ ಇದೆ, ತಮಿಳುನಾಡಿಗೆ ನೀರು ಬಿಡಲ್ಲ ಎನ್ನುವುದು ಕಷ್ಟ: ರಾಮಲಿಂಗಾರೆಡ್ಡಿ
ರಾಮನಗರ, ಆಗಸ್ಟ್ 22: ಕಾವೇರಿ ನೀರಿನ ವಿಚಾರದಲ್ಲಿ ಟ್ರಿಬಿನಲ್ ಇದೆ. ನಮ್ಮಲ್ಲಿ ಸಾಕಷ್ಟು ನೀರು ಇದ್ದಿದ್ದರೆ ತಮಿಳುನಾಡಿಗೆ ಬಿಡಬಹುದಿತ್ತು. ಈಗ ನಾವು ನೀರು ಬಿಡುವುದಿಲ್ಲ ಎನ್ನುವುದು ಕೂಡ ಕಷ್ಟ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ರಾಮನಗರದ ಜಾನಪದ ಲೋಕದಲ್ಲಿ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಮಂಡಳಿಯ ನಿಯಮ ಅನುಸರಿಸಬೇಕಾಗುತ್ತದೆ. ಕಳೆದ ಬಾರಿ ಸಾಕಷ್ಟು ಮಳೆಯಾಗಿತ್ತು. ನೂರಾರು ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಯ್ತು. ಈಗ ಮಳೆ ಇಲ್ಲ, ನೀರಿನ ಕೊರತೆ ಕೂಡ ಹೆಚ್ಚಿದೆ. ಕೆಆರ್‌ಎಸ್ ಡ್ಯಾಂ ತುಂಬಿದರೆ ಯಾವುದೇ ಸಮಸ್ಯೆ ಇರಲ್ಲ. ಮಳೆ ಬರಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದರು.

ಕನಕಪುರಕ್ಕೆ ಮೆಡಿಕಲ್ ಕಾಲೇಜು ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ಡಿಸಿಎಂ, ಸಂಸದರು ಮೆಡಿಕಲ್ ಕಾಲೇಜು ಬಗ್ಗೆ ತಿರ್ಮಾನ ಮಾಡಿದ್ದಾರೆ. ಮುಂದೆ ಇನ್ನೊಂದು ಮೆಡಿಕಲ್ ಕಾಲೇಜನ್ನು ಇಲ್ಲಿಯೂ ಮಾಡೋಣ. ಮೆಡಿಕಲ್ ಕಾಲೇಜು ಜಿಲ್ಲೆಯ ಕೇಂದ್ರ ಸ್ಥಾನದಲ್ಲೇ ಇರಬೇಕು.ಆದರೆ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಅವರು ತೀರ್ಮಾ ಮಾಡಿದ್ದಾರೆ ಎಂದು ವಿವರಿಸಿದರು.
ಇನ್ನು ನಾನು ಕೂಡ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ. ಜಿಲ್ಲಾ ಕೇಂದ್ರಕ್ಕೂ ಒಂದು ಮೆಡಿಕಲ್ ಕಾಲೇಜು ಕೊಡಿ ಎನ್ನುತ್ತೇನೆ. ಮೆಡಿಕಲ್ ಕಾಲೇಜು, ಕ್ಯಾಂಪಸ್ ಒಂದೇ ಕಡೆ ಇರಬೇಕು. ಹೀಗಾಗಿ ಇನ್ನೊಂದು ಕಾಲೇಜು ಕೊಡಿ ಎಂದು ಸಿಎಂಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಲಾರಿಗಳನ್ನು ಪರಿಚಯಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ ಡಿಕ್ಕಿ ಇದೆ.

ಅದನದನು ಕಮರ್ಷಿಯಲ್ ಅವರಿಗೆ ಕೊಡುತ್ತಿದ್ದೇವು. ಅದರಿಂದ 4 ಕೋಟಿ ರೂ ಹಣ ಬರುತ್ತಿದೆ. ನಾವೇ ಮಾಡುತ್ತಿರುವುದರಿಂದ 30 ಕೋಟಿ ರೂ ಹಣ ಬರುತ್ತದೆ. ಕೆಎಸ್‌ಆರ್‌ಟಿಸಿನೇ ಬೇರೆ ಇದೇ ಬೇರೆ ಎಂದು ಹೇಳಿದರು.
ಎಸ್.ಟಿ. ಸೋಮಶೇಖರ್ ಕ್ಷೇತ್ರಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ನಮಗೂ ಕೂಡ ಹಣ ಬಿಡುಗಡೆಯಾಗಿದೆ. ಬಿಜೆಪಿ ಇದ್ದಾಗ ಕಾಂಗ್ರೆಸ್ ಶಾಸಕರಿಗೆ ಕಡಿಮೆ ಹಣ ಬಿಡುಗಡೆ ಮಾಡಿದ್ದರು. 100 ರಲ್ಲಿ 10% ಕೊಡುತ್ತಿದ್ದರು. ಈಗ ಸೋಮೇಶ್ವರ್ ಕೇಳಿದ್ದಾರೆ. ಅವರಿಗೂ ನಮ್ಮ ಸರ್ಕಾರ ಹಣ ಕೊಟ್ಟಿದ್ದಾರೆ.ಅಭಿವೃದ್ಧಿ ಮಾಡಲು ಯಾವ ತೊಂದರೆ ಇಲ್ಲ. ನಮ್ಮಲ್ಲಿ ಸ್ಕೀಮ್ಸ್ ತಂದಿದ್ದೇವೆ. ಹೀಗಾಗಿ ಅಭಿವೃದ್ಧಿ ಮಾಡಲು ಹಣ ಇಲ್ಲ ಅಂತ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಾಲ್ಕು ವರ್ಷ ಬಿಜೆಪಿ ಅವರು ಏನು ಕಡಿದು ಕಟ್ಟೆ ಹಾಕಿದ್ರೂ. ಅವರು ಏನು ಮಾಡಿಲ್ಲ ಎಂದರು.
ಇನ್ನು ನಾವು ಯೋಜನೆಗಳನ್ನು ಮಾಡುತ್ತೇವೆ ಜೊತೆಗೆ ಅಭಿವೃದ್ಧಿ ಕೂಡ. ಚುನಾವಣೆಗಳನ್ನು ಪಕ್ಷದಿಂದ ಗೆಲ್ಲಲು ಆಗುವುದಿಲ್ಲ. ಪಕ್ಷದ ಜೊತೆ ವ್ಯಕ್ತಿತ್ವ ಬೇಕು. ಕಾಂಗ್ರೆಸ್‌ಗೆ 1999 ರಲ್ಲಿ 166 ಸ್ಥಾನ ಬಂದಿತ್ತು. ಅದನ್ನು ಬಿಟ್ಟರೆ 135 ಸ್ಥಾನ ಬಂದಿರುವುದೇ ಈಗ. ಪಕ್ಷ ಹಾಗೂ ವ್ಯಕ್ತಿತ್ವ ಇದ್ದರೆ ಮಾತ್ರ ಗೆಲ್ಲಲು ಸಾಧ್ಯ ಎಂದು ಹೇಳಿದರು.












Click it and Unblock the Notifications