ರಾಮನಗರ: ಇಂಜೆಕ್ಷನ್ ನೀಡಿದ ಗಂಟೆಯೊಳಗೆ ಮಗು ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ರಾಮನಗರ, ಫೆಬ್ರವರಿ 13: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂಜೆಕ್ಷನ್ ನೀಡಿದ ಒಂದು ಗಂಟೆಯಲ್ಲಿ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ನಡೆದಿದೆ. ಒಂದೂವರೆ ತಿಂಗಳ ಗಂಡು ಮಗುವನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೈರಾಪಟ್ಟಣ ಗ್ರಾಮದ ಮೋಹನ ಹಾಗೂ ಸ್ಪೂರ್ತಿ ದಂಪತಿಯ ಮಗುವಿಗೆ ದೊಡ್ಡಮಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು (ಫೆಬ್ರವರಿ 13) ರಂದು ಇಂಜೆಕ್ಷನ್ ನೀಡಲಾಗಿತ್ತು. ಇಂಜೆಕ್ಷನ್ ಕೊಟ್ಟ ಒಂದು ಗಂಟೆಯಲ್ಲಿ ಬಳಿಕ ಮಗು ತನ್ನ ಚಟುವಟಿಕೆ ನಿಲ್ಲಿಸಿದ್ದು, ಮಲಗಿದಲ್ಲೇ ಕೊನೆಯುಸಿರೆಳೆದಿದೆ. ವ್ಯಾಕ್ಸಿನೇಷನ್ ಹಾಕಿಸಿದ್ದಕ್ಕೆ ಮಗು ಸಾವನಪ್ಪಿದೆ ಎಂದು ಮೃತ ಮಗುವಿನ ಪೋಷಕರು ಆರೋಪಿಸಿದ್ದಾರೆ.

ಕಂದಮ್ಮನ ಸಾವಿಗೆ ವೈದ್ಯರೇ ಕಾರಣ- ಪೋಷಕರ ಗಂಭೀರ ಆರೋಪ
ಮೃತ ಮಗುವಿಗೆ ವ್ಯಾಕ್ಸಿನೇಷನ್ ನೀಡಿದ ಬಳಿಕ ದೊಡ್ಡಮಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತರ ಹತ್ತಕ್ಕೂ ಹೆಚ್ಚು ಮಕ್ಕಳಿಗೆ ಇಂಜೆಕ್ಷನ್ ನೀಡಲಾಗಿದೆ. ಉಳಿದ ಮಕ್ಕಳು ಆರೋಗ್ಯವಾಗಿದ್ದು, ಈ ಮಗುವಿಗೆ ಯಾಕೆ ಹೀಗಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ. ಆದರೆ ಒಂದೂವರೆ ವರ್ಷದ ಕಂದಮ್ಮನ ಸಾವಿಗೆ ವೈದ್ಯರೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಮಗನನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಚನ್ನಪಟ್ಟಣ ಗ್ರಾಮಾಂತರ ಠಾಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗು ಸಾವಿನ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. ಇನ್ನು ಮಗುವಿನ ಮೃತದೇಹ ಮರಣೋತ್ತರ ಪರೀಕ್ಷೆ ಬಳಿಕ ಮಗುವಿನ ಸಾವಿಗೆ ನಿಖರವಾದ ಕಾರಣ ತಿಳಿದು ಬರಬೇಕಿದೆ. ಆದರೆ ಪೋಷಕರು ಶವ ಪರೀಕ್ಷೆ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ ಸ್ಥಳೀಯ ಆರೋಗ್ಯ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಲು ಮೃತ ಮಗುವಿನ ಪೋಷಕರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.












Click it and Unblock the Notifications