ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ
ರಾಮನಗರ ಡಿಸೆಂಬರ್1: ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಥಯಾತ್ರೆ ಹೋದ ಕಡೆಯಲ್ಲ ಅಭೂತಪೂರ್ವ ಜನ ಬೆಂಬಲ ದೊರೆಯುತ್ತಿದೆ. ಹಾಗಾಗಿ ನನಗೆ ಸಂಪೂರ್ಣ ನಂಬಿಕೆ ಇದೆ. ಮಂದಿನ ಬಾರಿ ಜೆಡಿಎಸ್ ಪಕ್ಷ ಅಧಿಕಾರ ಬರುತ್ತದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದ್ದಾರೆ.
ಅನಿತಾ ಕುಮಾರಸ್ವಾಮಿ, ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿಯ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ನೂತನ ಏಳು ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ಸಲ್ಲಿಸಿದರು. ಬಳಿಕ ಪಟ್ಟಣ ಪಂಚಾಯತಿ ವತಿಯಿಂದ ಕಸ ವಿಲೇವಾರಿ ಮಾಡಲು ಹೊಸ ವಾಹನಗಳನ್ನು ಲೋಕಾರ್ಪಣೆ ಮಾಡಿದರು. ಚಿಕ್ಕಬೆಜ್ಜಲಹಟ್ಟಿ ಗ್ರಾಮದಲ್ಲಿ ನೂತನ ಮಾದರಿ ಬಸ್ ತಂಗುದಾಣವನ್ನು ಲೋಕಾರ್ಪಣೆಗೊಳಿಸಿದರು.
Breaking; ಬಿಜೆಪಿ ಬಂದ ಮೇಲೆ ಬೆಳಗಾವಿಯಲ್ಲಿ ಗೊಂದಲ ಹೆಚ್ಚುತ್ತಿದೆ
ರಾಮನಗರದ ವಿಧಾನ ಸಭಾಕ್ಷೇತ್ರದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಗೆ ಎಲ್ಲೆಡೆ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ. ಆರೋಗ್ಯ, ಶಿಕ್ಷಣ, ವಸತಿ, ಮಹಿಳೆಯರು, ರೈತರಿಗೆ ಅನುಕೂಲ ಕಲ್ಪಿಸುವುದು, ಹಾಗೂ ಯುವಕರಿಗೆ ಉದ್ಯೋಗ ನೀಡುವುದು ನಮ್ಮ ಪಂಚರತ್ನ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಕುಮಾರಸ್ವಾಮಿ ಅಭಿವೃದ್ಧಿಯ ರೂಪರೇಷೆಗಳನ್ನು ಮತದಾರಿಗೆ ತಿಳಿಸುತ್ತಿದ್ದಾರೆ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆಯ ಮೂಲಕ ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದರೆ, ರಾಜ್ಯದಲ್ಲಿ ತಮ್ಮ ಕನಸಿನ ಪಂಚರತ್ನ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ರೂಪರೇಷೆಗಳನ್ನು ಮತದಾರಿಗೆ ತಿಳಿಸುತ್ತಿದ್ದಾರೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಡಿಸೆಂಬರ್19 ಮತ್ತು 20 ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ನಂತರ ತುಮಕೂರು ಜಿಲ್ಲೆ ಪ್ರವಾಸ ಮುಗಿಸಿ ಡಿಸೆಂಬರ್ 15ಕ್ಕೆ ಪಂಚರತ್ನ ರಥ ಮಾಗಡಿ ಮೂಲಕ ರಾಮನಗರ ಜಿಲ್ಲೆಯನ್ನು ಪ್ರವೇಶ ಮಾಡಲಿದೆ. ಡಿಸೆಂಬರ್ 15ರಂದು ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸುವ ರಥ ಡಿಸೆಂಬರ್16 ರಾಮನಗರ, ಡಿಸೆಂಬರ್17 ನೂತನ ತಾಲೂಕು ಹರೋಹಳ್ಳಿ ವ್ಯಾಪ್ತಿಯಲ್ಲಿ ಯಾತ್ರೆ ನಡೆಯಲಿದೆ. ಡಿಸೆಂಬರ್ 18 ಕನಕಪುರ ತಾಲೂಕಿನಲ್ಲಿ ಯಾತ್ರೆ ನಡೆಯಲಿದೆ. ಡಿಸೆಂಬರ್19 ಮತ್ತು 20 ಎರಡು ದಿನ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮದಿನವಾದ ಡಿಸೆಂಬರ್ 16 ರಂದು ರಾಮನಗರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಅವರ ಹುಟ್ಟುಹಬ್ಬದ ಸಂಭ್ರಮ ಜಿಲ್ಲೆಯಲ್ಲಿ ಇಮ್ಮಡಿಯಾಗಲಿದೆ. ಕುಮಾರಸ್ವಾಮಿ ಜನ್ಮದಿನದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣ ಸೇರಿದಂತೆ ಬೃಹತ್ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀನಿವಾಸ ಕಲ್ಯಾಣ ಪೂಜೆ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಕ್ಷೇತ್ರದ ಪ್ರತಿ ಗ್ರಾಮಗಳಿಂದಲೂ ಜನರನ್ನು ಕರೆತರಲಾಗುವುದು. ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಾಹನಗಳ ವ್ಯವಸ್ಥೆಯನ್ನೂ ಸಹ ಮಾಡಿಸಲಾಗುವುದು. ಬರುವವರೆಲ್ಲರಿಗೂ ಹೋಳಿಗೆ ಊಟ ಬಡಿಸುವ ಮೂಲಕ ಅದ್ಧೂರಿಯಾಗಿ ಆಚರಣೆಗೆ ತೀರ್ಮಾನಿಸಲಾಗಿದ್ದು, ಇದಕ್ಕೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಕೈಜೋಡಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

ಪಂಚರತ್ನ ರಥಯಾತ್ರೆಯಲ್ಲಿ ಬಹುಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ ಸಾಧ್ಯತೆ
ಮಾತು ಮುಂದುವರಿಸಿದ ಅವರು, ಡಿಸೆಂಬರ್ 16 ರಂದು ರಾಮನಗರ ಕ್ಷೇತ್ರ ವ್ಯಾಪ್ತಿಯ ಕೈಲಾಂಚ ಹೋಬಳಿ, ಕಸಬಾ ಹೋಬಳಿ ಹಾಗೂ ನಗರ ವ್ಯಾಪ್ತಿಯಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ. ಆನಂತರ ಸಂಜೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಶ್ರೀನಿವಾಸ ಕಲ್ಯಾಣ ಪೂಜಾ ಕೈಂಕರ್ಯಗಳಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು, ಕುಮಾರಸ್ವಾಮಿ ಅವರ ಪತ್ನಿ ರಾಮನಗರ ಕ್ಷೇತ್ರದ ಶಾಸಕರಾದ ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಮನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ.