ವರಮಹಾಲಕ್ಷ್ಮಿ ಹಬ್ಬದಂದೇ ಮಹಿಳಾ ವಿಶ್ರಾಂತಿ ಕೊಠಡಿ ಉದ್ಘಾಟನೆ: ರಾಮನಗರ ಜಿ.ಪಂ ಕಾರ್ಯಕ್ಕೆ ಮೆಚ್ಚುಗೆ
ರಾಮನಗರ, ಆಗಸ್ಟ್ 20: ಉದ್ಯೋಗ ನಿರತ ಮಹಿಳೆಯರಿಗಾಗಿ ಶಿಶು ಪಾಲನೆ ಮತ್ತು ಮಹಿಳಾ ವಿಶ್ರಾಂತಿ ಕೊಠಡಿಯನ್ನು ಸ್ಥಾಪಿಸುವ ಮೂಲಕ ರಾಮನಗರ ಜಿಲ್ಲಾ ಪಂಚಾಯತ್ ಮತ್ತು ಮಹಿಳಾ ಸಬಲೀಕರಣ ಇಲಾಖೆ ಮುಂದಾಗಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಮನಗರ ಜಿಲ್ಲಾ ಪಂಚಾಯತ್ ಭವನದಲ್ಲಿ ಉದ್ಯೋಗನಿರತ ಮಹಿಳೆಯರಿಗಾಗಿ ಶಿಶು ಪಾಲನೆ ಮತ್ತು ಮಹಿಳಾ ವಿಶ್ರಾಂತಿ ಕೊಠಡಿಯನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಮೇಶ್ ಉದ್ಘಾಟಿಸಿದರು. ಕಾರ್ಯಕ್ರಮದ ನಂತರ ಮಾತನಾಡಿದ ಅವರು, "ಉದ್ಯೋಗ ನಿರತ ಮಹಿಳೆಯರಿಗೆ ಮಾನಸಿಕ ಮತ್ತು ಬೌದ್ಧಿಕ ಕಾರ್ಯಕ್ಷಮತೆಗೆ ಪೂರಕವಾಗಿದೆ," ಎಂದರು.
"ಸರ್ಕಾರಿ ಉದ್ಯೋಗ ನಿರತ ಮಹಿಳೆಯರಿಗೆ ಮಗು ಹುಟ್ಟಿದ ನಂತರ ಶಿಶು ಪಾಲನೆಗೆ ಸರ್ಕಾರ 6 ತಿಂಗಳ ಮಾತ್ರ ರಜೆ ಅನುಮತಿ ನೀಡುತ್ತದೆ. ಅದರೆ ಮಗುವಿಗೆ 1 ವರ್ಷಕ್ಕಿಂತ ಹೆಚ್ಚು ಕಾಲ ಹಾಲುಣಿಸುವುದು ಅವಶ್ಯಕತೆ ಇರುತ್ತದೆ. ಮಗು ನೋಡಿಕೊಳ್ಳಲು ಯಾರು ಇಲ್ಲದಿರುವ ಸಮಸ್ಯೆಗಳು ಮಹಿಳೆಯರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಸಂಕಷ್ಟ ದೂರ ಮಾಡಲು ಶಿಶುಪಾಲನ ಹಾಗೂ ಮಹಿಳಾ ವಿಶ್ರಾಂತಿ ಕೊಠಡಿ ವ್ಯವಸ್ಥೆ ತುಂಬ ಅವಶ್ಯಕವಿದೆ," ಎಂದು ಹೇಳಿದರು.

"ಜಿಲ್ಲಾ ಪಂಚಾಯತ್ ಭವನದಲ್ಲಿ ಸುಮಾರು ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಇಲಾಖೆಯಲ್ಲೂ ಒಬ್ಬ ಮಹಿಳಾ ಮೇಲ್ವಿಚಾರಕರನ್ನು ನೇಮಿಸಿ, ಇಲಾಖೆಯ ಮಹಿಳಾ ಸಿಬ್ಬಂದಿಗಳು ಅವರ ಹತ್ತಿರ ತಮ್ಮ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಮಹಿಳಾ ಆರೋಗ್ಯ ಸಿಬ್ಬಂದಿಯನ್ನು ನೇಮಿಸುವಂತೆ," ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಮೇಶ್ ಸಲಹೆ ನೀಡಿದರು.
"ಇನ್ನು ಕಾರ್ಯಕ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಿ.ವಿ. ರಾಮನ್ ಮಾತನಾಡಿ, ಜಿಲ್ಲಾ ಪಂಚಾಯತ್ ಭವನದಲ್ಲಿರುವ ಹಲವಾರು ಇಲಾಖೆಗಳಲ್ಲಿ ಸುಮಾರು 80 ಮಹಿಳಾ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಅವರ ರಕ್ಷಣೆ ಹಾಗೂ ಮಕ್ಕಳ ಪಾಲನೆಯ ದೃಷ್ಟಿಯಿಂದ ಜಿಲ್ಲಾ ಪಂಚಾಯತಿ ಇಲಾಖೆ ಮಹಿಳಾ ವಿಶ್ರಾಂತಿ ಕೂಠಡಿ ಸ್ಥಾಪಿಸಲಾಗಿದೆ," ಎಂದು ತಿಳಿಸಿದರು.
"ಉದ್ಯೋಗ ನಿರತ ಮಹಿಳೆಯರು ಕೆಲಸದ ಒತ್ತಡದಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ವಿಶ್ರಾಂತಿ ಇರುವುದಿಲ್ಲ. ಕೆಲಸದ ನಡುವೆ ಮಧ್ಯಾಹ್ನದ ಸಮಯದಲ್ಲಿ ವಿಶ್ರಾಂತಿ ಪಡೆಯಲು, ಅವರಲ್ಲಿರುವ ಸಮಸ್ಯೆಗಳನ್ನು ಒಬ್ಬರನೊಬ್ಬರು ಚರ್ಚಿಸಿ ಬಗೆಹರಿಸಿಕೊಳ್ಳಲು, ವಿವಿಧ ಇಲಾಖೆಯ ನಡುವೆ ಹೊಂದಾಣಿಕೆ ಹಾಗೂ ಮಹಿಳೆಯರಲ್ಲಿ ಒಗ್ಗಟ್ಟು ಮೂಡುತ್ತದೆ, ಇವೆಲ್ಲವು ಮಹಿಳೆಯರ ಸಬಲೀಕರಣಕ್ಕೆ ಕಾರಣವಾಗುತ್ತದೆ," ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಿ.ವಿ. ರಾಮನ್ ಪ್ರತಿಪಾದಿಸಿದರು.

Recommended Video
ವಿಶ್ರಾಂತಿ ಕೊಠಡಿಯಲ್ಲಿ ಮಹಿಳೆಯರು ಸಮಯ ಕಳೆಯಲು ಪುಸ್ತಕಗಳು, ಮಾಗಜಿನ್, ಪತ್ರಿಕೆ ವ್ಯವಸ್ಥೆ ಮಾಡಲಾಗಿದ್ದು, ವಿಶ್ರಾಂತಿ ಸಮಯದಲ್ಲಿ ಪುಸ್ತಕ ಓದಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ ಅವಕಾಶ ಕೂಡ ಇದೆ. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಗಾಯತ್ರಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications