ರಾಮನಗರ : ಅನಿತಾ ಕುಮಾರಸ್ವಾಮಿ ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ
ರಾಮನಗರ, ಅಕ್ಟೋಬರ್ 11 : ರಾಮನಗರ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಉಪ ಚುನಾವಣೆಯನ್ನು ಎದುರಿಸಲಿವೆ. ಬಿಜೆಪಿ ಇನ್ನು ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಉಪ ಚುನಾವಣೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಜೆಡಿಎಸ್ ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಮಂಗಳವಾರ ರಾಮನಗರ ತಾಲೂಕು ಘಟಕದ ಮುಖಂಡರು ಅನಿತಾ ಕುಮಾರಸ್ವಾಮಿ ಅವರ ಹೆಸರು ಘೋಷಣೆ ಮಾಡಿದ್ದರು. ಆದರೆ, ಕೆಲವು ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ, ದೇವೇಗೌಡರು ಬುಧವಾರ ಮತ್ತೊಮ್ಮೆ ಸಭೆ ನಡೆಸಿದರು.
ನವೆಂಬರ್ 3ರಂದು ರಾಮನಗರ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಸಿ.ಎಂ.ಲಿಂಗಪ್ಪ ಪುತ್ರ ಎಲ್.ಚಂದ್ರಶೇಖರ್ ಅಭ್ಯರ್ಥಿಯಾಗುವುದು ಖಚಿತವಾಗಿದೆ....

ದೇವೇಗೌಡರ ಸಭೆ
ರಾಮನಗರ ಜಿಲ್ಲಾ ಪಕ್ಷದ ಮುಖಂಡರ ಜೊತೆ ಎಚ್.ಡಿ.ದೇವೇಗೌಡರು ಜೆ.ಪಿ.ಭವನದಲ್ಲಿ ಬುಧವಾರ ರಾತ್ರಿ ಸಭೆ ನಡೆಸಿದರು. ಸಭೆಯ ಬಳಿಕ ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲು ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ, ಸಭೆ ನಡೆಸಿ ದೇವೇಗೌಡರು ಅಭ್ಯರ್ಥಿ ಘೋಷಣೆ ಮಾಡಿದರು.

ಅಕ್ಟೋಬರ್ 15ರಂದು ನಾಮಪತ್ರ
ನವೆಂಬರ್ 3ರಂದು ನಡೆಯುವ ರಾಮನಗರ ಉಪ ಚುನಾವಣೆಗೆ ಈಗಾಗಲೇ ಅಧಿಸೂಚನೆ ಪ್ರಕಟವಾಗಿದೆ. ಅಕ್ಟೋಬರ್ 15ರಂದು ಅನಿತಾ ಕುಮಾರಸ್ವಾಮಿ ಅವರು ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಆಪರೇಷನ್ ಕಮಲ
ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್.ಚಂದ್ರಶೇಖರ್ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಸೇರಿದ್ದಾರೆ. ಬುಧವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಎಲ್.ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ರಾಮನಗರ ಉಪ ಚುನಾವಣೆಗೆ ಅವರು ಬಿಜೆಪಿ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಈ ಬಗ್ಗೆ ಪಕ್ಷ ಅಧಿಕೃತ ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ.

ಕುಮಾರಸ್ವಾಮಿ ಅವರ ತವರು ಕ್ಷೇತ್ರ
ರಾಮನಗರ ವಿಧಾನಸಭಾ ಕ್ಷೇತ್ರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರ. ಅವರ ರಾಜೀನಾಮೆಯಿಂದಾಗಿಯೇ ಈಗ ಉಪ ಚುನಾವಣೆ ಎದುರಾಗಿದೆ. 2008, 2013 ಮತ್ತು 2018ರ ಚುನಾವಣೆಯಲ್ಲಿ ಸತತವಾಗಿ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
2018ರ ಚುನಾವಣೆಯಲ್ಲಿ 92,626 ಮತಗಳನ್ನು ಪಡೆದು ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಆದರೆ, ಚನ್ನಪಟ್ಟಣದಲ್ಲೂ ಅವರು ಸ್ಪರ್ಧಿಸಿದ್ದು, ಗೆಲುವು ಸಾಧಿಸಿದ್ದರು. ಆದ್ದರಿಂದ, ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.












Click it and Unblock the Notifications