ಡಿಕೆ ಶಿವಕುಮಾರ್ ಬಂಧನಕ್ಕೆ ಖಂಡನೆ: ರಾಮನಗರದಲ್ಲಿ ಬಂದ್ ಶುರು
ರಾಮನಗರ, ಸೆಪ್ಟೆಂಬರ್ 5: ಡಿಕೆ ಶಿವಕುಮಾರ್ ಅವರ ಬಂಧನ ವಿರೋಧಿಸಿ ರಾಮನಗರ ಜಿಲ್ಲೆಯ ಬಂದ್ ಆರಂಭವಾಗಿದೆ. ಜಿಲ್ಲಾ ಕಾಂಗ್ರೆಸ್ ಕರೆ ನೀಡಿರುವ ಬಂದ್‌ಗೆ ಗುರುವಾರ ಬೆಳಿಗ್ಗೆಯಿಂದಲೇ ಬೆಂಬಲ ವ್ಯಕ್ತವಾಗಿದೆ.
ಯಾವುದೇ ಹಿಂಸಾಚಾರಕ್ಕೆ ಇಳಿಯದಂತೆ ಶಾಂತಿಯುತ ಪ್ರತಿಭಟನೆ ನಡೆಸಲು ಎಸ್‌ಪಿ ಅನುಪಮ್ ಅಗರವಾಲ್ ಮನವಿ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ಮೂವರು ಐಪಿಎಸ್, ಹತ್ತು ಡಿವೈಎಸ್‌ಪಿ, ಮೂವತ್ತು ಇನ್‌ಸ್ಪೆಕ್ಟರ್, 15 ಕೆಎಸ್‌ಆರ್‌ಪಿ, 21 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನೆ ತೀವ್ರವಾದರೆ ಭದ್ರತೆ ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ರಾಮನಗರ ಜಿಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಬಂದ್‌ಗೆ ಕರೆ ನೀಡಿವೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಳಿಗ್ಗೆ ವಾಹನ ಸಂಚಾರ ಎಂದಿನಂತೆಯೇ ನಡೆಯುತ್ತಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬೆಂಕಿ ಹಚ್ಚಿದ ಘಟನೆಗಳು ಬುಧವಾರ ನಡೆದಿರುವುದರಿಂದ ಗುರುವಾರ ಸಾರಿಗೆ ವಾಹನಗಳ ಓಡಾಟ ಕಡಿಮೆಯಾಗಿದೆ. ಗ್ರಾಮಾಂತರ ಪ್ರದೇಶಗಳಿಗೆ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಜಿಲ್ಲೆಯ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಬೆಳಿಗ್ಗೆ 9 ಗಂಟೆಗೆ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ಆರಂಭವಾಗಲಿದೆ. ಐಜೂರು ವೃತ್ತದವರೆಗೂ ಮೆರವಣಿಗೆ ನಡೆಯಲಿದೆ. ಬಳಿಕ ಬೈಕ್ ರಾಲಿ ನಡೆಸಲಾಗುತ್ತದೆ. 11 ಗಂಟೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ನಡೆಯಲಿದೆ.












Click it and Unblock the Notifications