NEET: ಸಿಜೆಪಿ ವಿಷಯದಲ್ಲಿ ಕೊನೆಗೂ ಮೌನ ಮುರಿದ ತಮಿಳುನಾಡು ಸಿಎಂ; ರಾಹುಲ್ ಗಾಂಧಿ ಬಂಧನದ ಬಗ್ಗೆ ಹೇಳಿದ್ದೇನು ?!
NEET: ದೇಶದಲ್ಲಿ ಈಚೆಗೆ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೀಗ ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಕೊನೆಗೂ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಮೌನ ಮುರಿದಿದ್ದಾರೆ. ಕೊನೆಗೂ ಈ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ದೆಹಲಿಯಲ್ಲಿ ನಡೆದ ಯುವ ಸಮೂಹದ ಪ್ರತಿಭಟನೆಯನ್ನು ಬೆಂಬಲಿಸಿ ಕದನಕ್ಕಿಳಿದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರ ಬಂಧನವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರದ ಈ ಕ್ರಮಗಳು ಖಂಡನೀಯ ಎಂದು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಹೇಳಿದ್ದಾರೆ.
ಜುಲೈ 21ರ ಮಂಗಳವಾರ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಯನ್ನು ಖಂಡಿಸಿ, ವಿರೋಧ ಪಕ್ಷಗಳಿಂದ ಇಂದು ಸಂಸತ್ತಿನ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಮಿಳುನಾಡಿನ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಲಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಹೇಳಿದ್ದಾರೆ. ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ, ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂಬುದು ಟಿವಿಕೆಯ ರಾಜಿಯಾಗದ ನಿಲುವಾಗಿದೆ. ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಬಳಸಿಕೊಂಡು ಮತ ರಾಜಕೀಯ ಮಾಡಲು ನಾವು ಎಂದಿಗೂ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ, ಇದು ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲದೆ ಅವರ ಕುಟುಂಬಗಳ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಮುಂದುವರಿದು, ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕಾದರೆ ಶಿಕ್ಷಣವನ್ನು ಮೊದಲು ರಾಜ್ಯ ಪಟ್ಟಿಗೆ ವರ್ಗಾಯಿಸಬೇಕು. ಅದೇ ಶಾಶ್ವತ ಪರಿಹಾರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಅಥವಾ ಕಾರ್ಯವಿಧಾನದ ಅಡೆತಡೆಗಳಿದ್ದರೆ, ಅವು ಪರಿಹಾರವಾಗುವವರೆಗೆ ಮಧ್ಯಂತರ ಕ್ರಮವಾಗಿ ವಿಶೇಷ ಸಮವರ್ತಿ ಪಟ್ಟಿಯನ್ನು (Concurrent List) ರಚಿಸಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಬೇಕು. ಅದರ ಮೂಲಕ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸೇರಿದಂತೆ ಸಂಬಂಧಿತ ವಿಷಯಗಳಲ್ಲಿ ರಾಜ್ಯಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಶಾಶ್ವತ ಹಾಗೂ ಮಧ್ಯಂತರ ಪರಿಹಾರದ ಕುರಿತು ಇದೇ ನಮ್ಮ ನಿಲುವು. ಪಕ್ಷ ಸ್ಥಾಪನೆಯಾದ ಸಂದರ್ಭದಲ್ಲಿ ನಡೆದ ಶಿಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ನಮ್ಮ ಪಕ್ಷದ ಪರವಾಗಿ ಇದೇ ವಿಷಯವನ್ನು ನಾವು ಸ್ಪಷ್ಟವಾಗಿ ಒತ್ತಿ ಹೇಳಿದ್ದೇವೆ.
ಕೇಂದ್ರ ಸರ್ಕಾರವು ನಮ್ಮ ಜನರ ಭಾವನೆಗಳನ್ನು ಮತ್ತು ವಿದ್ಯಾರ್ಥಿಗಳ ಭಾವನೆಗಳನ್ನು ಗೌರವಿಸಬೇಕು. ಇದರ ಅಭಿವ್ಯಕ್ತಿಯಾಗಿ, ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಈ ಸಮಸ್ಯೆಗೆ ಇದೊಂದೇ ಪರಿಹಾರ ಎಂದು ನಾವು ಪುನರುಚ್ಚರಿಸುತ್ತೇವೆ. ನೀಟ್ ಅಕ್ರಮಗಳನ್ನು ವಿರೋಧಿಸಿದ ಯುವಕರನ್ನು ಬೆಂಬಲಿಸಿ ಪ್ರತಿಭಟನೆ ಮಾಡಿದ ನಾಯಕರ ವಿರುದ್ಧ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ಕ್ರಮಗಳು "ಪ್ರಜಾಪ್ರಭುತ್ವ ವಿರೋಧಿ" ಮತ್ತು ತೀವ್ರವಾಗಿ ವಿಷಾದನೀಯ ಎಂದು ವಿಜಯ್ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಅವರು ಹಂಚಿಕೊಂಡಿದ್ದಾರೆ. ಶಿಕ್ಷಣ ಮತ್ತು ವೈದ್ಯಕೀಯ ಪ್ರವೇಶ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸಿ. ಜೋಸೆಫ್ ವಿಜಯ್ ಎರಡು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
NEET: ಟಿವಿಕೆ ನೀಡಿದ ಪ್ರಮುಖ ಎರಡು ಸಲಹೆಗಳು
1. ಶಾಶ್ವತ ಪರಿಹಾರ (ರಾಜ್ಯ ಪಟ್ಟಿ):
ಶಿಕ್ಷಣವನ್ನು ರಾಜ್ಯ ಪಟ್ಟಿಗೆ ವರ್ಗಾಯಿಸಿ, ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳೇ ತೆಗೆದುಕೊಳ್ಳುವಂತೆ ಅಧಿಕಾರ ನೀಡಬೇಕು.
2. ಮಧ್ಯಂತರ ಪರಿಹಾರ (ವಿಶೇಷ ಸಮವರ್ತಿ ಪಟ್ಟಿ):
ಕಾನೂನು ಸಂಬಂಧಿತ ಅಡೆತಡೆಗಳಿದ್ದರೆ, ಶಾಶ್ವತ ಬದಲಾವಣೆ ಆಗುವವರೆಗೆ ವಿಶೇಷ ಸಮವರ್ತಿ ಪಟ್ಟಿಯನ್ನು (Special Concurrent List) ರಚಿಸಿ, ಶಿಕ್ಷಣ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳ ಕುರಿತು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದೂ ಅವರು ಹೇಳಿದ್ದಾರೆ.


Click it and Unblock the Notifications
