Public Toilet: ಬೆಂಗಳೂರಲ್ಲಿ ಶೇ.26 ಸಾರ್ವಜನಿಕ ಟಾಯ್ಲೆಟ್ಸ್ ಬಂದ್, ಬಿ.ಪ್ಯಾಕ್ ವರದಿಯಲ್ಲಿ ಕರಾಳ ಚಿತ್ರ ಬಯಲು

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಕುರಿತ ಮಹತ್ವದ ಸಮೀಕ್ಷೆಯ ವರದಿ ಬಹಿರಂಗವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 142 ಸಾರ್ವಜನಿಕ ಶೌಚಾಲಯಗಳ ಕುರಿತು ನಾಗರಿಕರ ಹಾಗೂ ಹಲವು ಸಂಘಸಂಸ್ಥೆಗಳ ನೇತೃತ್ವದಲ್ಲಿ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ. ಪ್ಯಾಕ್) ನಡೆಸಿದ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಇದೇ ವರ್ಷ 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿ.ಪ್ಯಾಕ್‌ನ ನಾಗರಿಕ ನಾಯಕರು, ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ವಿದ್ಯಾರ್ಥಿ ಸ್ವಯಂಸೇವಕರು ಈ ಸಮೀಕ್ಷೆ ನಡೆಸಿದ್ದಾರೆ. ಸಾರ್ವಜನಿಕ ಶೌಚಾಲಯಗಳ ಕಾರ್ಯ ನಿರ್ವಹಣೆ, ಸ್ವಚ್ಛತೆ, ಸುರಕ್ಷತೆ, ಪ್ರವೇಶಸೌಲಭ್ಯ, ಪಾರದರ್ಶಕತೆ ಮತ್ತು ಸೇವಾ ಗುಣಮಟ್ಟ ಕುರಿತು ಸಮಗ್ರ ಮೌಲ್ಯಮಾಪನ ಮಾಡಲಾಗಿದೆ.

Bengaluru Public Toilets

ಬೆಂಗಳೂರು ಇಂದು 1.4 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಜಾಗತಿಕ ನಗರವಾಗಿ ಬೆಳೆಯುತ್ತಿದ್ದರೂ, ಸಾರ್ವಜನಿಕ ಶೌಚಾಲಯಗಳ ಮೂಲಸೌಕರ್ಯ ಅದಕ್ಕೆ ಅನುಗುಣವಾಗಿ ಅಭಿವೃದ್ಧಿಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ನಗರದಲ್ಲಿ 479 ಶೌಚಾಲಯಗಳಿರುವುದು ಜಿಬಿಎ ಅಧಿಕೃತ ಮೂಲಗಳಿಂದ ಗೊತ್ತಾಗಿದೆ.

ಸಮೀಕ್ಷೆಯ, ಸಂಶೋಧನಾ ಅಂಶಗಳು

ಸಮೀಕ್ಷೆ ವೇಳೆ 142 ಸಾರ್ವಜನಿಕ ಶೌಚಾಲಯಗಳ ಪರಿಶೀಲನೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು ಹೀಗಿವೆ.

● 142 ಸಾರ್ವಜನಿಕ ಶೌಚಾಲಯಗಳ ಪರಿಶೀಲನೆ

● 37 ಶೌಚಾಲಯಗಳು (ಶೇ.26) ಸಂಪೂರ್ಣವಾಗಿ ಬಂದ್

● ಕೇವಲ 6 ಶೌಚಾಲಯಗಳು (ಶೇ.4.2) ಮಾತ್ರ "ಅತ್ಯಂತ ಸ್ವಚ್ಛವಾಗಿವೆ.

● ಶೇ. 58(82) ಶೌಚಾಲಯಗಳು ನಿರಂತರ ದುರ್ವಾಸನೆಯಿಂದ ಕೂಡಿದ್ದು, ಜನರ ಬಳಕೆಗೆ ಯೋಗ್ಯವಿಲ್ಲ.

● ಕೇವಲ ಶೇ.56 (80) ಶೌಚಾಲಯಗಳಲ್ಲಿ ಮಾತ್ರ ಸಮರ್ಪಕ ಬೆಳಕಿನ ವ್ಯವಸ್ಥೆ ಇದೆ.

● ಕೇವಲ 9 ಶೌಚಾಲಯಗಳಲ್ಲಿ ಮಾತ್ರ ವೀಲ್‌ ಚೇರ್‌ ರ‍್ಯಾಂಪ್ ಇದೆ, ಸುಮಾರು ಶೇ.94 ಶೌಚಾಲಯಗಳು ಅಂಗವಿಕಲರ ಬಳಕೆಗೆ ಅನುಕೂಲಕರವಾಗಿಲ್ಲ.

● ಸುಮಾರು ಶೇ. 40ರಲ್ಲಿ ಮಾತ್ರ ನಿರಂತರನೀರಿನ ಸೌಲಭ್ಯ ಇದೆ.

● ಯಾವುದೇ ಶೌಚಾಲಯದಲ್ಲೂ ಸಾಬೂನು ಅಥವಾ ಕಸದ ಬುಟ್ಟಿಗಳಿಲ್ಲ.

● ಕೇವಲ ಶೇ.15 ಶೌಚಾಲಯಗಳಲ್ಲಿ ಮಾತ್ರ ಮಹಿಳಾ ಸಿಬ್ಬಂದಿ ಇದ್ದಾರೆ.

● ಗುತ್ತಿಗೆದಾರರ ವಿವರಗಳು ಹಾಗೂ ಬಳಕೆ ಶುಲ್ಕದ ಮಾಹಿತಿ ಹೆಚ್ಚಿನ ಶೌಚಾಲಯಗಳಲ್ಲಿ ಪ್ರದರ್ಶಿಸಲಾಗಿಲ್ಲ.

● ಕೇವಲ 23 ಸಾರ್ವಜನಿಕ ಶೌಚಾಲಯಗಳಲ್ಲಿ ಕನ್ನಡ ಬಲ್ಲವರು ಇದ್ದಾರೆ. ಉಳಿದಕಡೆ ಕನ್ನಡೇತರರು ಇದ್ದಾರೆ

● ಮಂಗಳಮುಖಿಯರಿಗೆ ವಿಶೇಷವಾಗಿ ಯಾವುದೇ ಶೌಚಾಲಯಗಳಿಲ್ಲ.

● 2 ಶೌಚಾಲಯಗಳಲ್ಲಿ ಸ್ನಾನದ ಕೊಠಡಿಗಳನ್ನು ಅದರ ನಿರ್ವಾಹಕರು ಅಡುಗೆ ಮಾಡಲು ಬಳಸುತ್ತಿದ್ದಾರೆ.

● ಬಹುತೇಕ ಶೌಚಾಲಯಗಳಳು ಧೂಮಪಾನ ಮಾಡುವ ಸ್ಥಳಗಳಾಗಿ ಪರಿವರ್ತನೆಯಾಗಿವೆ.

ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ಸಮಸ್ಯೆ ಕೇವಲ ಹೊಸ ಶೌಚಾಲಯಗಳನ್ನು ನಿರ್ಮಿಸುವುದಲ್ಲ, ಈಗಿರುವ ಶೌಚಾಲಯಗಳನ್ನು ಸ್ವಚ್ಛ, ಸುರಕ್ಷಿತ, ಸುಗಮ ಹಾಗೂ ಕಾರ್ಯನಿರ್ವಹಿಸುವಂತೆ ನಿರ್ವಹಿಸುವುದೇ ಮುಖ್ಯ ಸವಾಲಾಗಿದೆ ಎಂದು ವರದಿಯಲ್ಲಿ ತಿಳಿಸುತ್ತದೆ.

ಸರ್ಕಾರಕ್ಕೆ ಬಿ.ಪ್ಯಾಕ್ ಪ್ರಮುಖ ಶಿಫಾರಸು

* ವರದಿಯ ಆಧಾರದ ಮೇಲೆ ಬಿ.ಪ್ಯಾಕ್, ಕಾರ್ಯ ನಿರ್ವಹಿಸದ 37 ಶೌಚಾಲಯಗಳನ್ನು 30 ದಿನಗಳೊಳಗೆ ದುರಸ್ತಿ ಮಾಡುವ ವಿಶೇಷ ಅಭಿಯಾನ ಆರಂಭಿಸಬೇಕು.

* ಎಲ್ಲಾ ಸಾರ್ವಜನಿಕ ಶೌಚಾಲಯಗಳ ಯೋಜನೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಏಕೀಕೃತ ಸಾರ್ವಜನಿಕ ಶೌಚಾಲಯ ನಿರ್ವಹಣಾ ಘಟಕ ಸ್ಥಾಪಿಸಬೇಕು.

* ನಿವಾಸಿಗಳ ಸಂಘಗಳು (RWAs), ಎನ್‌ಜಿಒಗಳು ಮತ್ತು ನಾಗರಿಕ ಸಂಘಟನೆಗಳನ್ನು ಸಾರ್ವಜನಿಕ ಶೌಚಾಲಯಗಳ ಮೇಲ್ವಿಚಾರಣೆಯಲ್ಲಿ ಭಾಗಿಯಾಗಿಸಬೇಕು.

* 'Build-Only" ಗುತ್ತಿಗೆ ಮಾದರಿಯನ್ನು ರದ್ದುಪಡಿಸಿ, ಐದು ವರ್ಷದ "Operate & Maintain (O&M)" ಮಾದರಿ ಜಾರಿಗೊಳಿಸಬೇಕು. ನಿರ್ವಹಣೆಯಲ್ಲಿ ವಿಫಲರಾದ ಗುತ್ತಿಗೆದಾರರ ಗುತ್ತಿಗೆ ರದ್ದುಪಡಿಸಬೇಕು.

* ಪ್ರತಿಯೊಂದು ಸಾರ್ವಜನಿಕ ಶೌಚಾಲಯದಲ್ಲಿ ನೀರು, ವಿದ್ಯುತ್, ಬೆಳಕು, ಸಾಬೂನು, ಕಸದ ಬುಟ್ಟಿ ಹಾಗೂ ನಿಯಮಿತ ಸ್ವಚ್ಛತೆ ಕಡ್ಡಾಯಗೊಳಿಸಬೇಕು.

* ಅಂಗವಿಕಲರಿಗೆ ಅನುಕೂಲವಾಗುವಂತೆ ಈಗಿರುವ ಶೌಚಾಲಯ ಪರಿಷ್ಕರಿಸಿ, ಹೊಸ ಶೌಚಾಲಯಗಳಲ್ಲಿ ಸಾರ್ವತ್ರಿಕ ಪ್ರವೇಶ (Universal Accessibility) ಕಡ್ಡಾಯಗೊಳಿಸಬೇಕು.

* ಮಹಿಳೆಯರು ಹಾಗೂ ತೃತೀಯಲಿಂಗ ಸಮುದಾಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು She-Toilets ಮತ್ತು Gender Inclusive Toilets ನಿರ್ಮಿಸಬೇಕು.

* ಪ್ರತಿಯೊಂದು ಶೌಚಾಲಯದಲ್ಲೂ ಗುತ್ತಿಗೆದಾರ ಹಾಗೂ ನಿರ್ವಾಹಕರ ಹೆಸರು ಮತ್ತು ಸಂಪರ್ಕ ಸಂಖ್ಯೆ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಹಾಗೂ ಸಾರ್ವಜನಿಕರು ದೂರು ದಾಖಲಿಸಲು ಅಧಿಕಾರಿಗಳ ಪೋನ್‌ ನಂಬರ್‌ ನಮೂದಿಸಿರಬೇಕು ಎಂದು ಸಾರ್ವಜನಿಕರ ಪರ ಒತ್ತಾಯಿಸಿದರು.

ಆಧುನಿಕ ಸೌಲಭ್ಯಗಳ ಟಾಯ್ಲೆಟ್ ನಿರ್ಮಿಸಿ

ನಗರದ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ನಗರ ವಿಸ್ತರಣೆ ಹಾಗೂ ಸಾರ್ವಜನಿಕ ಅಗತ್ಯಗಳನ್ನು ಪರಿಗಣಿಸಿ, ಬೆಂಗಳೂರು ನಗರದಲ್ಲಿ ಜಿಬಿಎ ವತಿಯಿಂದ ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ 1,000ಕ್ಕೂ ಹೆಚ್ಚು ಆಧುನಿಕ, ಸುಲಭ ಬಳಕೆಯೋಗ್ಯ, ಎಲ್ಲಾ ವರ್ಗಗಳನ್ನೂ ಒಳಗೊಳ್ಳುವ ಮತ್ತು ಉತ್ತಮ ನಿರ್ವಹಣೆಯ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವಂತೆ ಬಿ.ಪ್ಯಾಕ್‌ನ ಮುಖ್ಯಸ್ಥರಾದ ರಾಘವೇಂದ್ರ ಪೂಜಾರಿ ಹೆಚ್‌ ಎಸ್ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಒತ್ತಾಯಿಸಿದರು.

ಹೊಸ ಸಾರ್ವಜನಿಕ ಶೌಚಾಲಯಗಳಿಗೆ ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಮಾರುಕಟ್ಟೆಗಳು, ಉದ್ಯಾನಗಳು, ಪ್ರವಾಸಿ ತಾಣಗಳು, ನಿರ್ಮಾಣ ಪ್ರದೇಶಗಳು ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಬಿ.ಪ್ಯಾಕ್‌ ಸಿಇಒ ಎಂದು ರೇವತಿ ಅಶೋಕ್ ಸರ್ಕಾರವನ್ನು ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+