ಇರಾನ್ ಯುದ್ಧ: 3.64 ಲಕ್ಷ ಕೋಟಿ ದಾಟಿದ ಅಮೆರಿಕದ ವೆಚ್ಚ
ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ತಾನು ಬರೋಬ್ಬರಿ 37.5 ಬಿಲಿಯನ್ ಡಾಲರ್ (ಅಂದಾಜು 3.64 ಲಕ್ಷ ಕೋಟಿ ರೂಪಾಯಿ) ವೆಚ್ಚ ಮಾಡಿರುವುದಾಗಿ ಅಮೆರಿಕ ಅಧಿಕೃತವಾಗಿ ತಿಳಿಸಿದೆ. ಮಂಗಳವಾರ ಜನ ಪ್ರತಿನಿಧಿಗಳೊಡನೆ ಮಾತನಾಡುವ ಸಂದರ್ಭದಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಈ ವಿವರವನ್ನು ಬಹಿರಂಗಪಡಿಸಿದರು. ಸರಳವಾಗಿ ಹೇಳುವುದಾದರೆ ಇದು ಇರಾನಿನಲ್ಲಿನ ಯುದ್ಧಕ್ಕಾಗಿ ಅಮೆರಿಕ ಮಾಡಿರುವ ಒಟ್ಟು ವೆಚ್ಚವಾಗಿದ್ದು, ಈ ಯುದ್ಧವನ್ನು ಮುಂದುವರಿಸುವ ಸಲುವಾಗಿ ಇನ್ನಷ್ಟು ವೆಚ್ಚ ಮಾಡುವ ಸಾಧ್ಯತೆಗಳಿವೆ.
ಸ್ಟೇಟ್ಸ್‌ಮ್ಯಾನ್ ವರದಿಯ ಪ್ರಕಾರ, ಈ ಒಟ್ಟು ಮೊತ್ತ ಅಮೆರಿಕ ಇಲ್ಲಿಯ ತನಕ ಮಾಡಿರುವ ಖರ್ಚು ಮತ್ತು ಸೆಪ್ಟೆಂಬರ್ ಕೊನೆಯ ಭಾಗದ ತನಕ ಕಾರ್ಯಾಚರಣೆಗಾಗಿ ಮಾಡಬಹುದಾದ ವೆಚ್ಚಗಳನ್ನು ಒಳಗೊಂಡಿದೆ. ಇದರಲ್ಲಿ ಸೈನಿಕರ ಸಂಬಳ, ದೈನಂದಿನ ಕಾರ್ಯಾಚರಣೆಗಳು, ಉಪಕರಣಗಳ ನಿರ್ವಹಣೆಗಳು ಒಳಗೊಂಡಿವೆ. ಹೆಗ್ಸೆತ್ ಮತ್ತು ಉನ್ನತ ಮಿಲಿಟರಿ ಅಧಿಕಾರಿ ಜನರಲ್ ಡ್ಯಾನ್ ಕೇಯ್ನ್ ಅವರು ಸೆನೇಟ್ ಅಪ್ರಾಪ್ರಿಯೇಶನ್ಸ್ ಸಮಿತಿಯ ಮುಂದೆ ಹಾಜರಾಗಿ, ಹೆಚ್ಚುತ್ತಿರುವ ವೆಚ್ಚದ ಕುರಿತು ವಿವರಣೆ ನೀಡಿದರು. ಡೆಮಾಕ್ರಟಿಕ್ ಸೆನೇಟರ್ ರಿಚರ್ಡ್ ಡ್ಯುಬಿನ್ ಅವರ ಪ್ರಶ್ನೆಗೆ ಉತ್ತರಿಸಿದ ಹೆಗ್ಸೆತ್, ಇಂದಿನ ತನಕದ ಅಂದಾಜು ಕಾರ್ಯಾಚರಣಾ ವೆಚ್ಚ 3.64 ಲಕ್ಷ ಕೋಟಿಯಾಗಿದೆ ಎಂದು ಸ್ಪಷ್ಟವಾಗಿ ಹೇಳಿದರು.

ಇದೇ ವೇಳೆ ಟ್ರಂಪ್ ಆಡಳಿತ ಕಾಂಗ್ರೆಸ್ ಬಳಿ 87.6 ಬಿಲಿಯನ್ (ಅಂದಾಜು 8.50 ಲಕ್ಷ ಕೋಟಿ ರೂಪಾಯಿ) ತುರ್ತು ರಕ್ಷಣಾ ಪ್ಯಾಕೇಜ್ ಬಿಡುಗಡೆಗೊಳಿಸಲು ಕೋರಿದೆ. ಇದರಲ್ಲಿ ಬಹುತೇಕ 67 ಬಿಲಿಯನ್ ಡಾಲರ್ (ಅಂದಾಜು 6.50 ಲಕ್ಷ ಕೋಟಿ ರೂಪಾಯಿ) ಕೇವಲ ಮಿಲಿಟರಿಗೆ ಮೀಸಲಾಗಿರಲಿದೆ. ಈ ಹಣ ಮಿಲಿಟರಿ ಕಾರ್ಯಾಚರಣೆಗಳನ್ನು ಸುಗಮವಾಗಿ ಮುಂದುವರಿಯುವಂತೆ ಮಾಡಲು ಮತ್ತು ಅಮೆರಿಕದ ಒಟ್ಟಾರೆ ಭದ್ರತೆಯನ್ನು ಬಲಪಡಿಸಲು ಅವಶ್ಯಕ ಎನ್ನಲಾಗಿದೆ.
ಇಷ್ಟೊಂದು ಅಪಾರ ಹಣ ಯಾಕೆ?
ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ಅವರು ಇದನ್ನು ವಿವರಿಸುತ್ತಾ, ಅಂದಾಜು 21 ಬಿಲಿಯನ್ ಡಾಲರ್ (2.04 ಲಕ್ಷ ಕೋಟಿ ರೂಪಾಯಿ) ಮಿಲಿಟರಿ ಸಿದ್ಧತೆಯ ಸುಧಾರಣೆಗೆ ಬಳಸಲಾಗುತ್ತದೆ ಎಂದಿದ್ದಾರೆ. ಇದು ಯೋಧರ ಪಾವತಿ, ಇಂಧನ ಖರೀದಿ, ಹಾನಿಗೊಳಗಾದ ಉಪಕರಣಗಳಿಗೆ ಬದಲಿ ಉಪಕರಣಗಳು, ನ್ಯಾಷನಲ್ ಗಾರ್ಡ್‌ಗೆ ಬೆಂಬಲ, ಮತ್ತು ಅವಶ್ಯಕತೆ ಎದುರಾದಾಗ ಕ್ಷಿಪ್ರವಾಗಿ ಪಡೆಗಳ ಸಂಚಾರಕ್ಕೆ ಬಳಕೆಯಾಗಲಿದೆ.
ಇನ್ನೂ 46 ಬಿಲಿಯನ್ ಡಾಲರ್ (ಅಂದಾಜು 4.46 ಲಕ್ಷ ಕೋಟಿ ರೂಪಾಯಿ) ಮೊತ್ತ ಹೈಪರ್‌ಸಾನಿಕ್ ಕ್ಷಿಪಣಿಗಳು (ಶಬ್ದದ ವೇಗಕ್ಕಿಂತ ಹಲವು ಪಟ್ಟು ಹೆಚ್ಚು ವೇಗವಾಗಿ ಸಾಗುವ ಕ್ಷಿಪಣಿಗಳು), ಡ್ರೋನ್ ನಿರೋಧಕ ವ್ಯವಸ್ಥೆಗಳು, ಮತ್ತು ಬಾಹ್ಯಾಕಾಶದಲ್ಲಿ ಬಳಸಲು ಮಿಲಿಟರಿ ಉಪಗ್ರಹಗಳಂತಹ ಅತ್ಯಾಧುನಿಕ ಆಯುಧಗಳ ಉತ್ಪಾದನೆಯನ್ನು ವೇಗಗೊಳಿಸಲು ಬಳಕೆಯಾಗಲಿದೆ.
ಈ ಹೆಚ್ಚುವರಿ ಹಣದ ಹೂಡಿಕೆಯ ಹೊರತಾಗಿ, ಅಮೆರಿಕನ್ ಮಿಲಿಟರಿಗೆ ಗಂಭೀರವಾದ ಕೊರತೆಗಳು ಉಂಟಾಗಲಿವೆ. ಇದರಿಂದಾಗಿ ಯೋಧರ ಸಂಬಳ ನೀಡಲು, ಆಯುಧಗಳನ್ನು ಕ್ಷಿಪ್ರವಾಗಿ ಬದಲಾಯಿಸಲು, ಅಥವಾ ಅಡೆತಡೆಯಿಲ್ಲದೆ ಮುಖ್ಯ ಕಾರ್ಯಾಚರಣೆಗಳನ್ನು ಮುಂದುವರಿಸಲು ಕಷ್ಟಕರವಾಗಲಿದೆ ಎಂದು ಹೆಗ್ಸೆತ್ ಎಚ್ಚರಿಕೆ ನೀಡಿದ್ದಾರೆ.
ಪ್ರಶ್ನೆಗಳನ್ನು ಎತ್ತಿದ ಡೆಮಾಕ್ರಟಿಕ್ ಸದಸ್ಯರು
ಈ ಮಾಹಿತಿಗಳು ಎಲ್ಲರನ್ನೂ ಸಮಾಧಾನಿಸಲು ಸಾಧ್ಯವಾಗಿಲ್ಲ. ಡೆಮಾಕ್ರಟಿಕ್ ಸಂಸದರು ಪೆಂಟಗನ್ ಬಳಿ ಈಗಾಗಲೇ ಹಿಂದಿನ 75 ಬಿಲಿಯನ್ ಡಾಲರ್‌ಗಳಷ್ಟು (7.28 ಲಕ್ಷ ಕೋಟಿ ರೂಪಾಯಿ) ಹಣ ಉಳಿದಿದ್ದು, ಅದನ್ನು ಸಂಪೂರ್ಣವಾಗಿ ಬಳಸಿಲ್ಲ ಎಂದಿದ್ದಾರೆ. ಇಷ್ಟೊಂದು ಹಣ ಖರ್ಚಾಗದೆ ಉಳಿದಿರುವಾಗ, ಹೊಸದಾಗಿ ಮತ್ತೊಮ್ಮೆ ಅಪಾರ ಪ್ರಮಾಣದ ಹಣ ಬಿಡುಗಡೆಗೊಳಿಸುವ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಸೆನೇಟರ್ ಪ್ಯಾಟಿ ಮರ್ರೇ ಅವರು ದಕ್ಷಿಣ ಅಮೆರಿಕದಲ್ಲಿ ಯುಎಸ್ ಮಿಲಿಟರಿ ಚಟುವಟಿಕೆಗಳು, ವಾಷಿಂಗ್ಟನ್‌ನಲ್ಲಿ ನ್ಯಾಷನಲ್ ಗಾರ್ಡ್ ನಿಯೋಜನೆ, ಅಮೆರಿಕ - ಮೆಕ್ಸಿಕೊ ಗಡಿಯಲ್ಲಿ ಭದ್ರತಾ ಕಾರ್ಯಾಚರಣೆಗಳು ಸೇರಿದಂತೆ, ನೂತನ ಬೇಡಿಕೆಯ ಹಲವು ಭಾಗಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಹಣದ ವೆಚ್ಚ ಸದ್ಯಕ್ಕೆ ಕೇವಲ ಅತ್ಯವಶ್ಯಕ ರಕ್ಷಣಾ ಅವಶ್ಯಕತೆಗಳಿಗೆ ಮಾತ್ರವೇ ಆದ್ಯತೆ ನೀಡಬೇಕು. ಅಮೆರಿಕನ್ನರಿಗೆ ಈ ಯುದ್ಧ ಬೇಗ ಮತ್ತು ಬುದ್ಧಿವಂತಿಕೆಯಿಂದ ಮುಕ್ತಾಯಗೊಳ್ಳಬೇಕಿದ್ದು, ಅವರಿಗೆ 70 ಬಿಲಿಯನ್ ಡಾಲರ್‌ಗಳಷ್ಟು (6.79 ಲಕ್ಷ ಕೋಟಿ ರೂಪಾಯಿ) ತೆರಿಗೆದಾರರ ಹಣವನ್ನು ವೆಚ್ಚ ಮಾಡುತ್ತಾ, ಯುದ್ಧವನ್ನು ಮುಂದುವರಿಸುವುದು ಬೇಕಾಗಿಲ್ಲ ಎಂದಿದ್ದಾರೆ.
ಇನ್ನು ಜನ ಪ್ರತಿನಿಧಿಗಳೂ ಕಾನೂನಿನ ವಿಚಾರವನ್ನು ಎತ್ತಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಾರ್ ಪವರ್ಸ್ ರೆಸಲ್ಯೂಷನ್ ಎನ್ನುವ, ಓರ್ವ ಅಧ್ಯಕ್ಷ ಕಾಂಗ್ರೆಸ್ ಅನುಮತಿ ಇಲ್ಲದೆ ಎಷ್ಟು ಕಾಲ ಯುದ್ಧವನ್ನು ಮುಂದುವರಿಸಬಹುದು ಎನ್ನುವುದನ್ನು ನಿಯಂತ್ರಿಸುವ ಕಾನೂನಿನ ಅಡಿಯಲ್ಲಿ ಯುದ್ಧವನ್ನು ಇನ್ನೂ ಮುಂದುವರಿಸಲು ಅಧಿಕಾರವಿದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ, ಅಧ್ಯಕ್ಷರಿಗೆ ಯುದ್ಧ ಮುಂದುವರಿಸಲು ಪೂರ್ಣ ಸಾಂವಿಧಾನಿಕ ಅಧಿಕಾರವಿದೆ ಎಂದು ಶ್ವೇತ ಭವನ ಭಾವಿಸಿದೆ ಎಂದು ಹೆಗ್ಸೆತ್ ಉತ್ತರಿಸಿದ್ದಾರೆ. ಆದರೆ, ಇರಾನ್ ಯುದ್ಧಕ್ಕೆ ಭೂ ಸೇನೆಯನ್ನು ಕಳುಹಿಸಲಾಗುತ್ತದೆಯೇ ಎನ್ನುವ ಕುರಿತು ಜನರಲ್ ಕೇಯ್ನ್ ಯಾವುದೇ ಮಾಹಿತಿ ನೀಡಿಲ್ಲ. ಯೋಜಕರು ಪರಿಸ್ಥಿತಿಯನ್ನು ಆಧರಿಸಿ ವಿವಿಧ ಆಯ್ಕೆಗಳನ್ನು ಕೈಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ಇರಾನಿಗಿದೆ ರಷ್ಯಾ ಮತ್ತು ಚೀನಾಗಳ ನೆರವು
ತನ್ನ ವಿವರಣೆಯ ಸಂದರ್ಭದಲ್ಲಿ, ಹೆಗ್ಸೆತ್ ಒಂದು ಗಂಭೀರವಾದ ಹೇಳಿಕೆ ನೀಡಿದ್ದು, ರಷ್ಯಾ ಮತ್ತು ಚೀನಾ ಎರಡೂ ದೇಶಗಳು ಇರಾನನ್ನು ಬೆಂಬಲಿಸುತ್ತಿವೆ ಎಂದಿದ್ದಾರೆ. ಆದರೆ, ಅವೆರಡೂ ಇರಾನ್‌ಗೆ ಯಾವ ರೀತಿಯಲ್ಲಿ ನೆರವು ನೀಡುತ್ತಿವೆ, ಎಷ್ಟರ ಪ್ರಮಾಣದಲ್ಲಿ ನೀಡುತ್ತಿವೆ ಎನ್ನುವುದನ್ನು ಅವರು ವಿವರಿಸಿಲ್ಲ. ರಿಪಬ್ಲಿಕನ್ ಸೆನೇಟರ್ ಜಾನ್ ಹೋವೆನ್ ಪ್ರಶ್ನೆಗೆ ಉತ್ತರಿಸಿದ ಅವರು, ರಷ್ಯಾ ಮತ್ತು ಚೀನಾಗಳು ಇರಾನ್‌ಗೆ ವಿವಿಧ ವಿಧಾನ ಮತ್ತು ವಿವಿಧ ಹಂತಗಳಲ್ಲಿ ನೆರವು ನೀಡುತ್ತಿವೆ ಎಂದಷ್ಟೇ ಹೇಳಿದ್ದಾರೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಲು ಜನರಲ್ ಕೇಯ್ನ್ ಸಹ ನಿರಾಕರಿಸಿದ್ದು, ಮುಕ್ತವಾಗಿ ಗುಪ್ತಚರ ಮಾಹಿತಿಗಳನ್ನು ನೀಡುವುದು ಸೂಕ್ಷ್ಮವಾದ ರಹಸ್ಯಗಳನ್ನು ಬಯಲುಗೊಳಿಸಿದಂತಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದ ಸ್ಟೇಟ್ಸ್‌ಮ್ಯಾನ್ ವರದಿಯ ಪ್ರಕಾರ, ಅಮೆರಿಕನ್ ಪಡೆಗಳು ನಿರಂತರ ಹತ್ತನೇ ರಾತ್ರಿ ಇರಾನಿಯನ್ ಗುರಿಗಳ ಮೇಲೆ ದಾಳಿ ನಡೆಸಿವೆ ಎಂದು ಹೆಗ್ಸೆತ್ ಹೇಳಿಕೊಂಡಿದ್ದಾರೆ. ಜಗತ್ತಿನ ಬಹುದೊಡ್ಡ ಪಾಲು ತೈಲ ಹಾದುಹೋಗುವ ಅತ್ಯಂತ ಪ್ರಮುಖ ಜಲಮಾರ್ಗವಾದ ಹೊರ್ಮುಸ್ ಜಲಸಂಧಿಯಲ್ಲಿ ಸಾಗುವ ವಾಣಿಜ್ಯಿಕ ಹಡಗುಗಳ ಮೇಲೆ ಇರಾನ್ ದಾಳಿ ಪುನರಾರಂಭಿಸಿದ ಬಳಿಕ ಅಮೆರಿಕದ ಆಕ್ರಮಣ ಆರಂಭಗೊಂಡಿದೆ.
ಅಮೆರಿಕ ಇರಾನ್ ಮೇಲೆ ಮತ್ತೊಮ್ಮೆ ಅತ್ಯಂತ ಬಲವಾದ ದಿಗ್ಬಂಧನ ವಿಧಿಸಿದೆ ಎಂದು ಹೆಗ್ಸೆತ್ ಹೇಳಿಕೊಂಡಿದ್ದು, ಇದನ್ನು ಮುರಿಯುವುದು ಬಹಳ ಕಷ್ಟಕರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗೆ ಅಮೆರಿಕ ನಡೆಸಿರುವ ಕಾರ್ಯಾಚರಣೆಗಳು ಹೊರ್ಮುಸ್ ಜಲಸಂಧಿಯ ಬಳಿ ಕಾರ್ಯಾಚರಿಸುವ ಇರಾನಿನ ಸಾಮರ್ಥ್ಯವನ್ನು ಕುಂಠಿತಗೊಳಿಸಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇರಾನಿನ ಮಿಲಿಟರಿ ಇತ್ತೀಚಿನ ದಶಕಗಳಲ್ಲೇ ಅತ್ಯಂತ ದುರ್ಬಲವಾಗಿದ್ದು, ಆದರೂ ವೇಗದ ದಾಳಿ ನಡೆಸುವ ಬೋಟ್‌ಗಳು, ಕರಾವಳಿ ಕ್ಷಿಪಣಿಗಳು ಮತ್ತು ನೌಕಾ ಮೈನ್‌ಗಳಂತಹ ಒಂದಷ್ಟು ಸಾಮರ್ಥ್ಯ ಉಳಿಸಿಕೊಂಡಿದೆ ಎಂದಿದ್ದಾರೆ.
ಅಂತಿಮವಾಗಿ, ಅಮೆರಿಕದ ಬೃಹತ್ 1.5 ಟ್ರಿಲಿಯನ್ ಡಾಲರ್‌ಗಳಷ್ಟು (144 ಲಕ್ಷ ಕೋಟಿ ರೂಪಾಯಿ) ರಕ್ಷಣಾ ಬಜೆಟನ್ನು ತಲೆಮಾರಿನ ಹೂಡಿಕೆ (ಭವಿಷ್ಯದ ತಲೆಮಾರುಗಳ ದೃಷ್ಟಿಯಿಂದ ನಡೆಸುವ ದೀರ್ಘಾವಧಿಯ ಹೂಡಿಕೆ) ಎಂದು ಹೆಗ್ಸೆತ್ ಬಣ್ಣಿಸಿದ್ದು, ಇದು ರಷ್ಯಾ ಮತ್ತು ಚೀನಾಗಳಂತಹ ಎದುರಾಳಿಗಳನ್ನು ಪ್ರತಿರೋಧಿಸಲು ಬಳಕೆಯಾಗಲಿದೆ ಎಂದಿದ್ದಾರೆ.
ಒಟ್ಟಾರೆಯಾಗಿ, ಮಧ್ಯ ಪೂರ್ವದಲ್ಲಿ ನಡೆಯುತ್ತಿರುವ ಕದನ ಅಮೆರಿಕ ಪಾಲಿಗಂತೂ ಹಣ ಮತ್ತು ಮುಂಬರುವ ಗಂಭೀರವಾದ ಕಾರ್ಯತಂತ್ರದ ಸವಾಲುಗಳ ದೃಷ್ಟಿಯಿಂದ ಅತ್ಯಂತ ದುಬಾರಿಯಾಗುತ್ತಿರುವುದಂತೂ ಸತ್ಯ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])
ಬರಹ: ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


Click it and Unblock the Notifications
