ಮಂಡ್ಯದಲ್ಲಿ ನಡೆದ ರಾಜಕೀಯ ಕುತಂತ್ರ ರಾಮನಗರದಲ್ಲಿ ನಡೆಯುವುದಿಲ್ಲ-ನಿಖಿಲ್ ಕುಮಾರಸ್ವಾಮಿ
ರಾಮನಗರ, ಏಪ್ರಿಲ್ 24: ಎರಡು ರಾಷ್ಟ್ರೀಯ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಸೋಲಿಸಲು ರಾಜಕೀಯ ಕುತಂತ್ರ ನಡೆಸಿದ್ದಾರೆ. ಮಂಡ್ಯದಲ್ಲಿ ನಡೆದ ಕುತಂತ್ರದ ರಾಜಕೀಯಕ್ಕೆ ರಾಮನಗರದ ಜನತೆ ಮರುಳಾಗುವುದಿಲ್ಲ ಎಂದು ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ , ಕ್ಷೇತ್ರದ ಆಭ್ಯರ್ಥಿಯಾಗಿ ಘೋಷಣೆಗೊಂಡ ನಂತರದಲ್ಲಿ ನಿರಂತರವಾಗಿ ರಾಮನಗರ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ. ನನ್ನೊಂದಿಗೆ ಕ್ಷೇತ್ರದಲ್ಲಿ ಯುವ ಮತ್ತು ಹಿರಿಯ ಕಾರ್ಯಕರ್ತರೇ ನನಗೆ ಶಕ್ತಿ ಎಂದರು.

ರಾಷ್ಟ್ರೀಯ ಪಕ್ಷಗಳ ಕುತಂತ್ರಕ್ಕೆ ಬೆಲೆ ನೀಡಲ್ಲ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಾಗಾರಿಗಳೇ ಕ್ಷೇತ್ರದ ಬಗ್ಗೆ ನಮಗಿರುವ ಕಾಳಜಿಯನ್ನು ತೋರಿಸುತ್ತವೆ. ಕ್ಷೇತ್ರದ ಜನರು ನಮ್ಮ ಕೆಲಸವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ ಯಾವುದೇ ಕಾರಣಕ್ಕೂ ಕ್ಷೇತ್ರದ ಜನರು ರಾಷ್ಟ್ರೀಯ ಪಕ್ಷಗಳ ಕುತಂತ್ರಕ್ಕೆ ಬೆಲೆ ನೀಡಲ್ಲ. ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಕುತಂತ್ರ ನಡೆಸುತ್ತಿದೆ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಇವತ್ತು ಒಳ ಒಪ್ಪಂದ ಅಲ್ಲ ಬಹಿರಂಗ ಒಪ್ಪಂದ ಮಾಡಿಕೊಂಡಿದ್ದಾರೆ. ಅವರ ಈ ಕುತಂತ್ರಕ್ಕೆ ರಾಮನಗರ ಕ್ಷೇತ್ರದ ಪ್ರಬುದ್ಧ ಮತದಾರರು ನಿಖಿಲ್ ಕುಮಾರಸ್ವಾಮಿಯನ್ನು ಬಲಿಪಶು ಮಾಡಲ್ಲ ಎನ್ನುವ ವಿಶ್ವಾಸ ನನಗಿದೆ. ಚುನಾವಣೆಗೆ ಕೆಲವೇ ದಿನಗಳಿವೆ. ಹಾಗಾಗಿ ಮುಂದೆ ನಿಮಗೆ ಎಳೆಎಳೆಯಾಗಿ ಕುತಂತ್ರದ ಬಗ್ಗೆ ತಿಳಿಯಲಿದೆ ಎಂದು ಎಂದರು.
ಆರ್.ಅಶೋಕ್ ನಾಮಕಾವಸ್ಥೆಗೆ ಸ್ಪರ್ಧೆ
ಕನಕಪುರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಕೇವಲ ನಾಮಕಾವಸ್ಥೆಗೆ ಸ್ಪರ್ಧೆ ಮಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸವಿದ್ದರೆ, ಎರಡು ಕಡೆ ಯಾಕೆ ಸ್ಪರ್ಧೆ ಮಾಡಿದ್ದಾರೆ. ಪದ್ಮನಾಭನಗರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡದೆ ಕನಕಪುರ ಕ್ಷೇತ್ರವೊಂದರಲ್ಲೇ ಸ್ಪರ್ಧೆ ಮಾಡಿದ್ದರೆ ಅವರ ಹೋರಟವನ್ನು ಮೆಚ್ಚಬಹುದಾಗಿತ್ತು. ಹಾಗಾಗಿ ಅವರು ಕೇವಲ ಸುಮ್ಮನೆ ಕನಕಪುರದಲ್ಲಿ ಅರ್ಜಿ ಹಾಕಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ಹಲವಾರು ವರ್ಷಗಳಿಂದ ಸಮರ್ಥವಾಗಿ ಹೋರಾಟ ನಡೆಸಿರುವ ಕನಕಪುರ ತಾಲೂಕು ಅಧ್ಯಕ್ಷರನ್ನೇ ಕ್ಷೇತ್ರದ ಅಭ್ಯರ್ಥಿ ಮಾಡಿದ್ದೇವೆ. ಬಹುಶಃ ಕಂದಾಯ ಸಚಿವ ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಳ ಒಪ್ಪಂದ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಅವರು ಏಕೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ಎಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯದ ವ್ಯತ್ಯಾಸದಿಂದ ರಾಮನಗರ ಪ್ರವಾಸ ರದ್ದಾಗಿತ್ತು. ಮುಂದೆ ರಾಮನಗರ ಕ್ಷೇತ್ರದ ಪ್ರವಾಸ ಸದ್ಯದಲ್ಲೇ ನಿಗದಿಯಾಗಲಿದೆ. ಮೂರು ದಿನಗಳ ಕಾಲ ರಾಮನಗರ ಕ್ಷೇತ್ರಕ್ಕೆ ಸಮಯ ನೀಡಿದ್ದರು. ಅವರೊಂದಿಗೆ ಚರ್ಚಿಸಿ ಮುಂದಿನ ದಿನಾಂಕ ನಿಗದಿ ಪಡಿಸುತ್ತೇವೆ. ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡರು ಸಹ ನನ್ನ ಪರ ಪ್ರಚಾರಕ್ಕೆ ಬರುತ್ತಾರೆ ಎಂದರು.












Click it and Unblock the Notifications