ಚನ್ನಪಟ್ಟಣದಿಂದ ಬೆಂಗಳೂರಿಗೆ ಶಿಫ್ಟಾಗಲಿದೆಯೇ ನಿಖಿಲ್ ಮದುವೆ?
ಬೆಂಗಳೂರು, ಮಾರ್ಚ್ 12: ಕೊರೊನಾ ಭೀತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆಗೂ ತಟ್ಟುವ ಸಾಧ್ಯತೆ ಇದೆ. ಕೊರೊನಾ ಹಿನ್ನೆಲೆಯಲ್ಲಿ ಮದುವೆ ಸ್ಥಳವನ್ನು ಸ್ಥಳಾಂತರ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ.
ಈಗಾಗಲೇ ನಿಖಿಲ್ ಮತ್ತು ರೇವತಿ ವಿವಾಹ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೃಹತ್ ಜಾಗದಲ್ಲಿ ಸಿದ್ಧತೆ ಕಾರ್ಯ ನಡೆಯುತ್ತಿದೆ. ಆದರೆ ಮೂಲಗಳ ಪ್ರಕಾರ ಮದುವೆ ಕಾರ್ಯವನ್ನು ಈಗ ಬೆಂಗಳೂರಿನ ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡುವ ಕುರಿತು ಚರ್ಚೆಗಳು ಗೌಡರ ಕುಟುಂಬದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.
ಜನಸಂದಣಿ ದಟ್ಟಣೆಯಿಂದ ಕೊರೊನಾ ಸುಲಭವಾಗಿ ಹರಡುತ್ತದೆ. ಹೀಗಾಗಿ ಈ ಸ್ಥಳ ಬದಲಾವಣೆ ಬಗ್ಗೆ ಗೌಡರ ಕುಟುಂಬದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆ ಏಪ್ರಿಲ್ 17 ರಂದು ನಡೆಯಲಿದೆ. ಈಗಾಗಲೇ ಎರಡೂ ಕುಟುಂಬದಲ್ಲೂ ಮದುವೆಗೆ ಸಿದ್ಧತೆಗಳು ನಡೆಯುತ್ತಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿದ ರಾಮನಗರ ಜಿಲ್ಲೆಯ ಜನರಿಗಾಗಿ ನಿಖಿಲ್ ಕುಮಾರಸ್ವಾಮಿ ಮದುವೆಯನ್ನು ಚನ್ನಪಟ್ಟಣ ಸಮೀಪದಲ್ಲಿರುವ ಜಾನಪದ ಲೋಕದ ಸಮೀಪ ಅದ್ಧೂರಿ ಮಂಟಪವನ್ನು ನಿರ್ಮಿಸಲಾಗುತ್ತಿದೆ.
ದೇವೇಗೌಡರ ಕುಟುಂಬಕ್ಕೂ, ರಾಮನಗರ ಮತ್ತು ಚನ್ನಪಟ್ಟಣದ ಜನರ ನಡುವೆ ರಾಜಕೀಯವಾಗಿ ಮಾತ್ರವಲ್ಲದೆ, ಭಾವನಾತ್ಮಕ ನಂಟು ಕೂಡ ಇದೆ.
ಹೀಗಾಗಿ ತಮ್ಮ ಮಗನ ಮದುವೆ ಸಂಭ್ರಮವನ್ನು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸದೇ, ತಮ್ಮ ಪಕ್ಷದ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳ ಜೊತೆ ಕೂಡ ಸಂಭ್ರಮಿಸಲು ಕುಮಾರಸ್ವಾಮಿ ಅವರು ನಿರ್ಧರಿಸಿದ್ದರು. ಆದರೆ ಈಗ ಕೊರೊನಾ ವೈರಸ್ ಭೀತಿಯ ಪರಿಣಾಮದಿಂದ ನಿಖಿಲ್ ಮದುವೆಯನ್ನು ಬೆಂಗಳೂರಿನಲ್ಲಿ ಮಾಡಲು ನಿರ್ಧರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.












Click it and Unblock the Notifications