ರಾಮನಗರ: BBMP ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ರಾಮನಗರ, ಆಗಸ್ಟ್, 17: ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ರಾಜ್ಯದ ಹಲವೆಡೆ ಇಂದು (ಆಗಸ್ಟ್ 17) ಬೆಳ್ಳಂಬೆಳಗ್ಗೆ ಲೊಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಗೆಯೇ ಬಿಬಿಎಂಪಿ ಆರ್‌ಐ ಆಗಿರುವ ನಟರಾಜು ಅವರ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿನ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಬಿಎಂಪಿ ಅಧಿಕಾರಿ ಆಗಿರುವ ನಟರಾಜುಗೆ ಸೇರಿದ ಶಿವನಹಳ್ಳಿ ಗ್ರಾಮದ ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳ್ಳಗ್ಗೆ ದಾಳಿ ನಡೆಸಿದ್ದಾರೆ. ನಟರಾಜು ಅವರು 12 ಹೆಕ್ಟೇರ್ ತೋಟ, ಮನೆ ಅಲ್ಲದೇ ಪಟ್ಟಣದಲ್ಲೂ ವಾಣಿಜ್ಯ ಕಟ್ಟಡ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಲೋಕಾಯುಕ್ತ ಅಧಿಕಾರಿಗಳು ತೋಟದ ಕಾರ್ಮಿಕರಿಂದ ನಟರಾಜು ಅವರ ಆದಾಯದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ
ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಾಗೆಯೇ ದಾವಣಗೆರೆಯ ಜಿಲ್ಲೆಯ ಚನ್ನಗಿರಿಯ ಆರ್‌ಎಫ್‌ಒ ಸತೀಶ್ ನಿವಾಸ, ಬಿಬಿಎಂಪಿಯಲ್ಲಿ ಎಇಇ ಆಗಿ ಕೆಲಸ ನಿರ್ವಹಿಸುತ್ತಿರುವ ಹೆಚ್.ಭಾರತಿ ಅವರ ದಾವಣಗೆರೆಯ ಜಯನಗರ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಇನ್ನು ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕೆ.ಮಹೇಶ್ ಹಾಗೂ ಹೆಚ್.ಭಾರತಿ ದಂಪತಿಗೆ ಸೇರಿದ ಮನೆಯಲ್ಲಿ ಒಂದು ಕೆ.ಜಿ.ಬಂಗಾರ, 15 ಲಕ್ಷ ರೂಪಾಯಿಗೂ ಹೆಚ್ಚು ಹಣ ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಬಿಬಿಎಂಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಚ್.ಭಾರತಿ ಅವರು ದಾವಣಗೆರೆಯಲ್ಲಿಯೂ ಆಸ್ತಿ ಮಾಡಿರುವ ಕುರಿತಂತೆ ಮಾಹಿತಿ ಇದ್ದು, ಈ ಕುರಿತಂತೆ ಕೆಲ ದಾಖಲಾತಿಗಳು ಸಿಕ್ಕಿವೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಈ ವಿಚಾರ ದೃಢಪಡಿಸಿಲ್ಲ.












Click it and Unblock the Notifications