ರಾಜ್ಯ ಸಂಕಷ್ಟದಲ್ಲಿದ್ದಾಗ ಬಾರದ ಮೋದಿ ಈಗ ಬರುತ್ತಿದ್ದಾರೆ-ಡಿ.ಕೆ ಶಿವಕುಮಾರ್
ರಾಮನಗರ, ಮಾರ್ಚ್ 10: ಬೆಂಗಳೂರು ಮೈಸೂರು ಹೆದ್ದಾರಿಗೆ ಮೊದಲು ಸೂಕ್ತ ಸರ್ವಿಸ್ ರಸ್ತೆ ನಿರ್ಮಿಸಲಿ, ದಶಪಥ ಹೆದ್ದಾರಿಗೆ ಈಗಾಗಲೇ 80 ಜನ ಬಲಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಸಮಯ ಹಾಗಾಗಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.
ಡಿ.ಕೆ ಶಿವಕುಮಾರ್ ತಮ್ಮ ತವರು ಜಿಲ್ಲೆಯ ಮಾಗಡಿ ಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆದ್ದಾರಿ ನಿರ್ಮಾಣದ ಕ್ರೆಡಿಟ್ ತೆಗದುಕೊಳ್ಳುವ ಮೊದಲು ಪ್ರಯಾಣಿಕರಿಗೆ ಶೌಚಾಲಯದ ವ್ಯವಸ್ಥೆ ಸೂಕ್ತ ಸರ್ವಿಸ್ ರಸ್ತೆ ನಿರ್ಮಿಸಲಿ ಎಂದರು.

ಚುನಾವಣೆ ಸಮಯ ಪ್ರಧಾನಿ ನರೇಂದ್ರ ಮೋದಿ ಪಾಪ ಬರಲಿ, ರಾಜ್ಯದಲ್ಲಿ ನೆರೆ ಹಾವಳಿಗೆ ಬರಲಿಲ್ಲ, ಕೋವಿಡ್ ಸಮಯದಲ್ಲಿ ಜನ ಸತ್ತಾಗ ಬರಲಿಲ್ಲ, ಬರ ಬಂದು ರಾಜ್ಯ ಸಂಕಷ್ಟಕ್ಕೆ ಸಿಲುಕಿದಾಗಲೂ ಬರಲಿಲ್ಲ ,ಕಷ್ಟ ಬಂದಾಗ ಬರಲಿಲ್ಲ, ಹಣ ಕೊಡಲು ಬರಲಿಲ್ಲ, ಈಗ ಚುನಾವಣೆ ಬರುವ ಹಿನ್ನಲೆಯಲ್ಲಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೋದಿ ವಿರುದ್ಧ ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜ್ಯದ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ವಿಧಾನಸೌಧದಲ್ಲಿ ಕೂರಿಸುವುದು ಮುಖ್ಯ. ನಾನು ಸಚಿವನಾಗಿದ್ದ ಸಮಯದಲ್ಲಿ ಸಿಕ್ಕ ಅವಕಾಶದಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಹಾಗಾಗಿ ನನಗೆ ವಿಶ್ವಾಸವಿದೆ. ಜಿಲ್ಲೆಯ ಜನರು ಈ ಬಾರಿ ನನ್ನ ಕೈ ಹಿಡಿಯುತ್ತಾರೆ ಎಂದ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಜಿಲ್ಲೆಯಲ್ಲಿ ಅಭಿವೃದ್ಧಿ ಕ್ರೆಡಿಟ್ ವಾರ್ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಭಿವೃದ್ಧಿ ಕ್ರೆಡಿಟ್ ತಮ್ಮದು ಎಂದು ಹೇಳಿಕೊಳ್ಳಲಿ ತಪ್ಪೇನಿಲ್ಲ. ಕುಮಾರಸ್ವಾಮಿ ಜಿಲ್ಲೆಯಾದರೂ ಮಾಡಿದ್ದಾರೆ, ಕಣ್ಣಿಗೆ ಕಾಣುವಂತೆ ನಾಲ್ಕಾರು ಬಿಲ್ಡಿಂಗ್ ಕಟ್ಟಿಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ಬಹಳಷ್ಟು ಬಾರಿ ಜಿಲ್ಲೆಯನ್ನು ಕ್ಲೀನ್ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಹಾಗಾದರೆ ಜಿಲ್ಲೆಯನ್ನು ಕ್ಲೀನ್ ಮಾಡಿಸಿದ್ದಾರಾ..? ಅವರು ಜಿಲ್ಲೆಯಲ್ಲಿ ಬಿಡದಿ ಬೈರಮಂಗಲದಲ್ಲಿ ಹರಿಯುವ ವೃಷಭಾವತಿ ನದಿಯನ್ನು ನೋಡಿದ್ದಾರಾ..? ಎಂದು ಪ್ರಶ್ನಿಸಿದರು.











Click it and Unblock the Notifications