ಗಾಳಿಪಟ ಉತ್ಸವ ಜಾನಪದ ಕಲೆ, ಉಳಿಸಿ ಬೆಳಸಬೇಕಿದೆ: ಅಶ್ವಥ್ ನಾರಾಯಣ
ರಾಮನಗರ, ಜುಲೈ 29: ಜಾನಪದ ಕಲೆಯಾಗಿರುವ ಗಾಳಿಪಟ ಹಾರಿಸುವ ಉತ್ಸವವನ್ನು ಜಿಲ್ಲೆಯಲ್ಲಿ ಅರ್ಥ ಪೂರ್ಣವಾಗಿ ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯವಾಗಿದ್ದೂ, ಮಕ್ಕಳಿಗೆ ಗಾಳಿಪಟದ ಮೂಲಕ ಸಮಾಜಿಕ ಸಂದೇಶ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಾನಪದ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಗಾಳಿಪಟ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಾಪುರುಷರಾದ ಹೆಚ್.ಎಲ್ ನಾಗೇಗೌಡರು ಜಾನಪದ ಲೋಕವನ್ನು ಸ್ಥಾಪಿಸಿ ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಲ್ಲೆ ಎಲ್ಲಾ ಕ್ಷೇತ್ರದಲ್ಲಿ ಮಾದರಿಯಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಕೃತಿಯೊಂದಿಗೆ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸೋಣ ಎಂದು ಸಚಿವರು ಕರೆ ನೀಡಿದರು.
ಗಾಳಿಪಟದ ಬಗ್ಗೆ ಹರಿವು ಇಲ್ಲದ ಮಕ್ಕಳಲ್ಲಿ ಗಾಳಿಪಟದ ಬಗ್ಗೆ ಹರಿವು ಮೂಡಿಸುವುದರೊಂದಿಗೆ ಗ್ರಾಮೀಣ ಸೊಗಡು ಉಳಿಸಿ ಬೆಳೆಸುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಜನಪದ ಪರಿಷತ್ತು ಮಾಡುತ್ತಿದೆ. ಗಾಳಿಪಟ ಮಾನವನ ಹಾರುವಿಕೆಗೆ ಪರಿಕಲ್ಪನೆಯ ಮೂಲ ಎಂದರೆ ತಪ್ಪಲ್ಲ. ಗಾಳಿಪಟ ಕಟ್ಟುವಿಕೆ ಒಂದು ಕಲೆಯೂ ಆಗಿರುವುದರಿಂದ ನಶಿಸಿ ಹೋಗುತ್ತಿರುವ ಈ ಕಲೆಯನ್ನು ಉಳಿಸಿ ಬೆಳೆಸುವುದು ಅವಶ್ಯವಾಗಿದೆ ಎಂದರು.

ಗಾಳಿಪಟ ಹಾರಿಸುವ ಅಮೂಲ್ಯ ಸಂಸ್ಕೃತಿಯನ್ನು ಭವಿಷ್ಯಕ್ಕೆ ಉಳಿಸಿಕೊಡುವ ನಿಟ್ಟಿನಲ್ಲಿ ಗಾಳಿಪಟ ಉತ್ಸವ ದಾರಿದೀಪವಾಗಿದೆ. ನಮ್ಮ ಜೀವನ ಗಾಳಿಪಟವಿದ್ದಂತೆ ನಾವು ಕಷ್ಟಪಟ್ಟಷ್ಟು ಮೇಲಾರಬಹುದು. ಜೀವನದಲ್ಲಿ ಗಾಳಿಪಟದಂತೆ ಎತ್ತರಕ್ಕೆ ಬೆಳೆಯಬೇಕು ಎಂದರು. ರಾಮನಗರ ಜಿಲ್ಲೆ ಗಾಳಿಪಟದಂತೆ ಬೆಳೆಯಲಿ ಅದಕ್ಕೆ ಸಹಕಾರ ಕೊಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಎಮ್.ಲಿಂಗಪ್ಪ, ಅ.ದೇವೇಗೌಡ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು, ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಇಕ್ರಂ, ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗಹಿಸಿದ್ದರು.












Click it and Unblock the Notifications