ಬಿಜೆಪಿಗೆ "ಢವಢವ" ಶುರುವಾಗಿದೆ, ಹಾಗಾಗಿ ಕನಕಪುರದಲ್ಲಿ ಆರ್.ಆಶೋಕ್ ಅವರನ್ನು ಕಣಕ್ಕಿಳಿಸಿದೆ: ಡಿ.ಕೆ.ಸುರೇಶ್
ರಾಮನಗರ, ಏಪ್ರಿಲ್, 13: ಬಿಜೆಪಿಗೆ ಭಯ ಪ್ರಾರಂಭವಾಗಿದೆ, ಆದ್ದರಿಂದ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರು ಕಂದಾಯ ಸಚಿವ ಆರ್.ಆಶೋಕ್ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ಡಿ.ಕೆ.ಶಿ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಟೀಕಿಸಿದ್ದಾರೆ.
ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಬಿಜೆಪಿ ಹೈಕಮಾಂಡ್ ಮಾಜಿ ಡಿಸಿಎಂ, ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕನಕಪುರ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಅವರ ಪಕ್ಷದ ಆದೇಶದ ಮೇರೆಗೆ ಅವರು ಸ್ಪರ್ಧೆ ಮಾಡುತ್ತಿರಬಹುದು, ಮುಂದೆ ಏನಾಗುತ್ತದೆಯೋ ನೋಡೊಣ ಎಂದು ಸವಾಲು ಹಾಕಿದ್ದಾರೆ.

"ನರೇಂದ್ರ ಮೋದಿಯವರ ಟಕ್ಕರ್ ಆಗಲಿ, ಅಮಿತ್ ಶಾ ಟಕ್ಕರ್ ಆಗಲಿ ನಮ್ಮತ್ರ ನಡೆಯುವುದಿಲ್ಲ. ಕರ್ನಾಟಕದ ಜನ ಬುದ್ಧಿವಂತರಿದ್ದಾರೆ. ರಾಮನಗರ ಜಿಲ್ಲೆಯ ಜನ ಎಲ್ಲರನ್ನೂ ನೋಡಿದ್ದಾರೆ. ಇಂತಹ ಮಹಾನ್ ನಾಯಕರನ್ನು ನಾವೂ ಸಹ ನೋಡಿದ್ದೇವೆ. ಇದು ಕನಕಪುರಕ್ಕೆ ಹೊಸದೇನಲ್ಲ. ಮೇ 10ರಂದು ಕನಕಪುರದ ಜನತೆ ಇದಕ್ಕೆ ಉತ್ತರ ನೀಡುತ್ತಾರೆ," ಎಂದು ಸಂಸದ ಡಿ.ಕೆ.ಸುರೇಶ್ ಬಿಜೆಪಿಗೆ ಟಾಂಗ್ ನೀಡಿದರು.
"ಟಿಕೆಟ್" ಭರವಸೆ ನೀಡಿ ಬಡವರ ಮಕ್ಕಳನ್ನು ಹಗಲು ಬಾವಿಗೆ ತಳ್ಳುವುದೇ ಕಾಂಗ್ರೆಸ್‌ನವರ ಕೆಲಸ: ಮಾಗಡಿ ಶಾಸಕ ಎ.ಮಂಜುನಾಥ್
ರಾಜಕೀಯ ಚದುರಂಗದ ಆಟ ಪ್ರಾರಂಭ
ರಾಜಕೀಯ ರಣರಂಗದ ಚದುರಂಗದ ಆಟ ಪ್ರಾರಂಭವಾಗಿದೆ. ಏನಾಗುತ್ತದೆಯೋ ಎಂದು ಕಾದು ನೋಡೊಣ. ಯಾರು ಎದುರಾಳಿ ಎಂಬುದು ಮುಖ್ಯವಲ್ಲ, ನಾವು ನಮ್ಮ ಪಕ್ಷದ ತತ್ವ ಸಿದ್ದಾಂತ ಹಾಗೂ ಜನರ ವಿಶ್ವಾಸದ ಅಧಾರದ ಮೇಲೆ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಕನಕಪುರದಲ್ಲಿರಬಹುದು, ರಾಮನಗರ ಜಿಲ್ಲೆಯಲ್ಲಿರಬಹುದು ಹಾಗೂ ಕರ್ನಾಟಕ ರಾಜ್ಯದಲ್ಲಿರಬಹುದು ಸರ್ಕಾರ ಭ್ರಷ್ಟಾಚಾರದಿಂದ ಜನ ನೊಂದು ಬೆಂದಿದ್ದಾರೆ.
ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಅಂತಿಮ ಇತೀಶ್ರೀ ಹಾಡಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ. ಜನ ನಮ್ಮ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿದ್ದಾರೆ. ಹಾಗಾಗಿ ಬಿಜೆಪಿಗೆ ಭಯ ಪ್ರಾರಂಭ ಆಗಿದೆ. ಆದ್ದರಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಆಶೋಕ್ ಅವರನ್ನು ಅಭ್ಯರ್ಥಿಯಾಗಿ ಹಾಕಿದ್ದಾರೆ.

ಯಾರನ್ನೂ ಡಿಸ್ಟರ್ಬ್ ಮಾಡೋಕಾಗಲ್ಲ
ಬಿಜೆಪಿ ನಾಯಕರು ಆರ್.ಆಶೋಕ್ ಅವರನ್ನು ಕಣಕ್ಕಿಳಿಸುವ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಲು ಯೋಚಿಸಿದ್ದರೆ, ಇಲ್ಲಿ ಯಾರನ್ನೂ ಕಟ್ಟಿ ಹಾಕಲು ಸಾಧ್ಯವಿಲ್ಲ. ಯಾರಿಗೆ ಏನು ಮಾಡಬೇಕು ಅಂತ ಕನಕಪುರದ ಜನರಿಗೆ ಗೊತ್ತಿದೆ. ಅವರಿಗೆ ಆ ದಾರಿ ತೋರಿಸುತ್ತಾರೆ. ಇಲ್ಲಿ ಯಾರನ್ನೂ ಡಿಸ್ಟರ್ಬ್ ಮಾಡೋಕಾಗಲ್ಲ. ಡಿಸ್ಟರ್ಬ್ ಆಗುವವರು ಇದ್ದರೆ ತಾನೇ ಡಿಸ್ಟರ್ಬ್ ಮಾಡೋದು. ಡಿ.ಕೆ.ಶಿವಕುಮಾರ್ ಅವರು ಕನಕಪುರದಲ್ಲಿ ಅರ್ಜಿ ಹಾಕುತ್ತಾರೆ. ಬಳಿಕ ರಾಜ್ಯ ಪ್ರವಾಸ ಮಾಡುತ್ತಾರೆ ಅಷ್ಟೇ ಎಂದು ತಿಳಿಸಿದರು.
ಗೆಲುವಿಗೆ ಕಾಂಗ್ರೆಸ್ ಭರ್ಜರಿ ಪ್ಲಾನ್
ಇನ್ನು ಕನಕಪುರದ ಬಂಡೆ ಎಂದು ಕರೆಯಲ್ಪಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕನಕಪುರಕ್ಕಷ್ಟೆ ಸೀಮಿತರಾಗಿದ್ದು, ಅದರಾಚೆಗೆ ರಾಮನಗರ ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಲ್ಲಿ ಅವರ ನಾಯಕತ್ವದಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಕನಕಪುರ ಮಾತ್ರವಲ್ಲದೆ, ಇತರೆ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅನ್ನು ಗೆಲ್ಲಿಸುವ ತಯಾರಿ ನಡೆಯುತ್ತಿದೆ.
ಕೆಪಿಸಿಸಿ ಅಧ್ಯಕ್ಷರಾಗಿದ್ದುಕೊಂಡು ತಮ್ಮ ಜಿಲ್ಲೆಯಲ್ಲಿಯೇ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ತಂದುಕೊಡದೆ ಹೋದರೆ ತಮ್ಮ ವರ್ಚಸ್ಸಿನ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡಬಹುದು ಎಂಬ ಆಲೋಚನೆಯೂ ಕಾಡುತ್ತಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕನಕಪುರ ಹೊರತುಪಡಿಸಿದರೆ ಉಳಿದಂತೆ ಮಾಗಡಿ, ರಾಮನಗರ, ಚನ್ನಪಟ್ಟಣದಲ್ಲಿ ಜೆಡಿಎಸ್ ಬಿಗಿಯಾಗಿದೆ. ಆದ್ದರಿಂದ ಜೆಡಿಎಸ್‌ನ ಭದ್ರಕೋಟೆಯನ್ನು ಛಿದ್ರಮಾಡಬೇಕೆಂಬುದು ಕಾಂಗ್ರೆಸ್‌ನ ಬಹುದಿನದ ಬೇಡಿಕೆಯಾಗಿದೆ. ಆದರೆ ಅದು ಹಿಂದಿನ ಚುನಾವಣೆಗಳಲ್ಲಿಯೂ ಸಾಧ್ಯವಾಗಿಲ್ಲ.












Click it and Unblock the Notifications