"ಟಿಕೆಟ್" ಭರವಸೆ ನೀಡಿ ಬಡವರ ಮಕ್ಕಳನ್ನು ಹಗಲು ಬಾವಿಗೆ ತಳ್ಳುವುದೇ ಕಾಂಗ್ರೆಸ್‌ನವರ ಕೆಲಸ: ಮಾಗಡಿ ಶಾಸಕ ಎ.ಮಂಜುನಾಥ್
ರಾಮನಗರ, ಏಪ್ರಿಲ್, 08: ಜಿಲ್ಲೆಯಲ್ಲಿ ಕಾಂಗ್ರೆಸ್‌ನವರು ಬಡವರ ಮಕ್ಕಳನ್ನು ಕರೆತಂದು ಭಾವಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ದುಡಿಸಿಕೊಂಡು ಟಿಕೆಟ್ ಕೊಡಿಸುತ್ತೇವೆ ಎಂದು ಭರವಸೆ ನೀಡಿ ಕೊನೆಗೆ ಟಿಕೆಟ್ ನೀಡದೆ, ರಾತ್ರಿ ಕಂಡ ಭಾವಿಗೆ ಹಗಲು ತಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ. ಬ್ರದರ್ಸ್ ಹೆಸರು ಹೇಳದೇ ಮಾಗಡಿ ಶಾಸಕ ಎ.ಮಂಜುನಾಥ್ ಆರೋಪಿಸಿದರು.
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಎ.ಮಂಜುನಾಥ್ ವಾಡಿಕೆಯಂತೆ ಪುರಾಣ ಪ್ರಸಿದ್ಧ ಶ್ರೀಕೆಂಗಲ್ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ನಂತರ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಹೋಬಳಿಯ ಕಣ್ವಾ, ಕ್ಯಾಸಪುರ, ಚಾಮನಹಳ್ಳಿ, ಅನಮಾನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಜೆಡಿಎಸ್‌ಗೆ ಮತ ನೀಡುವಂತೆ ಮತದಾರಿಗೆ ಕರಪತ್ರ ನೀಡಿ ಮತಯಾಚನೆ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಲವು ಮಂದಿಗೆ ಟಿಕೆಟ್ ನೀಡುವ ಭರವಸೆ ನೀಡಿ ದುಡಿಸಿಕೊಂಡಿದೆ. ಕೊನೆಗೆ ಅವರಿಗೆ ಟಿಕೆಟ್ ನೀಡದ ಹಲವು ಮಂದಿಯ ಪಟ್ಟಿಯೇ ಇದೆ. ಮರಿ ದೇವರು, ಪ್ರಸನ್ನ ಗೌಡಗೆ ಮೋಸ ಆಯಿತು ಎಂದರು.
ಕಾಂಗ್ರೆಸ್‌ನಲ್ಲಿ "ಟಿಕೆಟ್" ಗೊಂದಲ
ಕಾಂಗ್ರೆಸ್‌ನಲ್ಲಿದ್ದಾಗ ನನಗೂ ಮೋಸ ಆಗಿತ್ತು. ನಾನು ಒಬ್ಬ ಕಾಂಗ್ರೆಸ್‌ನಿಂದ ಮೋಸ ಹೋದ ಫಲಾನುಭವಿ ಆಗಿದ್ದೇನೆ. ಮುಂದೆ ಇಕ್ಬಾಲ್ ಹುಸೇನ್ ಅವರಿಗೂ ಮೋಸ ಆಗಲ್ಲ ಅಂತಾ ಏನು ಗ್ಯಾರಂಟಿ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ವಿಚಾರದಲ್ಲಿ ಸ್ಪಷ್ಟನೆ ಬೇಕು. ಕಾಂಗ್ರೆಸ್‌ನಲ್ಲಿ ಕ್ಲಾರಿಟಿ ಇಲ್ಲ ಎಂದು ಮಾಗಡಿ ಶಾಸಕ ಎ.ಮಂಜುನಾಥ್ ಆರೋಪ ಮಾಡಿದರು.
ಸಿಎಂ ಅಭ್ಯರ್ಥಿ ಯಾರೆಂದು ಹೇಳುವ ಧೈರ್ಯ ಇಲ್ಲ
ಜಿಲ್ಲೆಯ ಜನರು ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಮುಖ್ಯಮಂತ್ರಿ ಮಾಡಿದ್ದೀರಿ. ಈ ಬಾರಿ ನಮಗೆ ಆಶೀರ್ವಾದ ಮಾಡಿ ಎಂದು ಡಿ.ಕೆ.ಸಹೋದರರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಜೆಡಿಎಸ್ ಪಕ್ಷದಲ್ಲಿ ನಾವು ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತೇವೆ. ಆದರೆ ಕಾಂಗ್ರೆಸ್‌ನವರಿಗೆ ಆ ಧೈರ್ಯ ಇಲ್ಲ. ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್ ಅಥವಾ ಬೇರೆ ಯಾರು ಮುಖ್ಯಮಂತ್ರಿ ಆಗುತ್ತಾರೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲೆಯಲ್ಲಿ ಹೆಚ್ಚು ಶಾಸಕರನ್ನು ಗೆಲ್ಲಿಸುವ ಟಾಸ್ಕ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಡಿ.ಕೆ.ಶಿವಕುಮಾರ್ ಅವರು ಅವಿಭಾಜ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾಗಿದ್ದಾರೆ. ಅವರೇ ಸಾಕಷ್ಟು ಬಾರಿ ನಾವು ಬೆಂಗಳೂರು ಜಿಲ್ಲೆಯವರು ಎಂದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಷ್ಟು ಸ್ಥಾನ ಗೆಲ್ಲುತ್ತಾರೆ ಎಂಬುದು ಅವರಿಗೆ ಗೊತ್ತಿದೆ ಎಂದು ಎ.ಮಂಜುನಾಥ್ ಮಾರ್ಮಿಕವಾಗಿ ನುಡಿದರು
ಜೆಡಿಎಸ್ ಅಭ್ಯರ್ಥಿಗಳಿಗೆ HDD ಹಾಗೂ HDK ನಾಮಬಲ
ನಾನು ಸೇರಿದಂತೆ ಜೆಡಿಎಸ್ ಅಭ್ಯರ್ಥಿಗಳಿಗೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಾಮಬಲವಿದೆ. ಅವರ ನಾಮಬಲವೇ ನನಗೆ ಶ್ರೀರಕ್ಷೆಯಾಗಿದೆ. ಪಂಚರತ್ನ ಯೋಜನೆಗಳ ಅನುಷ್ಟಾನಕ್ಕೆ ನಮಗಿರುವ ಬದ್ಧತೆ ಹಾಗೂ ಕುಮಾರಣ್ಣ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಜನರಗೆ ತಿಳಿಸಿ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡುಕೊಳ್ಳುತ್ತೇವೆ. ನಾನು ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಮತ ಕೇಳುತ್ತೇನೆ ಎಂದರು.
ಜನರು ನಮ್ಮ ಅಭಿವೃದ್ಧಿ ಕಾರ್ಯ ನೋಡಿ ನಮ್ಮ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಆರೋಪಗಳಿಗೆ ತಿರುಗೇಟು ನೀಡಿದ ಎ.ಮಂಜುನಾಥ್, ಮಾಜಿ ಶಾಸಕರಿಗೆ ನಮ್ಮ ಮೇಲೆ ಆರೋಪ ಮಾಡಲು ವಿಚಾರ ಇಲ್ಲ. ಹಾಗಾಗಿ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ. ಮಾಜಿ ಶಾಸಕರು ವೈಯುಕ್ತಿಕ ಟೀಕೆಗೆ ಇಳಿಯುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಿವಿ ಮಾತು ಹೇಳಿದರು.
ನೀವು ಅಭಿವೃದ್ಧಿ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡಿ. ನಾನು ಶಾಸಕನಾಗಿ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಜನರಿಗೆ ತಿಳಿದಿದೆ. ಪರಸ್ಪರ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ಮತದಾರರನ್ನು ಓಲೈಸಲು ಆಗುವುದಿಲ್ಲ. ವೈಯಕ್ತಿಕ ಟೀಕೆಗೆ ಜನರು ನಮ್ಮ ಹಿಂದೆ ಮಾತ್ರ ನಗುವುದಿಲ್ಲ. ನಿಮ್ಮ ಹಿಂದೆ ಕೂಡ ನಿಮ್ಮ ವರ್ತನೆ ನೋಡಿ ಗೇಲಿ ಮಾಡುತ್ತಾರೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಶಾಸಕ ಎ.ಮಂಜುನಾಥ್ ಟಾಂಗ್ ಕೊಟ್ಟರು.












Click it and Unblock the Notifications