ರಾಮನಗರದ ಶೇಷಗಿರಿಹಳ್ಳಿಗೂ ಪುನೀತ್‌ಗೂ ಇದ್ದ ಆ ನಂಟು ಏನು?
ರಾಮನಗರ, ಅಕ್ಟೋಬರ್ 30: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಂಟು ಇಡೀ ಜಗತ್ತಿನೊಂದಿಗಿದೆ. ಅವರ ನಂಟಿನ ಗಂಟುಗಳನ್ನು ಬಿಚ್ಚುತ್ತಾ ಹೋದರೆ ಅದಕ್ಕೆ ಕೊನೆಯಿಲ್ಲ.
ಆದರೆ, ಪುನೀತ್ ರಾಜ್‌ಕುಮಾರ್‌ಗೂ ರಾಮನಗರ ತಾಲೂಕಿನ ಶೇಷಗಿರಿಹಳ್ಳಿಗೂ ಇರುವ ನಂಟಿನ ಕಥೆ ಈಗ ಬಿಚ್ಚಿಕೊಳ್ಳುತ್ತದೆ. ಪುನೀತ್ ತಮ್ಮ ಬಾಲ್ಯದ ದಿನಗಳನ್ನು ಇಲ್ಲಿ ಹೆಚ್ಚಾಗಿ ಕಳೆದಿದ್ದಾರಂತೆ. ಇವತ್ತಿಗೂ ಬಿಡದಿ ಸಮೀಪದ ಶೇಷಗಿರಿಹಳ್ಳಿಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ಬದಿಯಲ್ಲಿಯೇ ಪುನೀತ್ ಫಾರಂ ಹೌಸ್ ಇದೆ. ಇಲ್ಲಿ ತಮ್ಮ ಅಜ್ಜಿ ಲಕ್ಷ್ಮಮ್ಮ ಮತ್ತು ಚಿಕ್ಕಪ್ಪ ವರದರಾಜು ಅವರ ಸಮಾಧಿಗಳಿವೆ. ಹೀಗಾಗಿ ರಾಮನಗರ ಜಿಲ್ಲೆಗೂ ರಾಜ್ ಕುಂಟುಂಬಕ್ಕೂ ಗಾಢವಾದ ಸಂಬಂಧವಿರುವುದು ಗೋಚರಿಸುತ್ತದೆ.
ಈ ತೋಟದ ಮನೆಯಲ್ಲಿ ಪುನೀತ್ ರಾಜ್‌ಕುಮಾರ್ ಹೆಚ್ಚಿನ ದಿನಗಳನ್ನು ಕಳೆದಿದ್ದಾರೆ. ಇಲ್ಲಿ ಡಾ. ರಾಜ್‌ಕುಮಾರ್ ತಮ್ಮ ತಾಯಿ ಹಾಗೂ ಸಹೋದರ ವರದರಾಜು ಸಮಾಧಿಯನ್ನು ಕಟ್ಟಿಸಿದ್ದಾರೆ. ಇವರಿಬ್ಬರು ಅಣ್ಣಾವ್ರಿಗೆ ಅಚ್ಚುಮೆಚ್ಚಿನ ವ್ಯಕ್ತಿಗಳು. ಹೀಗಾಗಿ ಇಲ್ಲೊಂದು ಪುಟ್ಟ ಮನೆ ಮಾಡಿಕೊಂಡು, ತಮಗೆ ಬೇಸರವಾದಗಲ್ಲೆಲ್ಲ ಅವರು ಬಂದು ಹೋಗುತ್ತಿದ್ದರು. ಈ ವೇಳೆ ಅವರೊಂದಿಗೆ ಪುನೀತ್ ಕೂಡ ಇರುತ್ತಿದ್ದರು ಎಂದು ಆ ದಿನಗಳನ್ನು ಕೆಲವರು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಶೇಷಗಿರಿಹಳ್ಳಿಯ ತೋಟದ ಮನೆಯ ಬಗ್ಗೆ ಹೇಳುವುದಾದರೆ ಪುನೀತ್ ಹುಟ್ಟಿದ ವರ್ಷ ಅಂದರೆ, 1975ರಲ್ಲಿ ಡಾ. ರಾಜಕುಮಾರ್ ಶೇಷಗಿರಿಹಳ್ಳಿಯಲ್ಲಿ 22 ಎಕರೆ ಜಮೀನು ಖರೀದಿ ಮಾಡಿದ್ದರು. ಆ ನಂತರ ಅದರಲ್ಲಿ 7 ಎಕರೆ ಜಮೀನನ್ನು ತಮ್ಮ ಸಂಬಂಧಿಗಳಿಗೆ ಮಾರಾಟ ಮಾಡಿ 15 ಎಕರೆ ಭೂಮಿಯನ್ನು ಉಳಿಸಿಕೊಂಡಿದ್ದರು. ಅದರಲ್ಲಿ ಮನೆ ಕಟ್ಟಿ ಪುನೀತ್ ಫಾರಂ ಎಂದು ಹೆಸರಿಟ್ಟಿದ್ದರು. ಕ್ರಮೇಣ ಈ ಜಮೀನಿನ ಸಂಪೂರ್ಣ ಉಸ್ತುವಾರಿಯನ್ನು ಪುನೀತ್ ರಾಜ್‌ಕುಮಾರ್ ನೋಡಿಕೊಳ್ಳುತ್ತಿದ್ದರು.
ಶೇಷಗಿರಿಹಳ್ಳಿ ಬಳಿಯಿರುವ ಪುನೀತ್ ಫಾರಂ ತೋಟ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ್ದು, ಸರ್ವೆ ನಂ. 72 ಮತ್ತು 73ರಲ್ಲಿ ಇರುವ 13.08 ಎಕರೆ ಜಮೀನು ಈಗ ಡಾ.ರಾಜಕುಮಾರ್‌ರವರ ಐದು ಜನ ಮಕ್ಕಳಿಗೆ ಭಾಗ ಮಾಡಿಕೊಡಲಾಗಿದೆ.

ಇದರಲ್ಲಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸ್ವಲ್ಪ ಭಾಗ ಭೂಸ್ವಾಧೀನಕ್ಕೆ ಒಳಪಟ್ಟಿದೆ. ಉಳಿಕೆ ಜಾಗದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ಗೆ 2.19 ಎಕರೆ, ಲಕ್ಷ್ಮಿ ಗೋವಿಂದರಾಜ್‌ಗೆ 3 ಎಕರೆ, ಪೂರ್ಣಿಮಾ ರಾಮ್‌ಕುಮಾರ್‌ಗೆ 2.15 ಎಕರೆ, ಶಿವರಾಜ್‌ಕುಮಾರ್‌ಗೆ 1 ಎಕರೆ, ಪುನೀತ್ ರಾಜ್‌ಕುಮಾರ್ ಅವರಿಗೆ 2 ಎಕರೆಯಿದೆ.
ಈ ಜಮೀನು ಪುನೀತ್ ರಾಜ್‌ಕುಮಾರ್ ಅಚ್ಚುಮೆಚ್ಚಿನ ಸ್ಥಳವಾಗಿದ್ದರಿಂದ ಇಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ ಎಂಬ ಚರ್ಚೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ನಡೆದರೆ ಯಾವ ರೀತಿ ಬಂದೋಬಸ್ತ್ ಕಲ್ಪಿಸಬೇಕೆಂಬುದರ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಚರ್ಚೆಗೆ ಮುಂದಾಗಿ ಶುಕ್ರವಾರ ಅಧಿಕಾರಿಗಳು ಇಲ್ಲಿಗೆ ಆಗಮಿಸಿದ್ದರು. ಆದರೆ ಪುನೀತ್ ಅವರ ಅಂತ್ಯಸಂಸ್ಕಾರವನ್ನು ಡಾ. ರಾಜ್‌ಕುಮಾರ್‌ರವರ ಸಮಾಧಿ ಇರುವ ಬೆಂಗಳೂರಿನ ಕಂಠೀರವ ಸ್ಟುಡಿಯೋ ಸಮೀಪವೇ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ ಮೇರೆಗೆ ಹಿಂತಿರುಗಿದ್ದರು.
ಹಾಗೆ ನೋಡಿದರೆ ಈ ಹಿಂದೆ ಡಾ.ರಾಜ್‌ಕುಮಾರ್ ಮೃತಪಟ್ಟ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಪುನೀತ್ ಫಾರಂನಲ್ಲಿ ಅವರ ತಾಯಿ ಮತ್ತು ಸಹೋದರ ಅವರ ಸಮಾಧಿ ಬಳಿಯೂ ಗುಂಡಿ ತೆಗೆಯಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿಯೇ ಅಂತ್ಯಕ್ರಿಯೆ ನಡೆಸಿದ್ದರಿಂದ ಗುಂಡಿಯನ್ನು ಮುಚ್ಚಲಾಗಿತ್ತು.
ಪಾರ್ವತಮ್ಮ ರಾಜ್‌ಕುಮಾರ್ ಮೃತಪಟ್ಟಾಗಲೂ ಫಾರಂ ಹೌಸ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂಬ ಸುದ್ದಿಯು ಹರಡಿತ್ತು. ಇದೀಗ ಪುನೀತ್ ವಿಚಾರದಲ್ಲಿಯೂ ಅದೇ ಸುದ್ದಿ ಹರಡಿತ್ತು.
ಸದ್ಯಕ್ಕೆ ಎಲ್ಲ ನಂಟುಗಳನ್ನು ಬಿಟ್ಟು ಬಾರದ ಲೋಕದತ್ತ ಪುನೀತ್ ತೆರಳಿದ್ದರೂ, ಅವರ ನೆನಪು ಪ್ರತಿಯೊಬ್ಬ ಅಭಿಮಾನಿಯ ಹೃದಯದಲ್ಲಿ ಅಚ್ಚಳಿಯದೆ ಉಳಿಯಲಿದೆ. ಆ ನಂಟು ಯಾವತ್ತೂ ಈ ಭೂಮಿ ಮೇಲಿಂದ ಬಿಟ್ಟು ಹೋಗಲಾರದ ನಂಟು ಅದು ಅಮರ.