ಅತ್ಯಾಚಾರಿ ಶಿಕ್ಷಕನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ರಸ್ತೆಗಿಳಿದ ನೂರಾರು ಸ್ಟೂಡೆಂಟ್ಸ್
ಚನ್ನಪಟ್ಟಣ, ಅಕ್ಟೋಬರ್ 14: ಮಂಡ್ಯ ಜಿಲ್ಲೆಯಲ್ಲಿ ಮಳವಳ್ಳಿಯ ಟ್ಯೂಶನ್ ಸೆಂಟರ್‌ನಲ್ಲಿ 10 ವರ್ಷದ ಬಾಲಕಿಯ ಅತ್ಯಾಚಾರ ಮಾಡಿ ಹತ್ಯೆಗೈದಿರುವ ಆರೋಪಿ ಶಿಕ್ಷಕನಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು, ನೂರಾರು ವಿಧ್ಯಾರ್ಥಿಗಳು ಚನ್ನಪಟ್ಟಣದಲ್ಲಿ ಪ್ರತಿಭಟನೆ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಪಟ್ಟಣದ ಕಾವೇರಿ ಸರ್ಕಲ್‍ನಲ್ಲಿ ವಿದ್ಯಾರ್ಥಿನಿ ದಿವ್ಯಾಳ ಮೇಲಿ ಪೈಶಾಚಿಕ ಕೃತ್ಯ ಖಂಡಿಸಿ ಪ್ರತಿಭಟನೆ ಮತ್ತು ಬಾಲಕಿಯ ಆತ್ಮಕ್ಕೆ ಶ್ರದ್ದಾಂಜಲಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸರಕಾರಿ ಬಾಲಕಿಯರ ಕಾಲೇಜಿನ ವಿಧ್ಯಾರ್ಥಿಗಳು, ನಗರದ ಹಲವು ಖಾಸಗಿ ಕಾಲೇಜಿನ ವಿದ್ಯಾರ್ಥಿ ಹಾಗೂ ಆಟೋ ಚಾಲಕರು ಸೇರಿದಂತೆ ಹಲವು ಪ್ರಗತಿಪರರು ಪ್ರತಿಭಟನೆಗೆ ಸಾಥ್ ನೀಡಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ಕಕಜ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿ, "ಮಳವಳ್ಳಿಯ ವಿದ್ಯಾರ್ಥಿನಿ ಕು.ದಿವ್ಯಾಳ ಮೇಲೆ ನಡೆದಿರುವ ಪೃಶಾಚಿಕ ಕೃತ್ಯ ಅತ್ಯಂತ ಖಂಡನೀಯ ವಿಚಾರ. ಇದು ಇಡೀ ಮಾನವಕುಲ ತಲೆತಗ್ಗಿಸುವ ವಿಚಾರ, ಎಲ್ಲೋ ದೂರದ ದೆಹಲಿಯಲ್ಲಿ ನಡೆಯುತ್ತಿದ್ದ ಕೃತ್ಯ ನಮ್ಮ ಹಳ್ಳಿಗೆ ಬಂದಿರುವುದು ನೋವಿನ ವಿಚಾರ. ಈ ನಿಟ್ಟಿನಲ್ಲಿ ಕೂಡಲೇ ಸರ್ಕಾರ ಕಾನೂನಿನಲ್ಲಿ ಪರಿಷ್ಕರಣೆ ಮಾಡಿ ಶಿಕ್ಷಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು," ಎಂದು ಸರ್ಕಾರಕ್ಕೆ ಆಗ್ರಹ ಮಾಡಿದರು.

ಪೈಶಾಚಿಕ ಕೃತ್ಯಕ್ಕೆ ಕೈಹಾಕುವವರಿಗೆ ಪಾಠವಾಗುವ ಶಿಕ್ಷೆ ಅಗತ್ಯ
ನಿವೃತ್ತ ಪ್ರಾಂಶುಪಾಲರಾದ ನಿಂಗೇಗೌಡ, ಮಾತನಾಡಿ, "ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ ಈ ಕೃತ್ಯ ಎಸೆಗಿರುವ ಟ್ಯೂಶನ್ ಸೆಂಟರ್ ಶಿಕ್ಷಕನನ್ನು ಸಾರ್ವಜನಿಕರ ಮುಂದೆ ಗಲ್ಲಿಗೇರಿಸುವ ಕೆಲಸ ಆಗಬೇಕು ಅಥವಾ ಆರೋಪಿಯನ್ನು ತುಂಡು ತುಂಡಾಗಿ ಕತ್ತರಿಸಿಬೇಕು. ಆದರೆ ಕಾನೂನಿನಲ್ಲಿ ಅದಕ್ಕೆ ಅವಕಾಶ ಇಲ್ಲ. ಈ ನಿಟ್ಟಿನಲ್ಲಿ ನ್ಯಾಯಾಂಗವು ಕೂಡಲೇ ಯಾವುದೇ ವಿಚಾರಣೆ ಇಲ್ಲದೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದರೆ ಮಾತ್ರ ಇಂತಹ ಪೈಶಾಚಿಕ ಕೃತ್ಯಕ್ಕೆ ಕೈಹಾಕುವವರಿಗೆ ಎಚ್ಚರಿಕೆ ಗಂಟೆಯಾಗುತ್ತದೆ. 49 ವರ್ಷದ ಶಿಕ್ಷಕ ಕೃತ್ಯ ಮಾಡಿದ್ದಾನೆ ಎಂದರೆ ಇಂತಹವರನ್ನು ಕಾನೂನಿಗೆ ನೀಡದೆ ಎನ್‍ಕೌಂಟರ್ ಮಾಡಬೇಕು," ಎಂದು ಕಿಡಿಕಾರಿದರು.

ನ್ಯಾಯ ಸಿಗುವ ತನಕ ಹೋರಾಟ
ಮಹಿಳಾ ಸಂಘಟನೆಯ ಹೋರಾಟಗಾರ್ತಿ ಸುಕನ್ಯಾ ಮಾತನಾಡಿ, "ಕಾವಿ ತೊಟ್ಟು ಬಾಲಕಿಯರನ್ನು ಶೋಷಣೆ ಮಾಡಿದ ಸ್ವಾಮೀಜಿಯೊಬ್ಬರ ಪ್ರಕರಣ ಮಾಸುವ ಮುನ್ನವೇ ಮನೆ ಪಾಠದ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಪೈಶಾಚಿಕ ಕೃತ್ಯ ಎಸಗಿ ಅಪ್ಪ ಅಮ್ಮನಿಂದ ಮಗಳನ್ನು ಕಣ್ಮರೆ ಮಾಡಿದ್ದಾನೆ. ವಿದ್ಯಾರ್ಥಿನಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಇಂತಹ ನೀಚನಿಗೆ ಮಾನವ ಹಕ್ಕುಗಳು ಸಹ ರಕ್ಷಣೆ ನಿಲ್ಲಬಾರದು, ಸಮಾಜ ತಿದ್ದುವ ಗುರು ಈ ಕೃತ್ಯ ಮಾಡಿದ್ದಾನೆ ಎಂದರೆ ಯಾರಿಂದ ರಕ್ಷಣೆ ಪಡೆಯೋಣ. ಆ ಮಗುವಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗುವ ತನಕ ಹೋರಾಟ ಮಾಡೋಣ," ಎಂದು ಕರೆ ನೀಡಿದರು.

ಸಮಾಜ ತಲೆ ತಗ್ಗಿಸುವ ಕೆಲಸ
ಸರಕಾರಿ ಬಾಲಕಿಯರ ಕಾಲೇಜಿನ ಉಪನ್ಯಾಸಕಿ ಶ್ವೇತ ಮಾತನಾಡಿ, "ಸಮಾಜದಲ್ಲಿ ಇಂದು ಹೆಣ್ಣುಮಕ್ಕಳು ಶಿಕ್ಷಣ ಪಡೆದುಕೊಳ್ಳಲು ಹೋರಾಟ ಮಾಡಬೇಕಾಗಿದೆ. ಸಾವಿತ್ರಿ ಬಾಯಿಪುಲೆ ಇಲ್ಲದಿದ್ದರೆ ಹೆಣ್ಣು ಮಕ್ಕಳಿಗೆ ಶಿಕ್ಷಣವೂ ಸಿಗುತ್ತಿರಲಿಲ್ಲ. ಸಮಾಜದಲ್ಲಿ ಸ್ಥಾನಮಾನವೂ ಸಿಗುತ್ತಿರಲಿಲ್ಲ. ಹೆಣ್ಣುಮಕ್ಕಳು ತಮ್ಮ ಅಸ್ಥಿತ್ವಕ್ಕೆ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಈ ರೀತಿ ಗಲ್ಲಿ ಗಲ್ಲಿಗಳಲ್ಲಿ ಹೆಣ್ಣುಮಕ್ಕಳ ಮೇಲೆ ಪೈಶಾಚಿಕ ಕೃತ್ಯ ಅಮಾನವೀಯವಾಗಿದೆ. ವಿದ್ಯೆ ಕಲಿಸಿ ದಾರಿ ತೋರಬೇಕಾದ ಗುರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವುದು ಸಮಾಜ ತಲೆ ತಗ್ಗಿಸುವ ಕೆಲಸ, ಸಮಾಜದ ಎಲ್ಲರನ್ನು ತಿದ್ದುವ ಶಿಕ್ಷಕನೇ ಈ ರೀತಿ ಮಾಡಿದರೆ ನ್ಯಾಯ ಎಲ್ಲಿಂದ ಕೇಳೋಣ ಈ ನಿಟ್ಟಿನಲ್ಲಿ ಆರೋಪಿಯನ್ನು ಗಲ್ಲಿಗೆ ಏರಿಸಬೇಕು," ಎಂದು ಆಗ್ರಹಿಸಿದರು.

11 ವರ್ಷಗಳಲ್ಲಿ ಸುಮಾರು 2 ಸಾವಿರ ಮಕ್ಕಳ ಮೇಲೆ ದೌರ್ಜನ್ಯ
ಇದು ಒಂದು ಗ್ರಾಮಕ್ಕೆ ಸೀಮಿತವಾಗಿದೆ ಎಂದು ಜಾರಿಕೊಳ್ಳುವ ಘಟನೆ ಅಲ್ಲ. ದಿನಕ್ಕೆ 5 ಹೆಣ್ಣು ಮಕ್ಕಳಂತೆ ಕಳೆದ 11 ವರ್ಷಗಳಲ್ಲಿ ಸುಮಾರು 2 ಸಾವಿರ ಮಕ್ಕಳ ಪೈಶಾಚಿಕ ಕೃತ್ಯಕ್ಕೆ ಸಿಲುಕಿವೆ. ಆದರೆ ಘನ ನ್ಯಾಯಾಲಯಗಳು ಸಾಕ್ಷಿ ಕೇಳುತ್ತವೆ, ವರ್ಷಾನುಗಟ್ಟಲೆ ಪ್ರಕರಣ ನಡೆದು ಅಂತಿಮವಾಗಿ ಸೂಕ್ತ ಸಾಕ್ಷಿ ಇಲ್ಲದ ಕಾರಣ ನೀಡಿ ಆರೋಪಿಯನ್ನು ಖುಲಾಸೆಗೊಳಿಸುತ್ತದೆ. ಹಾಗಾಗಿ ಈ ಪ್ರಕರಣದಲ್ಲಿ ಆತ ಆರೋಪಿ ಅಲ್ಲ ಆತನೆ ಕೃತ್ಯ ಎಸಗಿದ್ದಾನೆ ಎಂದು ಸಾಬೀತಾಗಿರುವ ಕಾರಣ ಆತನಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಬೇಕು ಎಂದು ಯೋಗ ಶಿಕ್ಷಕಿ ರಾಧಿಕಾ ರವಿಕುಮಾರ್ ಗೌಡ ಒತ್ತಾಯಿಸಿದರು.












Click it and Unblock the Notifications