ಭಾರೀ ಮಳೆಗೆ ಬಾಳೆ ನಷ್ಟ: ಆತ್ಮಹತ್ಯೆಯ ಎಚ್ಚರಿಕೆ ನೀಡಿದ ರೈತ
ರಾಮನಗರ, ಮೇ 18: ಕಳೆದ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಚನ್ನಪಟ್ಟಣ ತಾಲ್ಲೂಕಿನ ಹಲವಾರು ಹಳ್ಳಿಗಳಲ್ಲಿ ಅಪಾರ ನಷ್ಟ ಸಂಭವಿಸಿದ್ದು, ಇದರಿಂದ ನೊಂದ ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರಸ್ತೆ ಮೇಲೆ ಬಾಳೆ ಗಿಡಗಳನ್ನಿಟ್ಟು ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.
ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಗೋವಿಂದಹಳ್ಳಿ ಗ್ರಾಮ ಹಾಗೂ ಸುತ್ತಮುತ್ತ ತೆಂಗು ಸೇರಿದಂತೆ ಸುಮಾರು 50 ಎಕರೆ ಬಾಳೆ ತೋಟಗಳು ನೆಲಸಮವಾಗಿ ರೈತರ ಲಕ್ಷಾಂತರ ರುಪಾಯಿ ಬೆಳೆ ನಷ್ಟವಾಗಿದೆ. ಇದರಿಂದ ಮನನೊಂದ ರೈತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ಘೋಷಿಸುವಂತೆ ಅಗ್ರಹಿಸಿ ಗೋವಿಂದಹಳ್ಳಿ ರಸ್ತೆಗೆ ಬಾಳೆ ಗಿಡಗಳನ್ನು ಸುರಿದು ಪ್ರತಿಭಟನೆ ನಡೆಸಿದರು.

ಇನ್ನು ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಸುದರ್ಶನ್, ನೊಂದ ರೈತರ ಮನವೊಲಿಸುವ ಕಾರ್ಯಕ್ಕೆ ಮುಂದಾದರು. ಈ ವೇಳೆ ರೈತರು ಹಾಗೂ ತಹಶೀಲ್ದಾರ್ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಈ ವೇಳೆ ಓರ್ವ ರೈತ ಸೂಕ್ತ ಪರಿಹಾರ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದರು.

ಇತ್ತೀಚಿಗೆ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೂರಣಗೆರೆ ಗ್ರಾಮದ ರೈತ ಕುಮಾರ್, ತಹಶೀಲ್ದಾರ ಅವರಿಗೆ ಕೈ ಮುಗಿದು ಸೂಕ್ತ ಪರಿಹಾರ ಕೊಡಬೇಕು, ಇಲ್ಲದಿದ್ದರೆ ಕುಟುಂಬದವರೆಲ್ಲಾ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications