ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಎಚ್‌ಡಿಕೆ ಶಾಕಿಂಗ್ ಹೇಳಿಕೆ
ಕೇಂದ್ರ ಸಚಿವ ಹಾಗೂ ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿ ಯಾರಾಗುತ್ತಾರೆ? ಎಂಬ ಬಗ್ಗೆ ನೀವೆಲ್ಲ ಚಿಂತೆ ಮಾಡಬೇಡಿ. ನಮ್ಮ ತೀರ್ಮಾನಕ್ಕೆ ನೀವೆಲ್ಲ ಸಹಕಾರ ಕೊಡಬೇಕು. ಪಕ್ಷದ ಕಾರ್ಯಕರ್ತರು ಕೂಡ ಈ ಬಗ್ಗೆ ನಮ್ಮೊಂದಿಗೆ ನಿಲ್ಲಬೇಕು ಎಂದು ಅಭ್ಯರ್ಥಿ ಬಗ್ಗೆ ಗುಟ್ಟು ಉಳಿಸಿಕೊಂಡಿದ್ದಾರೆ.
ತಂದೆ ದೇವೇಗೌಡರು ಈ ವಯಸ್ಸಿನಲ್ಲೂ ಬಂದು ಚನ್ನಪಟ್ಟಣದಲ್ಲಿ ಬಂದು ಹಳ್ಳಿಹಳ್ಳಿಯಲ್ಲಿ ಪ್ರಚಾರ ಮಾಡುವುದಾಗಿ ನನಗೆ ಹೇಳಿದ್ದಾರೆ. ಹಾಗಾಗಿ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಕುಮಾರಸ್ವಾಮಿ ಕೇಳಿಕೊಂಡರು. ಕಾಂಗ್ರೆಸ್ ನಾಯಕರು ಹೇಳಿರುವಂತೆ ನನ್ನನ್ನು ಅಷ್ಟು ಸುಲಭವಾಗಿ ಹೆದರಿಸಲು ಸಾಧ್ಯವಿಲ್ಲ. ಯಾರ ಕೈಯಿಂದಲೂ ಏನೂ ಮಾಡೋಕೆ ಆಗಲ್ಲ ಎಂದರು.

ನನಗೆ ಭಗವಂತನ ಆಶೀರ್ವಾದವಿದೆ. ನಿಮ್ಮ ಶಕ್ತಿ ನಮ್ಮೊಂದಿಗೆ ಇರುವವರೆಗೂ ನಮ್ಮನ್ನು ಯಾರೂ ಏನೂ ಮಾಡಲು ಆಗುವುದಿಲ್ಲ. ಚನ್ನಪಟ್ಟಣ ಅಭ್ಯರ್ಥಿ ವಿಚಾರದ ಬಗ್ಗೆ ನೀವೆಲ್ಲ ತಲೆಕೆಡಿಸಿಕೊಳ್ಳಬೇಡಿ. ಇಲ್ಲಿ ಯಾರೇ ನಿಂತರೂ ಜನರ ಸೇವೆಗಾಗಿ ಗೆಲ್ಲಿಸುತ್ತೇವೆ ಎಂದು ನನಗೆ ಮಾತು ಕೊಡಿ ಎಂದು ಕೇಳಿದರು.
ನನಗೆ ಮೂರು ಸಲ ಆಪರೇಷನ್ ಆಗಿದೆ. ನಾನು ಬದುಕಿರುವುದೇ ಹೆಚ್ಚು. ದೇವರು ನನಗೆ ಮೂರನೇ ಜನ್ಮ ನೀಡಿದ್ದಾನೆ. ನಾನು ಜನಕ್ಕೆ ಹೆದರುತ್ತೇನೇ ಹೊರತು ಇನ್ಯಾರಿಗೂ ಅಲ್ಲ. ಬಾಕಿ ಎಂತಹ ನೂರು ಜನ ಬಂದರೂ ಹೆದರುವುದಿಲ್ಲ. ಕಾಂಗ್ರೆಸ್‌ನವರ ಅಧಿಕಾರದ ದರ್ಪ, ಹಣದ ಬಲ ಇದಕ್ಕೆಲ್ಲ ನಾನು ಹೆದರುವವನಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನನಗೆ ಪೊಲೀಸರಿಂದ ರಕ್ಷಣೆ ಇರಬಹುದು. ಆದರೆ, ನಾನು ಜನರಿಂದ ದೂರು ಉಳಿಯುವ ವ್ಯಕ್ತಿಯಲ್ಲ. ಯಾರು ಬೇಕಾದರೂ ಬಂದು ನನ್ನ ಶರ್ಟ್ ಹಿಡಿದು ನಿನ್ನಿಂದ ಅನ್ಯಾಯ ಆಗಿದೆ ಎಂದು ಪ್ರಶ್ನಿಸಬಹುದು. ಆ ಅಧಿಕಾರ ನಿಮಗೆ ಮಾತ್ರವೇ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಎಣ್ಣೆ ಏಟಲ್ಲಿ ಕಿರಿಕ್: ಕುಮಾರಸ್ವಾಮಿ ಅವರು ಭಾಷಣ ಮಾಡುವಾಗ ನಡುವೆ ಅಲ್ಲಿದ್ದ ವ್ಯಕ್ತಿಯೊಬ್ಬ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ವೇದಿಕೆಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿದ್ದಾಗ ಎದ್ದು ನಿಂತ ವ್ಯಕ್ತಿಯೊಬ್ಬ ಜೋರಾಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಕುಮಾರಸ್ವಾಮಿ ಅವರು ಆ ವ್ಯಕ್ತಿಯನ್ನು ಹತ್ತಿರಕ್ಕೆ ಬಿಡ್ರಪ್ಪ, ಎಂದು ಹೇಳಿದರು. ಪೊಲೀಸರಿಗೆ ಆತನನ್ನು ತಡೆಯಬೇಡಿ ಎಂದೂ ಹೇಳಿದರು. ಏನಾದರೂ ಸಮಸ್ಯೆ ಇದ್ದರೆ ಬಂದು ಹೇಳಿಕೋ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕೇಳಿಕೊಂಡರು.
ಈ ವೇಳೆ ಎದ್ದು ಬಂದ ಆತನನ್ನು ಸ್ಥಳೀಯರು ಪರಿಶೀಲಿಸಿದಾಗ ಆತ ಮದ್ಯಪಾನ ಮಾಡಿರುವುದು ಗೊತ್ತಾಗಿದೆ. ಬಳಿಕ ಅಲ್ಲಿದ್ದವರೆಲ್ಲ ಆತ ಎಣ್ಣೆ ಏಟಿನಲ್ಲಿದ್ದಾನೆ ಎಂದ ಕೂಡಲೇ ಕುಮಾರಸ್ವಾಮಿ ನಗುತ್ತಾ ಸುಮ್ಮನಾದರು. ಈ ವೇಳೆ ಕುಮಾರಸ್ವಾಮಿ ಅಲ್ಲಿದ್ದವರನ್ನು ಆತ ಎಣ್ಣೆ ಹಾಕಿದ್ದಾನಾ? ಅದೂ ಬೆಳ್ ಬೆಳಿಗ್ಗೆ ಎಂದು ನಕ್ಕಿದ್ದಾರೆ. ಎಷ್ಟು ದುಡ್ ಕೊಟ್ರಪ್ಪ ಎಣ್ಣೆ ಹಾಕೋಕೆ ನಿಂಗೆ? ಎಂದು ಕುಮಾರಸ್ವಾಮಿ ಕೇಳಿದ್ದಾರೆ.
ಬಳಿಕ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಇಂತವರನ್ನು ಇಟ್ಟುಕೊಂಡು ಆಟವಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧವೂ ತಿರುಗೇಟು ನೀಡಿದರು. ಕೊನೆಗೆ ಪೊಲೀಸರು ಆ ವ್ಯಕ್ತಿಯನ್ನು ದೂರಕ್ಕೆ ಕರೆದುಕೊಂಡು ಹೋದರು ಎನ್ನಲಾಗಿದೆ.












Click it and Unblock the Notifications