ಜೆಡಿಎಸ್ ಕಥೆ ಮುಗಿಯಿತು ಎಂದವರಿಗೆ ಉತ್ತರ ಸಿಕ್ಕಿದೆ; ಎಚ್‌ಡಿಕೆ
ರಾಮನಗರ, ಡಿಸೆಂಬರ್ 30; "ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುವ ಮೂಲಕ ಜೆಡಿಎಸ್ ಕಥೆ ಮುಗಿದೇ ಹೋಯಿತು ಎನ್ನುವವರಿಗೆ ಮತದಾರರು ಉತ್ತರ ನೀಡಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರೋಧಿಗಳಿಗೆ ಟಾಂಗ್ ನೀಡಿದರು.
ಗುರುವಾರ ಬಿಡದಿಯ ಕೇತಿಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಬಿಡದಿ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ರಾಜ್ಯದ ಬಿಜಾಪುರ, ರಾಯಚೂರು, ಶಿರಾದಲ್ಲಿಯೂ ನಮ್ಮವರು ಗೆದ್ದಿದ್ದಾರೆ" ಎಂದರು.
"ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದರು, ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದವರಿಗೆ ಜನ ಇವತ್ತು ಅಲ್ಲಿಯೂ ಉತ್ತರ ನೀಡಿದ್ದಾರೆ . ಉಪಚುನಾವಣೆಗಳು ಫಲಿತಾಂಶ ಬೇರೆ, ಸಾರ್ವತ್ರಿಕ ಚುನಾವಣೆಗಳ ಫಲಿತಾಂಶ ಬೇರ ರೀತಿಯಲ್ಲಿ ವ್ಯಕ್ತವಾಗುತ್ತದೆ" ಎಂದು ಕುಮಾರಸ್ವಾಮಿ ವಿಶ್ಲೇಷಿಸಿದರು.

2022 ಜೆಡಿಎಸ್ ಸಂಘಟನಾ ವರ್ಷ; "2022 ಜೆಡಿಎಸ್ ಪಕ್ಷದ ಸಂಘಟನಾ ವರ್ಷವಾಗಿದ್ದು, ಸಂಕ್ರಾತಿಯ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಿ ನನ್ನ ಕನಸಿನ ಮಿಷನ್ 123 ಗುರಿ ಮುಟ್ಟಲು ಸಂಘಟನೆ ಮಾಡುವುದಾಗಿ" ಕುಮಾರಸ್ವಾಮಿ ಘೋಷಣೆ ಮಾಡಿದರು.
"ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಯಲ್ಲಿ ನಮ್ಮನ್ನ ಬಿಟ್ಟು ಬೇರೆಯವರು ಅಧಿಕಾರ ಮಾಡಲು ಆಗಲ್ಲ , ಅಲ್ಲಿನ ನಗರಸಭೆಯಲ್ಲಿ ನಮ್ಮ ಬೆಂಬಲ ಇದ್ದವರಿಗೆ ಅಧಿಕಾರ ಸಿಗುತ್ತದೆ. ಅಲ್ಲದೇ ರಾಜ್ಯದ ಹಲವಾರು ಕ್ಷೇತ್ರದಲ್ಲಿ ನಮ್ಮ ಬೆಂಬಲ ಬೇಕೆಬೇಕು, ಅದೇ ಪರಿಸ್ಥಿತಿ ಇದೇ, ನಾವು ಆರ್ಥಿಕವಾಗಿ ಶಕ್ತಿ ತುಂಬಿಲ್ಲ, ಕಾರ್ಯಕರ್ತರೇ ಹೋರಾಟ ಮಾಡಿದ್ದಾರೆ" ಎಂದರು.
"ಕರಾವಳಿಯಲ್ಲಿಯೂ ನಮಗೆ ಒಂದು ಸ್ಥಾನ ಸಿಕ್ಕಿದೆ, ಅಲ್ಲಿ ನಮ್ಮ ಬೇಸ್ ಇರಲಿಲ್ಲ. ರಾಜಕೀಯ ವಿಶ್ಲೇಷಕರ ನಿರೀಕ್ಷೆ ಬದಲಾಗಲಿದೆ. ಸಂಕ್ರಾಂತಿಯಿಂದ ಒಂದು ದಿನವೂ ಬಿಡುವು ತೆಗೆದುಕೊಳ್ಳಲ್ಲ, 123 ಗುರಿ ತಲುಪಲು ಸಂಘಟನೆ ಮಾಡುತ್ತೇವೆ, ಯಾರು ಎಷ್ಟೇ ಲಘುವಾಗಿ ಮಾತನಾಡಲಿ. ನಮ್ಮದೇ ಆದ ರೀತಿಯಲ್ಲಿ ಸಂಘಟನೆ ಪ್ರಾರಂಭಿಸುತ್ತೇವೆ" ಎಂದು ಹೇಳಿದರು.
ಪಾದಯಾತ್ರೆ ತೊಡಗಾಗುತ್ತದೆ; "ಕಾಂಗ್ರಸ್ ಪಾದಯಾತ್ರೆಯಿಂದಾಗಿ ಕೇಂದ್ರ ಕೊಡಬೇಕಿದ್ದ ಕ್ಲಿಯರೇನ್ಸ್ ಕೊಡದೆ ತಡ ಮಾಡುತ್ತಾರೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಯಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಮುಂದಿನ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಕ್ಲಿಯರೇನ್ಸ್ ನೀಡುತ್ತದೆ ಎಂದಿದ್ದಾರೆ. ಕಾಂಗ್ರಸ್ ಪಾದಯಾತ್ರೆಯಿಂದ ಅನುಮತಿ ನೀಡುವಲ್ಲಿ ಕೇಂದ್ರ ವಿಳಂಬ ಮಾಡುತ್ತದೆ" ಎಂದು ಕುಮಾರಸ್ವಾಮಿ ತಿಳಿಸಿದರು.
"ಮೇಕೆದಾಟುಗಾಗಿ ಪಾದಯಾತ್ರೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಭಾಗವಹಿಸಲಿ" ಎಂಬ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ನಾನು ಪಾದಯಾತ್ರೆಯಲ್ಲಿ ಭಾಗವಹಿಸಿ ಏನು ಮಾಡೋದು ಹೇಳಿ?, ಪಾದಯಾತ್ರೆ ಅವಶ್ಯಕತೆ ಇಲ್ಲ, ಟೆಕ್ನಿಕಲ್ ಸಮಸ್ಯೆ ಇದೇ, ಬಿಜೆಪಿಯವರಿಗೆ ದುಡ್ಡಿನ ಸಮಸ್ಯೆ ಇದೆ" ಎಂದರು.
"ಮೇಕೆದಾಟು ಡಿಪಿಆರ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಳುಹಿಸಿದ್ದೆ ಅಂತಾ. ಆದರೆ ನಾನು ಸಿಎಂ ಆಗಿದ್ದಾಗ ಯೋಜನೆಯ ಡಿಪಿಆರ್ ಕಳುಹಿಸಿರೋದು. ಇದನ್ನು ವಿಧಾನಸಭೆ ಕಲಾಪದಲ್ಲಿ ನೀರಾವರಿ ಮಂತ್ರಿ ಪ್ರಶ್ನೋತ್ತರ ಕಾಲದಲ್ಲಿ ಉತ್ತರಿಸಿದ್ದಾರೆ. ಡಿಪಿಆರ್ ಸಿದ್ಧವಾಗಿದ್ದು ನಮ್ಮ ಕಾಲದಲ್ಲಿ ಅನ್ನುವ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದ 5 ವರ್ಷ ಅವಧಿಯಲ್ಲಿ ಮಾಡಬೇಕಿತ್ತು. ಇವರನ್ನ ಮೇಕೆದಾಟು ಯೋಜನೆ ಮಾಡಬೇಡಿ ಎಂದು ಹಿಡಿದುಕೊಂಡಿದ್ದವರು ಯಾರು?" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ನಮ್ಮ ಹೋರಾಟ ಜನರ ಒಳಿತಿಗಾಗಿ; "ಜನರ ಒಳತಿಗಾಗಿ ದೇವೇಗೌಡರು ಹಲವು ಪಾದಯಾತ್ರೆ ಮಾಡಿದ್ದಾರೆ. ನಾನು ಹುಬ್ಬಳ್ಳಿವರೆಗೆ ಪಾದಯಾತ್ರೆ ಮಾಡಿದ್ದೆನೆ. ಆ ಪಾದಯಾತ್ರೆಗೂ ಕಾಂಗ್ರಸ್ ಮೇಕೆದಾಟು ಪಾದಯಾತ್ರೆಗೂ ವ್ಯತ್ಯಾಸ ಇದೇ. ಚನ್ನಪಟ್ಟಣದ ವಿಠಲೇನಹಳ್ಳಿಯಿಂದ ಬೆಂಗಳೂರಿನವರೆಗೆ ದೇವೇಗೌಡರು ಪಾದಯಾತ್ರೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ರೈತರು ಸಾವನ್ನಪ್ಪಿದರು ಅದರ ವಿರುದ್ಧ ಪಾದಯಾತ್ರೆ ಮಾಡಿದ್ದರು" ಎಂದರು.












Click it and Unblock the Notifications