ಗ್ರಾ.ಪಂ ಚುನಾವಣೆ: ರಾಮನಗರದಲ್ಲಿ ಶೂನ್ಯದಿಂದ ಮೂರಂಕಿ ದಾಟಿದ ಬಿಜೆಪಿ ಬೆಂಬಲಿತರು
ರಾಮನಗರ: ಡಿಸೆಂಬರ್ 31: ರಾಮನಗರ ಜಿಲ್ಲೆಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಸಂಖ್ಯೆ ಶೂನ್ಯದಿಂದ ಮೂರಂಕಿ ದಾಟುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ.
ಜಿಲ್ಲೆಯ 4 ತಾಲೂಕುಗಳಲ್ಲಿ 234ಕ್ಕೂ ಹೆಚ್ಚು ಕಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು, ಇದಕ್ಕೆ ಕಾರಣರಾದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೆ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅಭಿನಂದನೆ ಸಲ್ಲಿಸಿದ್ದಾರೆ.
ಜೊತೆಯಾಗಿ ಗ್ರಾಮ ಪಂಚಾಯತಿ ಪ್ರವೇಶ ಮಾಡಿದ ಅತ್ತೆ-ಸೊಸೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭದ್ರಕೋಟೆ ಕನಕಪುರದಲ್ಲಿಯೇ ಬಿಜೆಪಿ 52 ಗ್ರಾ.ಪಂ ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿದೆ. ತಾಲ್ಲೂಕಿನ ಎಲ್ಲ ಪಂಚಾಯಿತಿಗಳ ಅನೇಕ ಗ್ರಾಮಗಳಲ್ಲಿ ಕೇಸರಿ ಬಾವುಟ ಹಾರಿದ್ದು, ಜೆಡಿಎಸ್‌ಗಿಂತ (45) ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಬಹುಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಪರಮಾಪ್ತರಾಗಿದ್ದ ಅನೇಕ ಅಭ್ಯರ್ಥಿಗಳಿಗೆ ಕಮಲಪಾಳಯ ಸೋಲಿನ ರುಚಿ ತೋರಿಸಿದೆ.

ಭದ್ರಕೋಟೆಗಳಲ್ಲಿ ಕಾಂಗ್ರೆಸ್ ಪರಾಜಯ
ಈ ಪೈಕಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್ ಅವರು ತಮ್ಮ ಸ್ವಗ್ರಾಮ ಚಿಕ್ಕೊಂಡಳ್ಳಿಯಲ್ಲಿ ಮತ್ತು ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್ ಅವರು ತಮ್ಮ ಹುಟ್ಟೂರು ಕುರುಬಳ್ಳಿದೊಡ್ಡಿ ಗ್ರಾಮದಲ್ಲಿ ಹೀನಾಯವಾಗಿ ಸೋತಿರುವುದು ಕೇಸರಿ ದಾಳಿಗೆ ಸಾಕ್ಷಿಯಾಗಿದೆ.
ರಾಮನಗರ ತಾಲ್ಲೂಕಿನಲ್ಲಿ 22 ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಏರ್ಪಟ್ಟಿದ್ದರೂ, ತನ್ನ ಭದ್ರಕೋಟೆಯಾಗಿದ್ದ ಗ್ರಾಮಗಳಲ್ಲಿ ಕಾಂಗ್ರೆಸ್ ಸೋತು ಅನುಭವಿಸಿದೆ

ಕಮಲದ ಅಬ್ಬರಕ್ಕೆ ಕಾಂಗ್ರೆಸ್ ಮಂಕಾಗಿದೆ
ಇನ್ನು ಮಾಗಡಿ ತಾಲ್ಲೂಕಿನಲ್ಲಿ ಬಿಜೆಪಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ದಾಖಲಿಸಿದೆ. ಈ ತಾಲ್ಲೂಕಿನಲ್ಲಿ ದಿನವಿಡೀ ಪ್ರಚಾರ ನಡೆಸಿದ್ದ ಉಪ ಮುಖ್ಯಮಂತ್ರಿ, ಮುಖಂಡರೆಲ್ಲರನ್ನೂ ಒಟ್ಟು ಮಾಡಿಕೊಂಡು ಗ್ರಾಮ ಗ್ರಾಮಕ್ಕೂ ಭೇಟಿ ನೀಡಿದ್ದರು.
ಚನ್ನಪಟ್ಟಣ ತಾಲ್ಲೂಕಿನಲ್ಲಿ ಬಿಜೆಪಿ ನಿರೀಕ್ಷೆ ಹುಟ್ಟಿಸಿದ್ದು, ಅಲ್ಲಿ ಕಮಲದ ಅಬ್ಬರಕ್ಕೆ ಕಾಂಗ್ರೆಸ್ ಮಂಕಾಗಿದೆ. 142ಕ್ಕೂ ಹೆಚ್ಚು ಪಂಚಾಯಿತಿ ಸ್ಥಾನಗಳಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ್ದರೆ, ಕಾಂಗ್ರೆಸ್ 82 ಕಡೆ ಮಾತ್ರ ಗೆದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
|
ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ ಓಡಾಟ
ಜಿಲ್ಲೆಯಲ್ಲಿ ಹಮ್ಮಿಕೊಂಡ ಗ್ರಾಮ ಸ್ವರಾಜ್ಯ ಸಮಾವೇಶಗಳು ಪರಿಣಾಮ ಉತ್ತಮ ಬೀರಿವೆ. ಮುಖ್ಯವಾಗಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ಗ್ರಾ.ಪಂ ಚುನಾವಣೆ ದಿನಾಂಕ ಪ್ರಕಟವಾದ ದಿನದಿಂದ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಸಂಚಾರ ಮಾಡಿ, ಬಹುತೇಕ ಎಲ್ಲ ಕಾರ್ಯಕರ್ತರ ಸಂಪರ್ಕಕ್ಕೂ ಸಿಕ್ಕಿದ್ದರು. ಹೀಗಾಗಿ ತಳಮಟ್ಟದಲ್ಲಿ ಕಮಲ ಬೇರೂರಲು ಕಾರಣವಾಯಿತು ಎನ್ನಲಾಗುತ್ತಿದೆ.
|
ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ
ರಾಜ್ಯದ ಪ್ರಬಲ ರಾಜಕೀಯ ಮುಖಂಡರನ್ನು ಹೊಂದಿರುವ ಜಿಲ್ಲೆಯಲ್ಲಿ ಕೇಸರಿ ಬಾವುಟ ಹಾರಿರುವುದು ಕಮಲ ಪಾಳಯದಲ್ಲಿ ಹುಮ್ಮಸ್ಸು ಮೂಡಿಸಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಹಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಮಾಗಡಿ ಶಾಸಕ ಎ.ಮಂಜುನಾಥ್ ಅಬ್ಬರದ ನಡುವೆಯೂ ಬಿಜೆಪಿ ಬೆಂಬಲದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.