ಮೈಸೂರು ಅತ್ಯಾಚಾರ ಪ್ರಕರಣ; ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ
ರಾಮನಗರ, ಆಗಸ್ಟ್ 27; ಮೈಸೂರು ಗ್ಯಾಂಗ್ ಪ್ರಕರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ನಿನ್ನೆಯಿಂದ ಕಾಂಗ್ರೆಸ್-ಬಿಜೆಪಿ ನಾಯಕರ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದೇನೆ. ಅದರ ಬಗ್ಗೆ ಪರ-ವಿರೋಧದ ಹೇಳಿಕೆಯನ್ನು ಗಮನಿಸಿದ್ದೇನೆ. ಮೈಸೂರಿನಲ್ಲಿ ಇಂತಹದ್ದೊಂದು ಅಮಾನವೀಯ ಕೃತ್ಯ ನಡೆಯಬಾರದಿತ್ತು" ಎಂದು ವಿಷಾದ ವ್ಯಕ್ತಪಡಿಸಿದರು.
ಶುಕ್ರವಾರ ರಾಮನಗರದ ಚನ್ನಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉದ್ಯಾನವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿದರು.
"ಇದರಲ್ಲಿ ಮೊದಲು ಸರ್ಕಾರದ ವೈಫಲ್ಯವಿದೆ. ಪೊಲೀಸ್ ಇಲಾಖೆ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಸಾರ್ವಜನಿಕವಾಗಿ ಮದ್ಯಪಾನಕ್ಕೆ ಅವಕಾಶ ಕೊಟ್ಟಿದ್ದೇ ತಪ್ಪು. ಪೊಲೀಸ್ ಇಲಾಖೆಯಲ್ಲಿ ಅಸಮರ್ಥತೆ ಎದ್ದು ಕಾಣಿಸುತ್ತಿದೆ" ಎಂದರು.

"ಪೊಲೀಸ್ ಅಧಿಕಾರಿಗಳನ್ನು ಹಣ ಪಡೆದು ವರ್ಗಾವಣೆ ಮಾಡುವುದನ್ನು ನಿಲ್ಲಿಸುವವರೆಗೆ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿರುತ್ತದೆ. ನನಗೆ ಈ ಸಂಬಂಧ ಹಲವು ಮಾಹಿತಿಗಳು ಇವೆ ಎಲ್ಲವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ, ಸರಕಾರ ಮೊದಲು ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.
"ಗ್ರಾಮೀಣ ಭಾಗದಲ್ಲಿ ಮಟ್ಕಾ ದಂಧೆಗಳು ನಡೆಯುತ್ತಿವೆ. ಸರ್ಕಾರ ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು. ಉತ್ತರ ಪ್ರದೇಶ, ದೆಹಲಿಯಂತಾ ಕಡೆಗಳಲ್ಲಿ ನಡೆದ ಇಂತಹ ಅಮಾನವೀಯ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ" ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
"ಗೃಹ ಸಚಿವರು ಅಂತಹ ಪದಗಳನ್ನು ಯಾಕೆ ಬಳಸಿದರು ಅನ್ನೋದು ಗೊತ್ತಿಲ್ಲ. ಈ ಹಿಂದೆ ಇದೇ ಗೃಹ ಸಚಿವರು ನಾನು ಮಂತ್ರಿ ಆಗುತ್ತಿದಂತೆ ನನಗೆ ನಿದ್ದೆ ಬರುತ್ತಿಲ್ಲ ಅಂತಾ ಹೇಳಿಕೆ ನೀಡಿದ್ದರು, ಪೊಲೀಸ್ ಇಲಾಖೆ ನಿಭಾಯಿಸುವಲ್ಲಿ ಗೃಹ ಸಚಿವರಿಗೆ ಸಮಸ್ಯೆ ಇರಬಹುದೆನೋ?" ಎಂದು ಎಚ್. ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.
"ಕೆಲ ದಿನಗಳ ಹಿಂದೆ ಆಂಧ್ರ ಪ್ರದೇಶದಲ್ಲಿ ಇಂತಹ ಘಟನೆ ನಡೆಯಿತು. ಅಲ್ಲಿನ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡರು ಅವರನ್ನು ಅಭಿನಂದಿಸುತ್ತೇನೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಇಂತಹ ಘಟನೆಗಳಿಗೆ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಗೃಹ ಇಲಾಖೆ ಒಂದು ಸೂಕ್ಷ್ಮವಾದ ಇಲಾಖೆ. ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡಬೇಕು" ಎಂದರು.
"ಇಂತಹ ಘಟನೆಗಳಲ್ಲಿ ಎಲ್ಲಿಯವರೆಗೆ ಕಠಿಣವಾದ ಕ್ರಮ ಕೈಗೊಳ್ಳುವುದಿಲ್ಲ ಅಲ್ಲಿಯವರೆಗೆ ಕಾಮಕರು ಅಂಜುವುದಿಲ್ಲ, ಕೇವಲ ಕೆಲ ದಿನ ಜೈಲಿನಲ್ಲಿ ಇದ್ದು ನಂತರ ಜಾಮೀನು ಪಡೆಯುತ್ತಾರೆ. ಅದಕ್ಕಾಗೇ ನಾನು ಸೂಕ್ಷ್ಮವಾಗಿ ಹೇಳಿದ್ದು ಆಂಧ್ರ ಮಾದರಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು. ಆವಾಗ ಕಾಮುಕರು ಬುದ್ಧಿ ಕಲಿಯುತ್ತಾರೆ ಎಂದು" ಎಂದು ಕುಮಾರಸ್ವಾಮಿ ಹೇಳಿದರು.
ಮೈಸೂರು ಪಾಲಿಕೆ ಚುನಾವಣೆ; ಇನ್ನೂ ಮೈಸೂರು ಮೇಯರ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, "ಅಲ್ಲಿ ಸ್ಥಳೀಯವಾಗಿ ತೀರ್ಮಾನ ಮಾಡಿಕೊಂಡಿದ್ದಾರೆ ನನಗೇನು ಸಂಬಂಧ ಇಲ್ಲ, ಅಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ" ಎಂದು ಸ್ಪಷ್ಟಪಡಿಸಿದರು.
"3 ಪಕ್ಷದ ಮುಖಂಡರು ಅಭ್ಯರ್ಥಿಗಳನ್ನು ಹಾಕಿ ಅಧ್ಯಕ್ಷರ ಚುನಾವಣೆ ನಡೆಸಿದರು. ಕಾಂಗ್ರೆಸ್ ಸದಸ್ಯರು ತಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ, ಜೆಡಿಎಸ್ ಸದಸ್ಯರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿದ್ದಾರೆ ಹಾಗೂ ಬಿಜೆಪಿ ಸದಸ್ಯರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿದ್ದಾರೆ ಅಷ್ಟೇ. ಇದರಲ್ಲಿ ಹೊಂದಾಣಿಕೆ ಇಲ್ಲ" ಎಂದು ತಿಳಿಸಿದರು.
"ಜಿ.ಟಿ.ದೇವೇಗೌಡ 2008ರಲ್ಲಿ ಪಕ್ಷ ಬಿಟ್ಟು ಹೋಗಿದ್ದರು. ಇದೀಗ ಮತ್ತೆ ಹೋಗಿದ್ದಾರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತಾನಡುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಅಧಿಕಾರಕ್ಕೆ; "ಕಾಂಗ್ರೆಸ್ ಪಕ್ಷ ಸೇರಿದಂತೆ ಬೇರೆ ಯಾವ ಪಕ್ಷಕ್ಕೂ ಜೆಡಿಎಸ್ ಪಕ್ಷಕ್ಕೆ ಪೆಟ್ಟು ಕೊಡಲು ಸಾಧ್ಯವಿಲ್ಲ, ಅದು ಹಳೆ ಮೈಸೂರು ಭಾಗವಿರಲಿ ಇಲ್ಲ ಉತ್ತರ ಕರ್ನಾಟಕವಿರಲಿ" ಎಂದು ವಿರೋಧಿಗಳಿಗೆ ಹೆಚ್. ಡಿ. ಕುಮಾರಸ್ವಾಮಿ ಟಾಂಗ್ ನೀಡಿದರು.
"ಗದಗ, ಹಾವೇರಿ ಮತ್ತು ಹುಬ್ಬಳ್ಳಿ ಪ್ರವಾಸದ ವೇಳೆ ಜನರು ಜೆಡಿಎಸ್ ಪಕ್ಷದ ಬಗ್ಗೆ ಮಾತಾನಡುತ್ತಿದ್ದಾರೆ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಆಗುವ ಪ್ರಶ್ನೆ ಇಲ್ಲ, ಕಾಂಗ್ರೆಸ್-ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಪಡೆದುಕೊಳ್ಳಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications