Channapatna bypoll: ಮೂರು ದಿನದಲ್ಲಿ ಮ್ಯಾಜಿಕ್... ಡಿ.ಕೆ.ಸುರೇಶ್ ಕೊಟ್ಟ ಸುಳಿವೇನು?
ಚನ್ನಪಟ್ಟಣ ಉಪಚುನಾವಣಾ ಕಣವು ಅಭ್ಯರ್ಥಿಗಳಿಲ್ಲದ್ದರೂ ತುಂಬಾ ಕುತೂಹಲ ಮೂಡಿಸಿರುವ ಕ್ಷೇತ್ರವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ-ಮೈತ್ರಿಯಿಂದಲೂ ಇನ್ನೂ ಅಭ್ಯರ್ಥಿ ಯಾರು ಎನ್ನುವುದು ಕಗ್ಗಂಟಾಗಿಯೇ ಉಳಿದಿದೆ. ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಸ್ಪರ್ಧೆ ಬಹುತೇಕ ಖಚಿತ ಎಂದು ಹೇಳಲಾಗಿದೆ. ಈ ಬಗ್ಗೆ ಅವರೇ ಸುಳಿವು ನೀಡಿದ್ದಾರೆ.
ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿರುವ ಡಿ.ಕೆ.ಸುರೇಶ್, ಇನ್ನೂ ಮೂರು ದಿನ ಟೈಮ್ ಇದೆ. ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವಂತೆ ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಸ್ಪರ್ಧೆ ಬಗ್ಗೆ ನಾನು ಕೂಡ ಚಿಂತನೆ ನಡೆಸುವೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಮೈತ್ರಿಯಿಂದ ಬಂಡಾಯವೆದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದಿರುವ ಸಿ.ಪಿ.ಯೋಗೇಶ್ವರ್ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಕಾಂಗ್ರೆಸ್ ಸೇರಿಕೊಂಡು, ಈ ಪಕ್ಷದಿಂದಲೇ ಟಿಕೆಟ್ ಪಡೆಯಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಮತ್ತೊಂದೆಡೆ ಡಿ.ಕೆ.ಸುರೇಶ್ ಅವರೂ ಸ್ಪರ್ಧೆಯ ಬಗ್ಗೆ ಸುಳಿವು ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ.
ಇನ್ನು ಸಿ.ಪಿ.ಯೋಗೇಶ್ವರ್ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನು ಏನೂ ಹೇಳಲು ಆಗುವುದಿಲ್ಲ. ನಾನು ಈಗ ಚನ್ನಪಟ್ಟಣಕ್ಕೆ ಹೋಗುತ್ತಿರುವೆ. ಅಲ್ಲಿ ಜನರೊಂದಿಗೆ ಸಭೆ ನಡೆಸುತ್ತೇನೆ. ಅಲ್ಲಿ ಪಕ್ಷ ಸಂಘಟನೆ ಹೇಗೆ ನಡೆಯಬೇಕು ಎನ್ನುವುದನ್ನು ಮಾಡುತ್ತೇನೆ. ಅಂತಿಮವಾಗಿ ಅಭ್ಯರ್ಥಿ ಯಾರು ಎಂದು ಪಕ್ಷವೇ ಅನೌನ್ಸ್ ಮಾಡುತ್ತೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

ಚನ್ನಪಟ್ಟಣ ಬೈಎಲೆಕ್ಷನ್ ಬೆನ್ನಲ್ಲೇ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಬಂಡಾಯವೆದ್ದಿದ್ದಾರೆ. ನಿನ್ನೆ ಬಿಜೆಪಿಯ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು ಚನ್ನಪಟ್ಟಣದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಪಕ್ಷ ಸೇರುವ ಸುಳಿವು ಕೂಡ ಕೊಟ್ಟಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಮಾತನಾಡಿದ ಅವರು, ಸದ್ಯಕ್ಕೆ ಕಾಂಗ್ರೆಸ್ ಸೇರುವ ಬಗ್ಗೆ ನಾನು ಯೋಚನೆ ಮಾಡಿಲ್ಲ. ನಾನು ಇಲ್ಲಿವರೆಗೆ ಯಾರ ಸಂಪರ್ಕವೂ ಮಾಡಿಲ್ಲ. ಆದರೆ, ನಾಳೆ ಏನಾಗುತ್ತೆ ಅನ್ನೋದು ಹೇಳೋಕಾಗಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನನಗೆ ಜೆಡಿಎಸ್ ಹೆಸರಲ್ಲಿ ಸ್ಪರ್ಧೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಜೆಡಿಎಸ್ ಕಾರ್ಯಕರ್ತರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ನಾನು ನನ್ನ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೇನೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಆಗಬೇಕು ಅನ್ನೋ ಆಸೆ ಇದೆ. ಅದಕ್ಕೆ ಇನ್ನೂ ಅವಕಾಶವಿದೆ. ಬಿಜೆಪಿ ಹೈಕಮಾಂಡ್ ಒಂದು ಅವಕಾಶ ಕೊಡಬೇಕಷ್ಟೇ. ನಮ್ಮ ಪಕ್ಷದ ನಾಯಕರು ನನ್ನೊಂದಿಗೆ ಇದ್ದಾರೆ. ಆದರೆ ಕುಮಾರಸ್ವಾಮಿ ಒಪ್ಪುತ್ತಿಲ್ಲ. ಈ ಕಾರಣದಿಂದಲೇ ನಾನು ಈ ನಿರ್ಧಾರ ತೆಗೆದುಕೊಂಡೆ. ಹಾಗಾಗಿ ಬೈಎಲೆಕ್ಷನ್‌ನಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.
ಇಲ್ಲಿವರೆಗೆ ಮೈತ್ರಿ ಪಾಳಯದಲ್ಲಿ ಗೊಂದಲಗಳಿಗೆ ಕಾರಣವಾಗಿದ್ದ ಸಿ.ಪಿ.ಯೋಗೇಶ್ವರ್, ಇದೀಗ ಕಾಂಗ್ರೆಸ್ ಸೇರಿದರೂ ಅಲ್ಲಿ ಡಿ.ಕೆ.ಸುರೇಶ್ ಅವರ ಸ್ಪರ್ಧೆಗೆ ಅಡ್ಡಗಾಲು ಹಾಕುವ ಸಾಧ್ಯತೆಯೂ ಇದೆ.












Click it and Unblock the Notifications