ಕರ್ಫ್ಯೂ ನಡುವೆಯೇ ಚನ್ನಪಟ್ಟಣದಲ್ಲಿ ಹಾಲಿನ ಬೂತ್ ಗೆ ಬೆಂಕಿ
ರಾಮನಗರ, ಮಾರ್ಚ್ 22: ಜನತಾ ಕರ್ಫ್ಯೂ ಇದ್ದಿದ್ದರಿಂದ ಜನರಿಲ್ಲದೇ ಬಿಕೋ ಎನ್ನುತ್ತಿದ್ದ ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ನಂದಿನಿ ಹಾಲಿನ ಬೂತ್ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಚನ್ನಪಟ್ಟಣ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿದ್ದ ನಂದಿನಿ ಹಾಲಿನ ಬೂತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಭಸ್ಮವಾಗಿದೆ. ಮಾಜಿ ನಗರಸಭೆ ಸದಸ್ಯ ರಮೇಶ್ ಬಾಬು ಎಂಬುವರಿಗೆ ಸೇರಿದ ನಂದಿನಿ ಬೂತ್, ಬೆಂಕಿ ಅವಘಡದಿಂದ ಸುಮಾರು ನಾಲ್ಕು ಲಕ್ಷ ರುಪಾಯಿ ನಷ್ಟ ಸಂಭವಿಸಿದೆ.
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಇಲ್ಲದ ಕಾರಣ ಹೆಚ್ಚಿನ ಅನಾಹುತ ಆಗಿಲ್ಲ, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಬೆಂಕಿಯ ಕೆನ್ನಾಲಿಗೆ ಸಿಕ್ಕು ಎರಡು ಫ್ರಿಟ್ಜ್, ಹಾಲು, ಮೊಸರು, ನೀರಿನ ಬಾಟಲ್ ಮತ್ತು ತಂಪುಪಾನೀಯಗಳು ಸೇರಿದಂತೆ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಇನ್ನು ಈ ಸಂಬಂಧ ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.