ಡಿಕೆಶಿ ದೋಸೆ ಸವಿದ ಕನಕಪುರದ ವಾಸು ಹೋಟೆಲ್ ಬಗ್ಗೆ ಗೊತ್ತಾ?
ರಾಮನಗರ, ಮೇ 11; ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದೆ. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಲಿದೆ ಎಂದು ಹೇಳಿದ್ದು, ಪಕ್ಷದ ನಾಯಕರು ಸರ್ಕಾರ ರಚನೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಚುನಾವಣಾ ಕೆಲಸದಲ್ಲಿ ಬ್ಯುಸಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾಮಾರ್ ಗುರುವಾರ ಕನಕಪುರದ ವಾಸು ಹೋಟೆಲ್‌ನಲ್ಲಿ ದೋಸೆ, ಇಡ್ಲಿ ಸವಿದರು.
ಬುಧವಾರ ಮತದಾನ ಮಾಡಲು ಕನಕಪುರಕ್ಕೆ ಹೋಗಿದ್ದ ಡಿ. ಕೆ. ಶಿವಕುಮಾರ್ ಅಲ್ಲಿಯೇ ಇದ್ದಾರೆ. ಗುರುವಾರ ಅವರು, "ಕನಕಪುರದ ವಾಸು ಹೋಟೆಲ್‌ನ ಅದ್ಭುತ ರುಚಿಯ ಬಗ್ಗೆ ಎಷ್ಟು ಹೇಳಿದರೂ ಸಾಲದು!. ನನ್ನ ಸಹೋದರ ಡಿ. ಕೆ. ಸುರೇಶ್ ಜೊತೆ ಇಂದು ಉಪಹಾರ ಸೇವಿಸಿ, ರುಚಿಕರ ಸ್ವಾದ ಅನುಭವಿಸಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಬೆಂಗಳೂರು ನಗರದಲ್ಲಿ ದೋಸೆ ಹೋಟೆಲ್‌ಗಳು ಬಹಳಷ್ಟಿವೆ. ಆದರೆ ಜನರು ಕನಕಪುರದ ವಾಸು ಹೋಟೆಲ್ ದೋಸೆ ಸವಿಯಲು ಅಲ್ಲಿಗೆ ಹೋಗುತ್ತಾರೆ ಅಂದರೆ ಅದರ ರುಚಿ ಹೇಗಿರುತ್ತದೆ ಎಂದು ಊಹಿಸಿ, ಕನಕಪುರ ಕಡೆ ಹೋದರೆ ಗರಿ ಗರಿ ಮಸಾಲೆ ದೋಸೆ ಸವಿಯಿರಿ. ಬೆಳಗ್ಗೆ 5.30 ರಿಂದ ಸಂಜೆ 7.30ರ ತನಕ ಹೋಟೆಲ್ ತೆರೆದಿರುತ್ತದೆ, ಬುಧವಾರ ರಜೆ.
ಕನಕಪುರದ ವಾಸು ಹೋಟೆಲ್; ಕನಕಪುರದ ಹೃದಯ ಭಾಗದಲ್ಲಿರುವ ವಾಸು ಹೋಟೆಲ್‌ಗೆ ಸುಮಾರು 75 ವರ್ಷಗಳ ಇತಿಹಾಸವಿದೆ. ಹೋಟೆಲ್‌ನಲ್ಲಿ ಸೌದೆ ಒಲೆಯಲ್ಲಿಯೇ ಅಡುಗೆ ಮಾಡುವುದು ವಿಶೇಷ. ಅದಕ್ಕೆ ಇಲ್ಲಿನ ದೋಸೆಯ ರುಚಿಯೂ ಹೆಚ್ಚು ಎಂಬುದು ದೋಸೆ ಮುರಿದವರ ಮಾತು. ಇಲ್ಲಿ ದೋಸೆಯ ಜೊತೆ ಇಡ್ಲಿಯೂ ಸಿಗುತ್ತದೆ.

ಉಡುಪಿ ಜಿಲ್ಲೆಯ ಕೋಡಿ ಗ್ರಾಮದಿಂದ ಕನಕಪುರಕ್ಕೆ ಬಂದ ಶೃಂಗಾರಮ್ಮ ಮತ್ತು ಅವರ ಪತಿ ಶ್ರೀ ಲಕ್ಷ್ಮೀ ವಿಲಾಸ ಕಾಫಿ ಕ್ಲಬ್ ಹೆಸರಿನ ಹೋಟೆಲ್ ತೆರೆದರು. ಶೃಂಗಾರಮ್ಮ ಪುತ್ರ ವಾಸು ಹೋಟೆಲ್ ಉಸ್ತುವಾರಿ ನೋಡಿಕೊಳ್ಳಲು ಆರಂಭಿಸಿದ ಮೇಲೆ ಇದು ವಾಸು ಹೋಟೆಲ್ ಎಂದೇ ಖ್ಯಾತಿ ಪಡೆಯಿತು.
ವಾಸು ಅವರ ಅಕಾಲಿಕ ಮರಣದ ನಂತರ ಶೃಂಗಾರಮ್ಮ ಸಹೋದರ ವೆಂಕಟರಮಣಯ್ಯ ಹೋಟೆಲ್ ನೋಡಿಕೊಳ್ಳುತ್ತಿದ್ದರು. 1968ರಲ್ಲಿ ಅವರು ಕಾಲವಾದ ನಂತರ ನರಸಿಂಹಯ್ಯ ಹೋಟೆಲ್ ಉಸ್ತುವಾರಿ ವಹಿಸಿಕೊಂಡರು. ಬಳಿಕ ರಾಮಚಂದ್ರ ಉಪಾಧ್ಯ ಹೋಟೆಲ್ ನೋಡಿಕೊಳ್ಳಲು ಆರಂಭಿಸಿದರು.
ಸಾಲಿಗ್ರಾಮ ಸಮೀಪದ ಪಾರಂಪಳ್ಳಿಯಿಂದ ಸಪ್ಲೇಯರ್ ಕೆಲಸಕ್ಕೆ ಬಂದ ರಾಮಚಂದ್ರ ಉಪಾಧ್ಯ 1983ರಲ್ಲಿ ವಾಸು ಹೋಟೆಲ್ ಹೊಣೆ ಹೊತ್ತುಕೊಂಡರು. ಈಗಲೂ ಅವರು ಮತ್ತು ಅವರ ಪುತ್ರ ಜನಾರ್ದನ ಉಪಾಧ್ಯ ವಾಸು ಹೋಟೆಲ್ ನೋಡಿಕೊಳ್ಳುತ್ತಿದ್ದಾರೆ. ಮಾಲೀಕರು ಬದಲಾದರೂ ವಾಸು ಹೋಟಲ್‌ನ ರುಚಿ ಬದಲಾಗಿಲ್ಲ.
ಚಿಕ್ಕ ಗುಡಿಸಲಿನಲ್ಲಿ ಆರಂಭವಾದ ವಾಸು ಹೋಟೆಲ್ ಈಗ ಸ್ವಂತ ಕಟ್ಟಡದಲ್ಲಿದೆ. ಹಾರೋಹಳ್ಳಿಯಲ್ಲಿಯೂ ಶಾಖೆಯೊಂದಿದೆ. ರಾಜಕೀಯ, ಸಿನಿಮಾ, ಕ್ರೀಡೆ ಹೀಗೆ ನಾನಾ ಕ್ಷೇತ್ರದ ಗಣ್ಯರು ಕನಕಪುರದ ವಾಸು ಹೋಟಲ್‌ನ ದೋಸೆ ಸವಿದು ಅದರ ರುಚಿಗೆ ಸೋತು ಹೋಗಿದ್ದಾರೆ. ವಾರಾಂತ್ಯದಲ್ಲಿ, ರಜೆ ದಿನಗಳಲ್ಲಿ ಬೆಂಗಳೂರಿನ ಅನೇಕ ಜನರು ಕನಕಪುರ ಕಡೆ ಹೋಗಿ ದೋಸೆ ಸವಿದು ಬರುತ್ತಾರೆ.
ಮಸಾಲೆ ದೋಸೆ, ಸೆಟ್ ದೋಸೆ, ಖಾರಾಬಾತ್, ಕೇಸರಿಬಾತ್, ಇಡ್ಲಿ, ವಡೆ ಹೀಗೆ ವಿವಿಧ ತಿಂಡಿಗಳು ವಾಸು ಹೋಟೆಲ್‌ನಲ್ಲಿ ಸಿಗುತ್ತದೆ. ಕನಕಪುರದಲ್ಲಿ ನಿಂತು ಯಾರಿಗೆ ಕೇಳಿದರೂ ವಾಸು ಹೋಟೆಲ್ ಎಲ್ಲಿದೆ? ಎಂದು ತೋರಿಸುತ್ತಾರೆ. ತಮ್ಮ ಸ್ವ ಕ್ಷೇತ್ರದಲ್ಲಿರುವ ಹೋಟೆಲ್‌ನಲ್ಲಿ ಡಿ. ಕೆ. ಶಿವಕುಮಾರ್ ಗುರುವಾರ ದೋಸೆ ಸವಿದಿದ್ದಾರೆ.
ವಾರಾಂತ್ಯದಲ್ಲಿ ರಾಮನಗರ ಜಿಲ್ಲೆ ಕಡೆಗೆ ಪ್ರವಾಸ ಹೋದವರು ಕನಕಪುರ ವಾಸು ಹೋಟೆಲ್ ದೋಸೆ ತಿಂದು ಬಂದರೆ ಮಾತ್ರ ಪ್ರವಾಸ ಪೂರ್ಣ ಎಂದು ಭಾವಿಸುತ್ತಾರೆ. ಹಿಂದಿನ ರುಚಿಯನ್ನೂ ಇಂದಿಗೂ ಉಳಿಸಿಕೊಂಡು ಬಂದಿರುವ ಕನಕಪುರದ ವಾಸು ಹೋಟೆಲ್ ರುಚಿಗೆ ಹಲವು ಅಭಿಮಾನಿಗಳಿದ್ದಾರೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ವಾಸು ಹೋಟೆಲ್‌ನ ಹಲವಾರು ವಿಡಿಯೋಗಳು ಸಿಗುತ್ತವೆ.












Click it and Unblock the Notifications