'ಚನ್ನಪಟ್ಟಣವನ್ನ ರಾಜಕೀಯವಾಗಿ ಮದುವೆ ಮಾಡಿಕೊಂಡಿದ್ದೇನೆ'
ಚನ್ನಪಟ್ಟಣ, ನವೆಂಬರ್ 26 : ಚನ್ನಪಟ್ಟಣ ಶಾಸಕ, ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರಗೆ ಟಾಂಗ್ ನೀಡುವುದರ ಜೊತೆಗೆ ಅನಿತಾ ಕುಮಾರಸ್ವಾಮಿ ಪರ ಬ್ಯಾಟಿಂಗ್ ನಡೆಸಿದ ಡಿ.ಕೆ ಶಿವಕುಮಾರ್‌ರವರು, 'ಚನ್ನಪಟ್ಟಣವನ್ನ ರಾಜಕೀಯವಾಗಿ ಮದುವೆ ಮಾಡಿಕೊಂಡಿದ್ದೇನೆ' ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಶನಿವಾರ ನಡೆದ ಕನಕ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಅನಿತಾ ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, 'ನಮ್ಮ ಸೋದರಿ ಅನಿತಾ ಕುಮಾರಸ್ವಾಮಿಯವರು ನಿಮ್ಮ ಮೇಲೆ ವಿಶ್ವಾಸ ಹಾಗೂ ನಂಬಿಕೆ ಇಟ್ಟುಕೊಂಡು ಬಂದಿದ್ದಾರೆ' ಎಂದು ತಿಳಿಸಿದರು.
'ಶಾಸಕ ಸಿ.ಪಿ ಯೋಗೇಶ್ವರ ಅವರಂತಹ ಹಲವಾರು ನಾಯಕರು ಬರ್ತಾರೆ ಹೋಗ್ತಾರೆ. ಆದರೆ, ಬೇರೆಯವರೆಲ್ಲಾ ಟೆಂಪರ್‌ವರಿ ನಾವ್ ಮಾತ್ರ ಶಾಶ್ವತ. ನಿಮ್ಮ ಹೆಣ ಹೊರುವವರೂ ನಾವೇ, ಪಲ್ಲಕ್ಕಿ ಹೊರುವವರು ನಾವೇ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

'ಉಪಕಾರ ಮಾಡಿದ್ದನ್ನು ಸ್ಮರಿಸಿಕೊಳ್ಳಬೇಕು. ಆದರೆ, ಸಿಎಂ ಸಿದ್ದರಾಮಯ್ಯನವರು 300 ಕೋಟಿ ಹಣವನ್ನು ಕೆರೆಗಳಿಗೆ ನೀರು ಹರಿಸಲು ಕೊಟ್ಟರೆ ಕೃತಜ್ಞತೆ ಅವರ ಒಂದು ಪೋಟೋವನ್ನು ಹಾಕಲಿಲ್ಲ' ಎಂದು ಸಿ.ಪಿ.ಯೋಗೇಶ್ವರ ವಿರುದ್ಧ ಹರಿಹಾಯ್ದರು.
'ರಾಜಕಾರಣವನ್ನು ನಾನು ಬಿಡಲ್ಲ, ನಾನು ನಿಮ್ಮನ್ನು ನನ್ನೊಟ್ಟಿಗೆ ಕರೆದುಕೊಂಡು ಹೋಗುತ್ತೇನೆ. ಹಾಗಾಗಿ ಚನ್ನಪಟ್ಟಣವನ್ನ ರಾಜಕೀಯವಾಗಿ ಮದುವೆ ಮಾಡಿಕೊಂಡಿದ್ದೇನೆ' ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.












Click it and Unblock the Notifications