Karnataka Weather: ಮುಂದಿನ 48 ಗಂಟೆ ಕರಾವಳಿ, ಒಳನಾಡು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಎಚ್ಚರಿಕೆ, ರೆಡ್ ಅಲರ್ಟ್
Karnataka Rain Alert: ಸಮುದ್ರ ಮಟ್ಟದ ಹವಾಮಾನದಲ್ಲಿ ತೀವ್ರ ಸ್ವರೂಪದ ಬದಲಾವಣೆ ಆಗಿದ್ದು, ಮುಂಗಾರು ಮಳೆ ಕರ್ನಾಟಕ ರಾಜ್ಯಾದ್ಯಂತ ಆರ್ಭಟ ಮುಂದುವರಿಸಿದೆ. ಸೋಮವಾರವು ಕರಾವಳಿ, ಮಲೆನಾಡು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಭರ್ಜರಿ ಮಳೆ ದಾಖಲಾಗಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ (ಜೂನ್ 10ರವರೆಗೆ) ರಾಜ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯಲಿದ್ದು, ರೆಡ್ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದ ವಿವಿಧ ಭಾಗಗಳಲ್ಲಿ ಮತ್ತು ಅಂಡಮಾನ್, ಲಕ್ಷದ್ವೀಪ ಕರಾವಳಿ ಭಾಗಗಳಲ್ಲಿ ಕೆಲವು ವೈಪರೀತ್ಯಗಳು ತೀವ್ರಗೊಂಡಿವೆ. ವಾಯುಭಾರ ಕುಸಿತ, ಟ್ರಫ್, ಬಿರುಗಾಳಿ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ವಾಯು ಚಂಡಮಾರುತ ಪ್ರಸರಣ ಏರ್ಪಟ್ಟಿದೆ. ಉತ್ತರ ಪ್ರದೇಶದ ಪೂರ್ವ ಭಾಗ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ.ವರೆಗೆ ವಾಯು ಚಂಡಮಾರುತದ ಪರಿಚಲನೆ ಮುಂದುವರೆದಿದೆ. ಭೂಮೇಲ್ಮೈ ಹಾಗೂ ಸಾಗರ ಮೇಲ್ಮೈನಲ್ಲಿ ಉಂಟಾದ ಗಾಳಿಯ ಏರಿಳಿತದ ಪರಿಣಾಮವಾಗಿ ಮುಂಗಾರು ಮಳೆ ರಾಜ್ಯ ಮತ್ತು ದೇಶವ್ಯಾಪಿ ವೇಗವಾಗಿ ವಿಸ್ತರಣೆ ಆಗುತ್ತಿದೆ.

ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್
ಮುಂದಿನ ಎರಡು ದಿನ (ಜೂನ್ 9 ಮತ್ತು 10) ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಜೂನ್ 10ರಂದು ಒಂದು ದಿನ ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಗರಿಷ್ಠ 200 ಮಿಲಿ ಮೀಟರ್‌ಗೂ ಅತ್ಯಧಿಕ ಮಳೆ ಸುರಿಯಲಿದ್ದು, ಐಎಂಡಿ 'ರೆಡ್ ಅಲರ್ಟ್' ಘೋಷಿಸಿದೆ. ಈ ಮೇಲಿನ ಜಿಲ್ಲೆಗಳಾದ್ಯಂತ ನಿರಂತರವಾಗಿ ಧಾರಾಕಾರ ಮಳೆ ಬರಲಿದ್ದು, ಕರಾವಳಿ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಮೀನುಗಾರಿಕೆ ಇಳಿಯದಂತೆ ಮುನ್ನೆಚ್ಚರಿಕೆ ಕೊಡಲಾಗಿದೆ.
115- 200 ಮಿಮೀ. ಮಳೆ ಎಚ್ಚರಿಕೆ
ಉತ್ತರ ಕರ್ನಾಟಕದಲ್ಲಿ ಬಿರುಸಿನ ಮಳೆ ಆಗುತ್ತಿದ್ದು, ರೈತರು ಫುಲ್ ಖುಷ್ ಆಗಿದ್ದಾರೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಗುರುವಾರವರೆಗೆ (ಜೂನ್ 11) ಕನಿಷ್ಠ 115 ರಿಂದ 200 ಮಿಲಿ ಮೀಟರ್‍ವರೆಗೆ ಜೋರು ಮಳೆ ಬರಲಿದ್ದು, 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಈ ಭಾಗದಲ್ಲಿ ಬೇಸಿಗೆ ವೇಳೆ ಬತ್ತಿದ ಹೊಳೆ/ನದಿಗಳಲ್ಲಿ ನೀರಿನ ಆಗಮನವಾಗಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.
ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು, ವಿಜಯನಗರ, ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇನ್ನೂ ಹಲವೆಡೆ ಧಾರಾಕಾರ ಮಳೆ ಸುರಿಯಲಿದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ದೇಶಾದ್ಯಂತ ಮುಂಗಾರು ವಿಸ್ತರಣೆ ಯಾವಾಗ?
ಮುಂಗಾರು ಮಳೆ ದಕ್ಷಿಣ ಭಾರತದ ಕರ್ನಾಟಕ ಒಳಗೊಂಡಂತೆ ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾ, ಕೇರಳ ಭಾಗದಾದ್ಯಂತ ಸಂಪೂರ್ಣವಾಗಿ ವಿಸ್ತರಿಸಿದೆ. ಜೂನ್ 15ರ ಹೊತ್ತಿಗೆ ರಾಜಸ್ಥಾನ್ ರಾಜ್ಯ ಮೂಲಕ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ತಂಪೆರೆಯಲಿದೆ ಎನ್ನಲಾಗಿದೆ. ಸದ್ಯದ ಹವಾಮಾನ ತೀವ್ರತೆಯ ಪರಿಸ್ಥಿತಿ ನೋಡಿದರೆ ಅವಧಿಗೂ ಮೊದಲೇ ಉತ್ತರ ಭಾರತದ ರಾಜ್ಯಗಳನ್ನು ಮಳೆ ಆವರಿಸಲಿದೆ. ಗರಿಷ್ಠ ಬಿಸಿಲು, ಶಾಖದ ಅಲೆಗೆ ತತ್ತರಿಸಿದ ದೆಹಲಿ, ಉತ್ತರ ಪ್ರದೇಶ, ಬಿಹಾರ, ಹರಿಯಾಣ ಇನ್ನಿತರ ರಾಜ್ಯಗಳ ಜನರಿಗೆ ನೆಮ್ಮದಿ ಕರುಣಿಸಲಿದೆ. ಬಿತ್ತನೆಗೆ ಸಜ್ಜಾಗಿರುವ ಈ ಭಾಗದ ರೈತರು ಜೂನ್ ಮೂರನೇ ವಾರದ ಬಿತ್ತನೆ ಆರಂಭಿಸುವ ನಿರೀಕ್ಷೆಗಳು ಇವೆ.













Click it and Unblock the Notifications