ಕಾಂಗ್ರೆಸ್ ಸೇರುವ ಬಗ್ಗೆ ಸಿ.ಪಿ.ಯೋಗೇಶ್ವರ್ ಶಾಕಿಂಗ್ ಹೇಳಿಕೆ
ಚನ್ನಪಟ್ಟಣ ಬೈಎಲೆಕ್ಷನ್ ಬೆನ್ನಲ್ಲೇ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಬಂಡಾಯವೆದ್ದಿದ್ದಾರೆ. ಇಂದು ಬಿಜೆಪಿಯ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು ಚನ್ನಪಟ್ಟಣದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವ ಇಂಗಿತ ಹೊರಹಾಕಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಪಕ್ಷ ಸೇರುವ ಸುಳಿವು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತಿದೆ ಸಿ.ಪಿ.ಯೋಗೇಶ್ವರ್ ಅವರು ರಾಜೀನಾಮೆ ಬಳಿಕ ಆಡಿದ ಮಾತುಗಳು. ರಾಜೀನಾಮೆ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಅವರು ಸದ್ಯಕ್ಕೆ ಕಾಂಗ್ರೆಸ್ ಸೇರುವ ಬಗ್ಗೆ ನಾನು ಯೋಚನೆ ಮಾಡಿಲ್ಲ. ನಾನು ಇಲ್ಲಿವರೆಗೆ ಯಾರ ಸಂಪರ್ಕವೂ ಮಾಡಿಲ್ಲ. ಆದರೆ, ನಾಳೆ ಏನಾಗುತ್ತೆ ಅನ್ನೋದು ಹೇಳೋಕಾಗಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ.

ಸಿ.ಪಿ.ಯೋಗೇಶ್ವರ್ ಅವರು ನೇರವಾಗಿ ಕಾಂಗ್ರೆಸ್ ಸೇರಿದರೆ ಸಮಸ್ಯೆಯಾಗುತ್ತದೆ. ಹಾಗಾಗಿ ಮೊದಲಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಆ ನಂತರ ಕಾಂಗ್ರೆಸ್‌ನತ್ತ ಹೋಗಬಹುದು. ಇಲ್ಲವೇ ಬಿಜೆಪಿ ಹೈಕಮಾಂಡ್‌ನವರು ಮನವೊಲಿಸಿ, ಮತ್ತೆ ಟಿಕೆಟ್ ನೀಡಿದರೂ ನೀಡಬಹುದು. ಈ ಪ್ಲ್ಯಾನ್‌ನಿಂದಲೇ ಯೋಗೇಶ್ವರ್ ನಡೆ ಈ ರೀತಿ ಇದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಆದರೆ, ನನಗೆ ಜೆಡಿಎಸ್ ಹೆಸರಲ್ಲಿ ಸ್ಪರ್ಧೆ ಮಾಡಲು ಯಾವುದೇ ತೊಂದರೆ ಇಲ್ಲ. ಆದರೆ ಜೆಡಿಎಸ್ ಕಾರ್ಯಕರ್ತರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ನಾನು ನನ್ನ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೇನೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಆಗಬೇಕು ಅನ್ನೋ ಆಸೆಯಿದೆ. ಅದಕ್ಕೆ ಇನ್ನೂ ಅವಕಾಶ ಕೂಡ ಇದೆ. ಬಿಜೆಪಿ ಹೈಕಮಾಂಡ್ ಒಂದು ಅವಕಾಶ ಕೊಡಬೇಕಷ್ಟೇ. ನಮ್ಮ ಪಕ್ಷದ ನಾಯಕರು ನನ್ನೊಂದಿಗೆ ಇದ್ದಾರೆ. ಆದರೆ ಕುಮಾರಸ್ವಾಮಿ ಒಪ್ಪುತ್ತಿಲ್ಲ. ಈ ಕಾರಣದಿಂದಲೇ ನಾನು ಈ ನಿರ್ಧಾರ ತೆಗೆದುಕೊಂಡೆ. ಹಾಗಾಗಿ ಬೈಎಲೆಕ್ಷನ್‌ನಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಿನ್ನೆ ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಕಣಕ್ಕಿಳಿಯಬೇಕು ಎಂದಿರುವ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್‌ನ ಸಂಪರ್ಕದಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದರು. ನಮ್ಮ ಮೈತ್ರಿ ಹಾಳು ಮಾಡಲು ಕೆಲಸ ಬಿಜೆಪಿ ನಾಯಕರು ಕಾಂಗ್ರೆಸ್‌ನವರನ್ನು ಸಂಪರ್ಕಿಸಿದ್ದಾರೆ. ಸಿ.ಪಿ.ಯೋಗೇಶ್ವರ್ ಅವರು ಎರಡು ಮೂರು ಬಾರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೆಲ್ಲ ಹೈಕಮಾಂಡ್ ಕೂಡ ಗಮನಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.
ಇನ್ನು ಜೆಡಿಎಸ್‌ನಿಂದಲೇ ಸಿ.ಪಿ.ಯೋಗೇಶ್ವರ್ ಅವರ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಅವರು ದೊಡ್ಡವರು, ಅವರ ಬಗ್ಗೆ ನಾನು ಏನ್ ಚರ್ಚೆ ಮಾಡ್ಲಿ? ಅವರು ಏನ್ ಮಾಡ್ತಾರೋ ಗೊತ್ತಿಲ್ಲ. ಆದರೆ ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ಯೋಗೇಶ್ವರ್ ಅವರ ಕಾಂಗ್ರೆಸ್ ನಾಯಕರ ಜೊತೆಗೂ ಸಂಪರ್ಕದಲ್ಲಿದ್ದಾರೆ ಎಂದಿದ್ದರು.
ಜೊತೆಗೆ ಬೇರೆ ಬೇರೆ ಪಕ್ಷಗಳ ನಾಯಕರೊಂದಿಗೂ ಚರ್ಚೆಯಲ್ಲಿದ್ದಾರೆ. ಈ ಬಗ್ಗೆ ಎಲ್ಲೆಡೆಯೂ ಮಾತುಕತೆಗಳು ನಡೆಯುತ್ತಿವೆ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ರಾಜೀನಾಮೆ ನೀಡಿರುವ ಸಿ.ಪಿ.ಯೋಗೇಶ್ವರ್ ಅವರ ನಡೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ.












Click it and Unblock the Notifications