ಮಗಳ ಪ್ರೇಮ ವಿವಾಹಕ್ಕೆ ಮನನೊಂದು ದಂಪತಿ ಆತ್ಮಹತ್ಯೆಗೆ ಶರಣು
ರಾಮನಗರ, ಜೂನ್ 01; ಗ್ರಾಮದಲ್ಲಿ ಸಣ್ಣ ಪುಟ್ಟ ವ್ಯಾಜ್ಯಗಳನ್ನು ನ್ಯಾಯ ಮಾಡಿ ಪರಿಹರಿಸುತ್ತಿದ್ದ ಪ್ರತಿಷ್ಠಿತ ವ್ಯಕ್ತಿ ಅವರು. ಮಗಳು ಮನೆಯವರ ವಿರೋಧದ ನಡುವೆ ಪ್ರೇಮಿಯೊಂದಿಗೆ ಓಡಿಹೋದ ಹಿನ್ನಲೆಯಲ್ಲಿ ಮನನೊಂದು ಪತಿ, ಪತ್ನಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣದ ತೆಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೇ 31ರಂದು ತೆಂಕನಹಳ್ಳಿ ಗ್ರಾಮದಿಂದ ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಇದನ್ನು ಸಹಿಸಲಾಗದ ಪೋಷಕರು ಮಂಗಳವಾರ ಬೆಳಗ್ಗೆ ತೋಟದಲ್ಲಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತಪಟ್ಟವರನ್ನು ರಮೇಶ್ (50) ಹಾಗೂ ಶೈಲಜಾ (42) ಎಂದು ಗುರುತಿಸಲಾಗಿದೆ. ಮಾನಕ್ಕೆ ಅಂಜಿ ದಂಪತಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ದಂಪತಿಯ ಪುತ್ರಿ ಶಿಲ್ಪಾ ಪುನೀತ್ ಎಂಬ ಯುವಕನ ಜತೆ ಓಡಿ ಹೋಗಿ ವಿವಾಹವಾಗಿದ್ದಳು.

ವಿವಾಹದ ವಿಚಾರಕ್ಕೆ ಹಲವು ಭಾರಿ ಸಣ್ಣಪುಟ್ಟ ಗಲಾಟೆ ನಡೆದಿತ್ತು. ಮನಸ್ಸು ಬದಲಿಸಿಕೊಂಡಿದ್ದೇನೆ ಎಂದು ಹೇಳಿದ್ದ ಮಗಳು ಏಕಾಏಕಿ ಪ್ರಿಯಕರನ ಜೊತೆ ಓಡಿ ಹೋಗಿ ಮದುವೆ ಮಾಡಿಕೊಂಡ ಕಾರಣಕ್ಕೆ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ರಮೇಶ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಹಲವು ಭಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಆಯ್ಕೆ ಯಾಗಿದ್ದರು. ಈ ಕಾರಣಕ್ಕಾಗಿ ಗ್ರಾಮದಲ್ಲಿ ಸಣ್ಣ ಪುಟ್ಟ ಗಲಾಟೆ ನಡೆದ ಸಂದರ್ಭದಲ್ಲಿ ರಮೇಶ್ ನ್ಯಾಯ ಪಂಚಾಯಿತಿ ಮಾಡುತ್ತಿದ್ದರು.
ಮಗಳು ತಪ್ಪುಮಾಡಿದ್ದಾಳೆ ಇನ್ನು ಮುಂದೆ ಯಾರಿಗೆ ನ್ಯಾಯ ಹೇಳಲಿ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಗ್ರಾಮದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ದಂಪತಿ ಆತ್ಮಹತ್ಯೆಯ ವಿಚಾರ ತಿಳಿದ ಗ್ರಾಮಸ್ಥರು ಯಾರಿಗೂ ಹೇಳದೇ ಅಂತ್ಯಕ್ರಿಯೆ ಮುಗಿಸುವ ಯೋಜನೆ ರೂಪಿಸಿದ್ದರು.
ಆದರೆ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾರೂ ದೂರು ಕೊಡದ ಹಿನ್ನಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೃತದೇಹವನ್ನ ಶವ ಪರೀಕ್ಷೆಗೆ ಕಳುಸಿಕೊಟ್ಟರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications