ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ; ಡಿಕೆಶಿ
ರಾಮನಗರ, ಡಿಸೆಂಬರ್ 10: "ಪ್ರಸ್ತುತ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂಥ ಹೆಚ್ಚಿನ ಸ್ಥಾನಗಳನ್ನು ರಾಜ್ಯದಲ್ಲಿ ಗೆಲ್ಲಲಿದ್ದೇವೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದರು.
ಶುಕ್ರವಾರದಂದು ಕನಕಪುರದ ನಗರಸಭೆಯ ಮತಗಟ್ಟೆ 228ರಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಜಪಿಸಿದೆ. ಹಾಗಾಗಿ ಹೆಚ್ಚು ಸ್ಥಾನ ಗೆಲ್ಲಲಿದೆ. ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಸೀಟುಗಳನ್ನೂ ಗೆಲ್ಲುವ ಸಾಧ್ಯತೆಗಳಿವೆ," ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಹತಾಶರಾಗಿದ್ದಾರೆ
"ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಹತಾಶರಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಯಾಚಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ತನ್ನ ಶಕ್ತಿ ಕಳೆದುಕೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ. ಅವರು ಬೆಂಬಲ ಕೇಳಬಾರದು ಅಂತ ಅಲ್ಲ, ಅದು ಅವರ ಹಕ್ಕು. ನಾವೂ ಪಕ್ಷಾತೀತವಾಗಿ ಬೆಂಬಲ ಕೇಳಿದ್ದೇವೆ," ಎಂದರು.

"ಬಿಜೆಪಿ, ಜೆಡಿಎಸ್, ಪಕ್ಷೇತರರು ಎಲ್ಲರೂ ಕಾಂಗ್ರೆಸ್ ಬೆಂಬಲಿಸಿ ಎಂದಿದ್ದೇವೆ. ಆದರೆ ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡುತ್ತೇವೆ, 15 ವರ್ಷ ವಿರೋಧ ಪಕ್ಷದಲ್ಲೇ ಕೂರಿಸುತ್ತೇವೆ ಎಂದೆಲ್ಲ ಹೇಳಿದ್ದಾರೆ. ಹಾಗೆ ಹೇಳಿದವರು ಹೋಗಿ ಜೆಡಿಎಸ್ ಬೆಂಬಲ ಕೇಳಿದ್ದಾರೆ. ಇದು ಬಿಜೆಪಿ ದುಸ್ಥಿತಿ ಮತ್ತು ಶಕ್ತಿ ಕುಂದಿರುವುದನ್ನು ತೋರಿಸುತ್ತದೆ," ಎಂದು ಡಿಕೆಶಿ ವ್ಯಂಗ್ಯವಾಡಿದರು.
"ಕಾಂಗ್ರೆಸ್ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಸರಕಾರದ ಆಡಳಿತ ಯಂತ್ರ ದುರುಪಯೋಗ ಆಗಿರುವುದರಿಂದ ಒಂದೆರಡು ಕಡೆ ಹೆಚ್ಚು- ಕಮ್ಮಿ ಆಗಬಹುದು. ಆದರೂ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳು ಬರಲಿವೆ," ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಮೇಕೆದಾಟು ಹೋರಾಟ ಪ್ರಾರಂಭಿಸಲು ಡಿ.13ರಂದು ಸಭೆ
ಮೇಕೆದಾಟು ಅಣೆಕಟ್ಟೆ ಅನುಷ್ಠಾನಕ್ಕೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ ವಿಚಾರ ಸಂಬಂಧ ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಂಗಳೂರಿನ ಕಾಂಗ್ರೆಸ್ ಮುಖಂಡರ ಸಭೆಯನ್ನು ಡಿ.13ರಂದು ಸಂಜೆ ಬೆಂಗಳೂರಿನಲ್ಲಿ ಕರೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ಶಾಸಕರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಮನ್ವಯಕಾರರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪಾದಯಾತ್ರೆಯಲ್ಲಿ ಭಾಗವಹಿಸುವವರು ಆನ್‌ಲೈನ್‌ನಲ್ಲಿ ತಮ್ಮ ಫೋಟೋ ಸಮೇತ ಹೆಸರು ನೋಂದಣಿ ಮಾಡಿಸಬೇಕು. ಒಂದು ದಿನ, ಎರಡು ದಿನ, ಮೂರು ದಿನದಿಂದ ಪಾದಯಾತ್ರೆ ಮುಗಿಯುವವರೆಗೂ ಎಷ್ಟು ದಿನ ಬೇಕಾದರೂ ಅವರು ಪಾದಯಾತ್ರೆಯಲ್ಲಿ ಭಾಗವಹಿಸಬಹುದು.
ಒಂದು ದಿನ ನಡೆಯುವವರಿಗೆ ಒಂದು, ಎರಡು ದಿನ ನಡೆಯುವವರಿಗೆ ಬೇರೆ, ಹತ್ತು ದಿನ ನಡೆಯುವವರಿಗೆ ಬೇರೆ- ಹೀಗೆ ಪಾದಯಾತ್ರೆಯಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಪಕ್ಷದಿಂದ ಸರ್ಟಿಫಿಕೇಟ್ ನೀಡಲಾಗುವುದು. ಕಾವೇರಿ ಜಲಾನಯನ ಪ್ರದೇಶದ ರೈತರು ಹಾಗೂ ಬೆಂಗಳೂರು ಜನರ ಹಿತದೃಷ್ಟಿಯಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.












Click it and Unblock the Notifications