ಸಿದ್ದು ಇದ್ರೇನೆ ಕಾಂಗ್ರೆಸ್ ಎಂಬ ಜಮೀರ್ ಹೇಳಿಕೆ, ಶಿಸ್ತು ಸಮಿತಿ ಕ್ರಮ ಕೈಗೊಳ್ಳುತ್ತದೆ ಎಂದ ಡಿಕೆಶಿ
ರಾಮನಗರ, ಜುಲೈ 23: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಆಕಾಂಕ್ಷಿತರ ಪಟ್ಟಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಂದಿನ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಮಾಧ್ಯಮಗಳ ಮುಂದೆ ಮೌನಕ್ಕೆ ಶರಣಾಗಿದ್ದಾರೆ.
ಶನಿವಾರ ಕನಕಪುರದ ತಾಲ್ಲೂಕು ಕಛೇರಿಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್, ನಾನು ಈ ಹಿಂದೆಯೇ ಹಲವು ಭಾರಿ ಹೇಳಿದ್ದೇನೆ ಕಾಂಗ್ರೆಸ್ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಗೆ ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತದೆ. ಇಂದು ಅದನ್ನೇ ಹೇಳುತ್ತೇನೆ ಮುಂದೆಯೂ ಅದನ್ನೇ ಹೇಳುತ್ತೇನೆ ಎಂದರು.
ಶಾಸಕ ಜಮೀರ್, ಸಿದ್ದರಾಮಯ್ಯ ಇದ್ದರಷ್ಟೇ ಕಾಂಗ್ರೆಸ್, ಅವರ ಹೆಸರೇಳಿದರೆ ಮಾತ್ರ ಕಾಂಗ್ರೆಸ್‌ಗೆ ಗೆಲ್ಲುವುದಕ್ಕೆ ಸಾಧ್ಯ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ನೀಡಿದರೆ ಕಾಂಗ್ರೆಸ್ ಡಿಸಿಪ್ಲೀನ್ ಕಮಿಟಿ ಕ್ರಮಕೈಗೊಳ್ಳುತ್ತದೆ ಎಂದರು. ಮತ್ತೆ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದಿದ್ದಕ್ಕೂ, ಶಿಸ್ತುಸಮಿತಿ ಅದನ್ನು ನೋಡಿಕೊಳ್ಳುತ್ತದೆ ಎಂದಷ್ಟೇ ಪುನರುಚ್ಛರಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಕಾಂಕ್ಷಿತರ ಪಟ್ಟಿ ಬೆಳೆಯುತ್ತಿರುವ ಹಾಗೂ ಬಣ ರಾಜಕೀಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿ ಅಲ್ಲಿಂದ ತೆರಳಿದರು.

ರೇಟ್ ಫಿಕ್ಸ್ ಮಾಡಿ ಬೋರ್ಡ್ ಹಾಕಿ
ಹೋಟೆಲ್ ಗಳಲ್ಲಿ ಪ್ರತಿ ತಿಂಡಿಗೆ ಇಷ್ಟು ಹಣ ಎಂದು ಬೋರ್ಡ್ ಹಾಕುವ ರೀತಿ ಅಧಿಕಾರಿಗಳು ಪ್ರತಿ ಕೆಲಸಕ್ಕೆ ಇಂತಿಷ್ಟೇ ಎಂದು ರೇಟ್ ಫಿಕ್ಸ್ ಮಾಡಿ ಬೋರ್ಡ್ ಹಾಕಿ ಡಿ.ಕೆ.ಶಿವಕುಮಾರ್, ಕನಕಪುರದ ಕೆಡಿಪಿ ಸಭೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ಅವರ ಮೇಲೆ ಕಿಡಿಕಾರಿದರು. ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಹೊಣೆ ಹೊತ್ತುಕೊಂಡ ನಂತರದಲ್ಲಿ ನನ್ನ ಕ್ಷೇತ್ರಕ್ಕೆ ಸಮಯ ಕೊಡಲು ಆಗುತ್ತಿಲ್ಲ, ನಾನು ಬೆಂಗಳೂರು ಕಡೆ ಸ್ವಲ್ಪ ಬ್ಯುಸಿಯಾದೆ, ರೈತರನ್ನು ಈ ಮಟ್ಟಕ್ಕೆ ಅಲೆದಾಡಿಸುವುದಾ..? ಸರಿಯಾದ ಸಮಯಕ್ಕೆ ಜಮೀನಿನ ಖಾತೆ ಪೋಡಿ, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಮಾಡಿಕೊಡಲು ನಿಮಗೆ ಏನು ಕಷ್ಟ..? ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಇನ್ಮುಂದೆ ಸರ್ಕಾರಿ ಕಛೇರಿಯ ಮುಂದೆ ಬೋರ್ಡ್ ಹಾಕಿ, ಎಲ್ಲಾ ಅಧಿಕಾರಿಗಳ ಪೋನ್ ನಂಬರ್ ಜೊತೆಗೆ ನನ್ನ ನಂಬರ್ ಹಾಗೂ ಈಗಿನ ಜಿಲ್ಲಾ ಉಸ್ತುವಾರಿ ಸಚಿವರ ನಂಬರ್ ಹಾಕಿ, ಅದೇನೋ ಕ್ಲೀನ್ ಮಾಡಿಬಿಡ್ತೀನಿ ಅಂತ ಬಂದಾವ್ರೆ ಪಾಪ ಎಂದು ಹೆಸರೇಳದೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್‌ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟರು.

ಸಮಯ ಪರಿಫಾಲನೆ ಮಾಡದ ಅಧಿಕಾರಿಗಳ ವಿರುದ್ಧ ಗರಂ
ಅಧಿಕಾಗಳ ವಿರುದ್ಧ ಸಮಯ ಪಾಲನೆ ಹಾಗೂ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಅವರನ್ನು ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಕ್ಷಣವೇ ತಾಲ್ಲೂಕು ಮಟ್ಟದ ಅಧಿಕಾರಿಗಳು ,ಹಿರಿಯ ಅಧಿಕಾರಿಗಳು ಮತ್ತು ಶಾಸಕರನ್ನು ಸೇರಿ ವಾಟ್ಸಪ್ ಗ್ರೂಪ್ ಮಾಡಲು ತಾಕೀತು ಮಾಡಿದರು.
ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ 90% ಸರ್ಕಾರಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸುತ್ತಿಲ್ಲ, ಎಲ್ಲರು ಬೆಂಗಳೂರು ಹಾಗೂ ಇತರೆ ಭಾಗಗಳಿಂದ ಕಛೇರಿಗೆ ಬರುತ್ತಿದ್ದು, ಯಾವ ಅಧಿಕಾರಿಯು ಸಮಯ ಪಾಲನೆ ಮಾಡುತ್ತಿಲ್ಲ ಹಾಗಾಗಿ ಜನರಿಗೆ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ ಹಾಗೂ ಅವರ ಕೆಲಸಗಳು ಆಗುತ್ತಿಲ್ಲ. ಹಾಗಾಗಿ ಅಧಿಕಾರಿಗಳ ಸಮಯ ಪಾಲನೆ ಬಗ್ಗೆ ನಿಗಾವಹಿಸಲು ಸಹಕಾರಿಯಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಅವರಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಂದ ದೂರು ಬಂದಿದಕ್ಕೆ ಸಭೆ
ಸಭೆಗೂ ಮುನ್ನ ಮಾತನಾಡಿದ್ದ ಡಿಕೆ ಶಿವಕುಮಾರ್, ಅಧಿಕಾರಿಗಳು ತಾವು ಬಯಸಿದ ಸ್ಥಳಕ್ಕೆ ನಿಯುಕ್ತಿಯಾಗಲು ಲಕ್ಷಾಂತರ ಹಣ ಕೊಟ್ಟು ಬರುತ್ತಿದ್ದಾರೆ ಹಾಗಾಗಿ ನನ್ನ ಕ್ಷೇತ್ರದಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಇದನ್ನು ಸರ್ಕಾರ ನೇಮಿಸಿರುವ ಕೆಡಿಪಿ ಸದಸ್ಯರೆ ನನ್ನ ಗಮನಕ್ಕೆ ತಂದಿದ್ದಾರೆ. ಕಚೇರಿಯಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ಸಾಗುತ್ತಿದೆ ಎಂದು ನನಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿವೆ. ಸಾರ್ವಜನಿಕರನ್ನು ಪ್ರತೀ ದಿನ ಕಚೇರಿಗೆ ಅಲೆಸುತ್ತಿದ್ದಾರೆ. ಜನರಿಂದ ಹಣ ಸುಲಿಯುತ್ತಿರುವ ಅಧಿಕಾರಿಗಳು ಕಮಿಷನ್ ಗಳನ್ನು ಎಂಎಲ್ಎ, ಎಂಪಿ ಅಥವಾ ಹಿರಿಯ ಅಧಿಕಾರಿಗಳಿಗೆ ನೀಡುತ್ತಿದ್ದಾರೆ ಅಥವಾ ಅವರೇ ಬೇರೆಯವರ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎನ್ನುವ ವಿಚಾರವಾಗಿ ಅಧಿಕಾರಿಗಳ ಚರ್ಚೆ ಮಾಡುವುದಾಗಿ ತಿಳಿಸಿದ್ದರು.

ಅಲ್ಪಸಂಖ್ಯಾತರ ಮನಸ್ಸಿನಲ್ಲಿರುವುದೇ ನಾ ಹೇಳಿದ್ದು
ಎಲ್ಲರೂ ಬಾಯಿ ಮುಚ್ಚಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಜಮೀರ್, ಅವರು ನನಗೊಬ್ಬನಿಗೆ ಹೇಳಿಲ್ಲ, ಒಂದು ವೇಳೆ ಹೇಳಿದ್ದರೂ ಅವರು ದೊಡ್ಡವರು, ಅವರದ್ದೇ ದೊಡ್ಡದಾಗಲಿ ಬಿಡಿ. ಸಿದ್ದರಾಮಯ್ಯ ಸಿಎಂ ಆಗಬೇಕೆಂಬುದು ರಾಜ್ಯ ದ ಅಲ್ಪಸಂಖ್ಯಾತರ ಅಭಿಪ್ರಾಯ ಆಗಿದೆ. ಅದನ್ನೇ ನಾನು ಹೇಳಿದ್ದೇನೆ ಅಷ್ಟೇ, ಆದರೆ ಕೊನೆಯಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ತಿಳಿಸಿದ್ದರು.
ಕೂಸುಟ್ಟುವ ಮುನ್ನ ಕುಲಾವಿ ಹೊಲಿಸಿದರು ಎನ್ನುವ ಹಾಗೆ ಇನ್ನೂ ಚುನಾವಣೆಗೆ ಆರೇಳು ತಿಂಗಳಿರುವಾಗಲೇ ಕಾಂಗ್ರೆಸ್‌ನಲ್ಲಿ ಬಣರಾಜಕೀಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಮೀರ್ ವಿರುದ್ಧ ಶಿಸ್ತುಕ್ರಮದ ಮಾತನಾಡಿರುವುದರಿಂದ ಇದು ಇನ್ನೂ ಯಾವ ಮಟ್ಟಕ್ಕೆ ತಲುಪುವುದೋ ಎಂಬ ಕೂತೂಹಲ ಸಾರ್ವಜನಿಕರಲ್ಲಿ ಹಾಗೂ ಎದುರಾಳಿ ಪಕ್ಷಗಳಲ್ಲಿ ಮೂಡುತ್ತಿದೆ.












Click it and Unblock the Notifications