ಚನ್ನಪಟ್ಟಣ: ಉಪಚುನಾವಣೆಯಲ್ಲಿ ಯೋಗೇಶ್ವರ್ ಅಭ್ಯರ್ಥಿಗೆ 3ನೇ ಸ್ಥಾನ

Posted By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಡಿಸೆಂಬರ್ 21: ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮ ಪಂಚಾಯ್ತಿಯ 3ನೇ ಬ್ಲಾಕ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶಾಸಕ ಸಿ.ಪಿ. ಯೋಗೀಶ್ವರ್ ಬೆಂಬಲಿತ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಎದುರಿಸಿದ ಪ್ರಥಮ ಸ್ಥಳೀಯ ಸಂಸ್ಥೆ ಚುನಾವಣೆ ಇದಾಗಿದೆ. ಇದರಲ್ಲಿ ಯೋಗೀಶ್ವರ್ ಗೆ ಭಾರೀ ಹಿನ್ನೆಡೆಯಾಗಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ಶಾಸಕರ ಬೆಂಬಲಿತ ಅಭ್ಯರ್ಥಿಗಳು ಇಲ್ಲಿ ಗೆಲುವು ಸಾಧಿಸುತ್ತಿದ್ದರು. ಅದರೆ ಇದೆ ಮೊದಲ ಬಾರಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದಾರೆ.

Channapatna: CP Yogeshwar’s supported candidate pushed to 3rd place in the bi-election

ಇಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ವಿ.ದೇಶಿರಾಜ ಅರಸು ವಿಜಯಶಾಲಿಯಾಗಿದ್ದಾರೆ. ಗ್ರಾ.ಪಂ. ಸದಸ್ಯರಾಗಿದ್ದ ಓದೇಶ್‌ರಾಜೇಅರಸು ಅನಾರೋಗ್ಯದಿಂದ ಮರಣ ಹೊಂದಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ (ಡಿ.18) ರಂದು ಉಪಚುನಾವಣೆ ನಡೆದಿತ್ತು.

ಒಟ್ಟು 802 ಮತದಾರರ ಪೈಕಿ 682 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಇಂದು ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಮತ ಏಣಿಕೆಯ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ವಿ.ದೇಶಿರಾಜ ಅರಸು 297ಮತಗಳನ್ನು ಪಡೆದು 45 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.

ಉಳಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಂಜುಂಡರಾಜ ಅರಸು (ನಂಜಿ) 252 ಮತಗಳನ್ನು ಪಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಭ್ಯರ್ಥಿ 102 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ.

ಜಿದ್ದಾ ಜಿದ್ದಿ ಕಣ

ಕಳೆದ 20 ವರ್ಷಗಳಿಂದ ಶಾಸಕ ಸಿ.ಪಿ.ಯೋಗೇಶ್ವರ್‌ ಅವರ ಭದ್ರಕೋಟೆಯಾಗಿದ್ದ ಕೂಡ್ಲೂರು ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆ ಪ್ರತಿಷ್ಠೆಯ ಅಖಾಡವಾಗಿ ನಿರ್ಮಾಣವಾಗಿತ್ತು. ಅಲ್ಲದೆ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರ್ಪಡೆಗೊಂಡ ಬಳಿಕ ತಾಲೂಕಿನಲ್ಲಿ ಪ್ರಥಮವಾಗಿ ನಡೆದ ಚುನಾವಣೆಯಾಗಿದ್ದು, ಗೆಲುವಿಗಾಗಿ ಅಭ್ಯರ್ಥಿಗಳು ಮತದಾರರ ಮನ ಒಲಿಸಲು ನಿರಂತರ ಕಸರತ್ತು ನಡೆಸಿದ್ದರು.

ಇದೀಗ 20 ವರ್ಷಗಳ ಬಳಿಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವಿಜಯಶಾಲಿಯಾಗಿದ್ದು, ಇದು ಶಾಸಕ ಸಿ.ಪಿ.ಯೋಗೇಶ್ವರ್‌ಗೆ ಮೊದಲ ರಾಜಕೀಯ ಹೊಡೆತ ಎಂದರೆ ತಪ್ಪಾಗಲಾರದು.

ಅಭಿನಂದನೆ

ಕೂಡ್ಲೂರು ಗ್ರಾ.ಪಂ. ಉಪಚುನಾವಣೆಯಲ್ಲಿ ಜಯಗಳಿಸಿದ ನೂತನ ಸದಸ್ಯ ಕೆ.ವಿ. ದೇಶಿರಾಜ ಅರಸು ಅವರನ್ನು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಗ್ರಾಮಕ್ಕೆ ತೆರಳಿ ಅಭಿನಂದಿಸಿದರು. ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ವಿಜಯೋತ್ಸವವನ್ನು ಆಚರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bi-election result announced to the third block constituency of Kudlur village panchayat in Channapatna taluk, Ramanagara. MLA CP Yogeshwar's supporting candidate is pushed to third place.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ