ಜಾತಿಗಣತಿ: ಕಾಂತರಾಜು ವರದಿ ಬಗ್ಗೆ ಕುಮಾರಸ್ವಾಮಿ ಗಂಭೀರ ಹೇಳಿಕೆ
ರಾಮನಗರ, ಅ 9: ಜಾತಿಗಣತಿ ಮತ್ತು ಕಾಂತರಾಜು ವರದಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ. ಜಾತಿ ಆಧಾರದ ಮೇಲೆಯೇ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಮತ್ತು ಜಾತಿಗಣತಿಯಿಂದ ಜಾತಿಜಾತಿ ನಡುವೆ ದ್ವೇಷ ಸೃಷ್ಟಿಯಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಎಚ್ಡಿಕೆ ನೀಡಿದ್ದಾರೆ.
ಬಿಡದಿಯ ತೋಟದ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, " ಕಾಂಗ್ರೆಸ್ ನವರು ಒಂದು ಕಡೆ ಜಾತ್ಯತೀತ ಎನ್ನುತ್ತಾರೆ, ಇನ್ನೊಂದು ಕಡೆ ಜಾತಿ ಗಣತಿ ವರದಿ ಇಟ್ಟುಕೊಂಡು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಲು ಹೊರಟಿದ್ದಾರೆ. ಜಾತಿಗಣತಿ ವರದಿ ವಿಚಾರ ಇಟ್ಟುಕೊಂಡು ಸರಕಾರವು ರಾಜಕೀಯ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.

"ಕಾಂತರಾಜು ಎಂಬುವವರಿಂದ ವರದಿ ಕೊಡಿಸಿದ್ದೇವೆ, ಕುಮಾರಸ್ವಾಮಿ ಅವರು ಒಪ್ಪಲಿಲ್ಲ ಎಂದು ಹಾಲಿ ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ, ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದೆ ಆ ವರದಿಯನ್ನು ಸ್ವೀಕಾರ ಮಾಡುವುದು ಹೇಗೆ? ಎನ್ನುವ ಅರಿವು ಸಿಎಂ ಆದವರಿಗೆ ಇಲ್ಲ" ಎಂದು ಕುಮಾರಸ್ವಾಮಿಯವರು ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರಿದ್ದಾರೆ.
ಮಾತೆತ್ತಿದರೆ ನನ್ನ ಕಡೆ ಬೆರಳು ತೋರಿಸುವ ಅವರು, ಆ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಒಮ್ಮೆಯಾದರೂ ಕಾಂತರಾಜು ವರದಿ ಬಗ್ಗೆ ಚರ್ಚೆ ಮಾಡಿದರಾ? ಇಲ್ಲ. ಪ್ರತಿ ಸಭೆಯಲ್ಲಿಯೂ ಟವೆಲ್ ಕೊಡವಿ ಎದ್ದು ಹೋಗುತ್ತಿದ್ದರು. ಒಮ್ಮೆಯೂ ಈ ಬಗ್ಗೆ ಸಿಎಂ ಆಗಿದ್ದ ನನ್ನ ಬಳಿ 14 ತಿಂಗಳಲ್ಲಿ ಒಮ್ಮೆಯೂ ಚರ್ಚೆ ನಡೆಸಲೇ ಇಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ವಾಕ್ ಪ್ರಹಾರ ನಡೆಸಿದರು.
ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು
ಜಾತಿಗಣತಿ ಮುಖ್ಯವಲ್ಲ, ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಪಾದಿಸಿದ ಕುಮಾರಸ್ವಾಮಿ, "ಜಾತಿ ಎನ್ನುವ ಪದ ತೆಗೆದುಹಾಕಿ ಎಂದು ಹೇಳುತ್ತಾರೆ, ಜಾತ್ಯತೀತ ಸಮಾಜ ನಿರ್ಮಾಣ ಮಾಡೋಣ ಎಂದು ಭಾಷಣ ಬಿಗಿಯುತ್ತಾರೆ. ಅದರ ಅರ್ಥವೇನು? ಜಾತ್ಯತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದುಹಾಕಬೇಕು ಎಂದಲ್ಲವೇ" ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಜಾತಿ ವ್ಯವಸ್ಥೆ
ಕಾಂಗ್ರೆಸ್ ಪಕ್ಷಕ್ಕೆ ಜಾತಿ ವ್ಯವಸ್ಥೆ ಎನ್ನುವುದು ವೋಟ್ ಬ್ಯಾಂಕ್ ರಾಜಕೀಯಕ್ಕೆ ಇರುವ ಸಾಧನ. ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಜಾತಿ ರಾಜಕೀಯ ಮಾಡಿಕೊಂಡೇ ಬರುತ್ತಿದೆ. ಇವರು ಜಾತಿಗಣತಿ ಮಾಡಿ ಏನು ಸಾಧನೆ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜಾತಿಗಣತಿಯ ಉಪಯೋಗ ಏನು? ಸಮಾಜ ಹೊಡೆಯಲು ಜಾತಿ ಗಣತಿ ಮಾಡುತ್ತೀರೋ ಅಥವಾ ಜಾತಿ ಬದಿಗಿಟ್ಟು ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುತ್ತೀರೋ? ಮೊದಲು ಜನರಿಗೆ ಅದನ್ನು ತಿಳಿಸಿ ಎಂದು ಮಾಜಿ ಮುಖ್ಯಮಂತ್ರಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications