ದಶಪಥ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತ: ಮೂವರ ದಾರುಣ ಸಾವು
ರಾಮನಗರ, ಏಪ್ರಿಲ್ 22: ಬೆಂಗಳೂರು-ಮೈಸೂರು ನೂತನ ದಶಪಥ ಹೆದ್ದಾರಿಯಲ್ಲಿ ಅಪಘಾತ ಮುಂದುವರೆದಿದ್ದು, ಶನಿವಾರ ಮಧ್ಯಾಹ್ನ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಂಗಳೂರು-ಮೈಸೂರು ನೂತನ ದಶಪಥ ಹೆದ್ದಾರಿಯ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡದ ಸಮೀಪ ಕಾರು ಅಪಘಾತ ಸಂಭವಿಸಿದ್ದು, ಅತೀ ವೇಗವಾಗಿ ಬಂದ ಆಲ್ಟೋ ಕಾರು ಚಕ್ರ ಸಿಡಿದು ಡಿವೈಡರ್ ಹಾರಿ ಇನ್ನೊಂದು ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಭೀಕರ ಕಾರು ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಟಿ.ನರಸೀಪುರ ಮೂಲದ ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ಚನ್ನಪಟ್ಟಣ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಭೀಕರತೆಗೆ ಎರಡೂ ಕಾರುಗಳು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಕುರಿ ತೊಳೆಯಲು ಹೋದ ಒಂದೇ ಕುಟುಂಬದ ಮೂವರು ನೀರುಪಾಲು
ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಮುತ್ತಸಾಗರ ಗ್ರಾಮದಲ್ಲಿ ನಡೆದಿದೆ. ನಾಗರಾಜು(30) ಜ್ಯೋತಿ(35) ಹಾಗೂ ಲಕ್ಷ್ಮೀ(22) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮೃತರು ಮಾಗಡಿಯ ಮುತ್ತಸಾಗರದ ಗೊಲ್ಲರಹಟ್ಟಿಯವರು ಎಂದು ತಿಳಿದು ಬಂದಿದೆ.
ಕೆರೆಯಲ್ಲಿ ಕುರಿ ಮೈ ತೊಳೆಯಲು ಹೋದ ವೇಳೆ ದುರ್ಘಟನೆ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಕೆರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆದಿದ್ದಾರೆ. ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಮನಗರ ಜಿಲ್ಲೆಯ ಮಾಗಡಿಯ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications