ಮುಂಗಾರಿನಲ್ಲೇ ವಿದ್ಯುತ್ ಕ್ಷಾಮದ ಭೀತಿ: ಶೇ. 60ರಷ್ಟು ಜಲವಿದ್ಯುತ್ ಕುಸಿತ, ಕತ್ತಲಲ್ಲಿ ಕರುನಾಡು?
ರಾಜ್ಯದಲ್ಲಿ ಮುಂಗಾರಿನಲ್ಲೇ ಭಾರಿ ವಿದ್ಯುತ್ ಕ್ಷಾಮದ ಭೀತಿ ಎದುರಾಗಿದೆ. ವಾಡಿಕೆಯಂತೆ ಮಳೆಯಾಗದ ಕಾರಣ ಪ್ರಮುಖ ಜಲಾಶಯಗಳು ಬತ್ತಿ ಬರಿದಾಗುತ್ತಿವೆ. ಇದರ ನೇರ ಪರಿಣಾಮ ರಾಜ್ಯದ ಜಲವಿದ್ಯುತ್ ಉತ್ಪಾದನೆಯ ಮೇಲಾಗಿದ್ದು, ಉತ್ಪಾದನಾ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ. ಹವಾಮಾನ ವೈಪರೀತ್ಯ ಹಾಗೂ ಮಳೆ ಕೊರತೆಯಿಂದಾಗಿ ಸದ್ಯ ರಾಜ್ಯವು ಕತ್ತಲೆಯಲ್ಲಿ ಮುಳುಗುವ ಆತಂಕ ಎದುರಿಸುವಂತಾಗಿದೆ.
ಈ ಬಾರಿ ಎಲ್ ನಿನೋ ಪ್ರಭಾವದಿಂದಾಗಿ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಮುಂಗಾರು ಮಳೆ ಕೈಕೊಟ್ಟಿದೆ. ಜೂನ್ ತಿಂಗಳಲ್ಲಿ ಶೇ. 42ರಷ್ಟು ಹಾಗೂ ಜುಲೈನಲ್ಲಿ ಶೇ. 34ರಷ್ಟು ಮಳೆ ಕೊರತೆಯಾಗಿದೆ. ಇದರಿಂದಾಗಿ ಜಲಾಶಯಗಳಿಗೆ ನೀರಿನ ಹರಿವು ತೀವ್ರವಾಗಿ ಕ್ಷೀಣಿಸಿದೆ. ಮಳೆ ಕೊರತೆಯಿಂದಾಗಿ ಬಿಸಿಲಿನ ಝಳ ಹೆಚ್ಚಾಗಿದ್ದು, ಕೃಷಿ , ವಾಣಿಜ್ಯ ಹಾಗೂ ಗೃಹೋಪಯೋಗಿ ಬಳಕೆಗಾಗಿ ದೈನಂದಿನ ವಿದ್ಯುತ್ ಬೇಡಿಕೆ ಬರೋಬ್ಬರಿ 13,000 ಮೆಗಾವ್ಯಾಟ್ ಗಡಿ ದಾಟಿದೆ.

ಶೇ. 60ರಷ್ಟು ಜಲವಿದ್ಯುತ್ ಕುಸಿತ
ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಜಲವಿದ್ಯುತ್ ಉತ್ಪಾದನೆಯಲ್ಲಿ ದಾಖಲೆಯ ಏರಿಕೆಯಾಗಿತ್ತು. ಆದರೆ, ಇಂದು ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಕನಿಷ್ಠ ಮಟ್ಟಕ್ಕೆ ಕುಸಿದಿರುವುದರಿಂದ ಜಲವಿದ್ಯುತ್ ಉತ್ಪಾದನೆಯು ಶೇ. 60ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5,096 ದಶಲಕ್ಷ ಯೂನಿಟ್ ಜಲವಿದ್ಯುತ್ ಲಭ್ಯವಿದ್ದರೆ , ಈ ವರ್ಷ ಅದು ಕೇವಲ 1,990 ದಶಲಕ್ಷ ಯೂನಿಟ್‌ಗೆ ಇಳಿಕೆಯಾಗಿದೆ. ಸೂಪಾ, ಲಿಂಗನಮಕ್ಕಿ ಹಾಗೂ ಮಾಣಿಯಂತಹ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಪಾತಾಳಕ್ಕೆ ಕುಸಿದಿದೆ.
ರಾಜ್ಯಕ್ಕೆ ಉಷ್ಣ ವಿದ್ಯುತ್ ಸ್ಥಾವರಗಳೇ ಆಸರೆ
ಸಾಮಾನ್ಯವಾಗಿ ಮಳೆಗಾಲದಲ್ಲಿ ಜಲವಿದ್ಯುತ್ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತವೆ ಹಾಗೂ ಉಷ್ಣ ವಿದ್ಯುತ್ ಘಟಕಗಳಿಗೆ ವಿಶ್ರಾಂತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಬೇರೆ ರೀತಿ ಇದೆ. ರಾಜ್ಯದಲ್ಲಿರುವ 21 ಜಲವಿದ್ಯುತ್ ಘಟಕಗಳಲ್ಲಿ ನೀರಿಲ್ಲದೆ ಪರದಾಡುತ್ತಿದ್ದರೆ, ರಾಯಚೂರು, ಯರಮರಸ್ ಮತ್ತು ಬಳ್ಳಾರಿಯ ಉಷ್ಣ ವಿದ್ಯುತ್ ಸ್ಥಾವರಗಳೇ ರಾಜ್ಯಕ್ಕೆ ಆಸರೆಯಾಗಿ ನಿಂತಿವೆ. ಪ್ರಸ್ತುತ ಈ ಸ್ಥಾವರಗಳಿಂದ ನಿತ್ಯ 78.39 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ಶಾಖೋತ್ಪನ್ನ ಘಟಕಗಳಿಗೆ ಅಗತ್ಯವಿರುವ ಕಲ್ಲಿದ್ದಲನ್ನು ಇಂಧನ ಇಲಾಖೆ ದಾಸ್ತಾನು ಮಾಡಿಕೊಂಡಿದ್ದು, ಮುಂದಿನ ಒಂದು ತಿಂಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ಸದ್ಯಕ್ಕೆ ಲಭ್ಯವಿದೆ.
ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಶೇ. 38ರಷ್ಟು ಕೇವಲ ಕೃಷಿ ಪಂಪ್‌ಸೆಟ್‌ಗಳಿಗೆ ಬಳಕೆಯಾಗುತ್ತದೆ. ರಾಜ್ಯಾದ್ಯಂತ ಸುಮಾರು 39 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು , ಸರ್ಕಾರವು ದಿನಕ್ಕೆ 7 ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡುವ ಭರವಸೆ ನೀಡಿದೆ. ಆದರೆ ವಿದ್ಯುತ್ ಕೊರತೆಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಡಿತ ಶುರುವಾಗಿದೆ.
ವಿದ್ಯುತ್ ಬಿಕ್ಕಟ್ಟು ನಿವಾರಣೆಗೆ ಸರ್ಕಾರದ ತುರ್ತು ಕ್ರಮಗಳು
ರಾಜ್ಯದಲ್ಲಿ ಎದುರಾಗಿರುವ ಈ ಬಿಕ್ಕಟ್ಟನ್ನ ನಿವಾರಿಸಲು ಇಂಧನ ಇಲಾಖೆ ಹಲವು ಪರ್ಯಾಯ ಮಾರ್ಗಗಳನ್ನ ಹುಡುಕುತ್ತಿದೆ. ಅಕ್ಟೋಬರ್ ತಿಂಗಳಿಗೂ ಮುನ್ನವೇ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ. ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಜತೆಗೆ , ಸಹ-ಉತ್ಪಾದನಾ ಘಟಕಗಳಿಂದ 500 ರಿಂದ 700 ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ಸರ್ಕಾರ ಮುಂದಾಗಿದೆ. ಇದರೊಂದಿಗೆ 500 ಮೆಗಾವ್ಯಾಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಹಾಗೂ ಜೆಎಸ್‌ಡಬ್ಲ್ಯೂನ 300 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಗಳ ಆರಂಭಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.


Click it and Unblock the Notifications
