TTD: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 3 ತಿಂಗಳು ಕಾಯಬೇಕಿಲ್ಲ, 1 ತಿಂಗಳು ಮೊದಲೇ ಸಿಗುತ್ತೆ ಶ್ರೀವಾರಿ ಟಿಕೆಟ್

ತಿರುಮಲ: ಜೀವನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎನ್ನುವ ಆಸೆ ಅನೇಕರದ್ದಾಗಿರುತ್ತದೆ. ಆದರೆ, ತಿರುಮಲ ಬಾಲಾಜಿ ದರ್ಶನ ಪಡೆಯುವುದು ಅಷ್ಟು ಸುಲಭವಲ್ಲ. ತಿರುಮಲಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಬಾಲಾಜಿ ದರ್ಶನ ಪಡೆಯಬೇಕಾದರೆ ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇನ್ನು ದೇವರ ವಿಶೇಷ ದರ್ಶನಕ್ಕಾಗಿ, 300 ರೂ.ಗಳ ಟಿಕೆಟ್ ಪಡೆಯಬಹುದು. ಈ ಟಿಕೆಟ್‌ ಪಡೆಯಬೇಕಾದರೆ 3 ತಿಂಗಳ ಮುಂಚಿತವಾಗಿಯೇ ಬುಕ್‌ ಮಾಡಬೇಕಾಗುತ್ತದೆ. ಇದರ ಬದಲಿಗೆ ಈಗ ಒಂದು ತಿಂಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿ ಶ್ರೀವಾರಿಯ ದರ್ಶನ ಪಡೆಯಬಹುದು.

ಹೋಮದ ಜೊತೆ ದರ್ಶನ ಭಾಗ್ಯ

ತಿರುಮಲದಲ್ಲಿ ದೇವರ ದರ್ಶನದ ಜೊತೆಗೆ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಅನೇಕ ಭಕ್ತರು ಬಯಸುತ್ತಾರೆ. ಹೀಗಿರುವಾಗ ಭಕ್ತರು ಎಲ್ಲದಕ್ಕೂ ಪ್ರತ್ಯೇಕವಾಗಿ ಟಿಕೆಟ್ ಬುಕ್ ಮಾಡುತ್ತಾರೆ. ಇದರ ಬದಲಿಗೆ ಇದೊಂದು ಟಿಕೆಟ್‌ ಬುಕ್‌ ಮಾಡಿದರೆ ದೇವರ ದರ್ಶನದ ಜೊತೆಗೆ ಶ್ರೀನಿವಾಸ ದಿವ್ಯಾನುಗ್ರಹ ಹೋಮದಲ್ಲಿಯೂ ಭಾಗವಹಿಸಬಹುದು. ಅಲ್ಲದೆ ಈ ಟಿಕೆಟ್‌ ಅನ್ನು ಮೂರು ತಿಂಗಳು ಮುಂಚಿತವಾಗಿ ಬುಕ್‌ ಮಾಡುವ ಅಗತ್ಯವೂ ಇಲ್ಲ. ಈ ಟಿಕೆಟ್‌ ಬುಕ್‌ ಮಾಡಿದರೆ ದೇವರ ಹೋಮದಲ್ಲಿಯೂ ಭಾಗವಹಿಸಬಹುದು, ಜೊತೆಗೆ 300 ರೂ. ಟಿಕೆಟ್ ಸಾಲಿನಲ್ಲಿಯೇ ತೆರಳಿ ದೇವರ ದರ್ಶನವನ್ನೂ ಪಡೆಯಬಹುದು.

TTD

ಶ್ರೀನಿವಾಸ ದಿವ್ಯಾನುಗ್ರಹದಲ್ಲಿ ಭಾಗವಹಿಸುವುದು ಹೇಗೆ?

ಮುಂದಿನ ತಿಂಗಳಲ್ಲಿಯೇ ದೇವರ ದರ್ಶನ ಪಡೆಯಬೇಕು ಎಂದಾದರೆ ಈ ಸರಳ ವಿಧಾನವನ್ನು ಅನುಸರಿಸಬೇಕು. ವೈಜಾಗ್ ಬ್ಯಾಚುಲರ್ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರ ಪ್ರಕಾರ, ಶ್ರೀವಾರಿ ಸೇವೆಯ ಭಾಗವಾಗಿರುವ ಶ್ರೀನಿವಾಸ ದಿವ್ಯಾನುಗ್ರಹ ಹೋಮಕ್ಕೆ ಟಿಕೆಟ್ ಖರೀದಿಸಬೇಕಾಗುತ್ತದೆ. ಈ ಹೋಮದಲ್ಲಿ ಭಾಗವಹಿಸುವುದರಿಂದ ಕುಟುಂಬಕ್ಕೆ ಶುಭ ಮತ್ತು ಆಧ್ಯಾತ್ಮಿಕ ಶಾಂತಿ ಸಿಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಈ ಸೇವೆ ಮಾಡಿಸಲು ಅನೇಕರಿಗೆ ಮನಸ್ಸಿರುವುದಾದರೂ ಈ ಸೇವೆಗೆ ಟಿಕೆಟ್ ಬುಕ್ ಮಾಡುವುದು ಹೇಗೆ, ಎಷ್ಟು ವೆಚ್ಚವಾಗುತ್ತದೆ, ಯಾವಾಗ ಬುಕ್ ಮಾಡಬೇಕು ಎನ್ನುವ ಮಾಹಿತಿ ಇರುವುದಿಲ್ಲ.

ಈ ಟಿಕೆಟ್‌ಗೂ ಇದೆ ಭಾರೀ ಬೇಡಿಕೆ

ಈ ಹೋಮಕ್ಕೆ ಟಿಟಿಡಿ ಪ್ರತಿ ತಿಂಗಳ 25 ನೇ ತಾರೀಕಿನಂದು ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತದೆ. ಟಿಕೆಟ್‌ಗಳು ರಿಲೀಸ್‌ ಆದ ತಕ್ಷಣ ಬುಕ್ ಮಾಡುವುದು ಸೂಕ್ತ. ಈ ಸೇವೆಗೆ ಕೂಡಾ ಬೇಡಿಕೆ ಹೆಚ್ಚಿರುವುದರಿಂದ, ಅವು ಬೇಗನೆ ಬುಕ್‌ ಆಗಿ ಬಿಡುತ್ತವೆ. ಟಿಕೆಟ್‌ಗಳನ್ನು ಟಿಟಿಡಿಯ ಅಧಿಕೃತ ವೆಬ್‌ಸೈಟ್ ಅಥವಾ ಅಧಿಕೃತ ಬುಕಿಂಗ್ ವ್ಯವಸ್ಥೆಯ ಮೂಲಕ ಮಾತ್ರ ಬುಕ್ ಮಾಡಬೇಕು. ಈ ಸೇವೆಯ ಟಿಕೆಟ್‌ಗೆ ತಗಲುವ ಬೆಲೆ 1600 ರೂ.

ಸಮಯಕ್ಕೆ ಸರಿಯಾಗಿ ಹಾಜರಿರಬೇಕು

ಒಂದು ಟಿಕೆಟ್‌ನಲ್ಲಿ ಇಬ್ಬರು ಭಕ್ತರು ಭಾಗವಹಿಸಬಹುದು. ಇದರಲ್ಲಿ ಹೋಮದಲ್ಲಿ ಭಾಗವಹಿಸುವ ಅವಕಾಶ ಮಾತ್ರವಲ್ಲದೆ, ಶ್ರೀವಾರಿ ದರ್ಶನದ ಸೌಲಭ್ಯವೂ ಸೇರಿದೆ. ಟಿಕೆಟ್ ಬೆಲೆಯಲ್ಲಿ ಹೋಮ ಸೇವೆ ಮತ್ತು ದರ್ಶನದ ಶುಲ್ಕಗಳು ಸೇರಿವೆ. ಹೋಮದಲ್ಲಿ ಭಾಗವಹಿಸುವ ಭಕ್ತರು ನಿಗದಿತ ಸಮಯಕ್ಕೆ ಮುಂಚಿತವಾಗಿ ಅಲ್ಲಿಗೆ ಬರಬೇಕು. ಹೋಮ ಬೆಳಿಗ್ಗೆ 8:30 ಕ್ಕೆ ಪ್ರಾರಂಭವಾಗುತ್ತದೆ. ಆದ್ದರಿಂದ, ಈ ಸಮಯಕ್ಕಿಂತ ಮುಂಚಿತವಾಗಿ ಭಕ್ತರು ಆಗಮಿಸಬೇಕಾಗುತ್ತದೆ. ಜೊತೆಗೆ ಟಿಕೆಟ್‌ ಬುಕ್‌ ಮಾಡುವಾಗ ತಿಳಿಸಿರುವ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಬರಬೇಕಾಗುತ್ತದೆ.

ಮಧ್ಯಾಹ್ನ 2 ಗಂಟೆಯಿಂದ ಶ್ರೀವಾರಿಯ ದರ್ಶನ

ಟಿಟಿಡಿ ಸೂಚಿಸಿರುವ ಡ್ರೆಸ್ ಕೋಡ್ ಅನ್ನು ಸಹ ಪಾಲಿಸಬೇಕು. ಹೋಮದ ನಂತರ, ಭಕ್ತರು ಭದ್ರತಾ ಸಿಬ್ಬಂದಿಯ ಬಳಿ ನಿಂತು ಸೈನ್ ಮಾಡಬೇಕಾಗುತ್ತದೆ. ನಂತರ ಮಧ್ಯಾಹ್ನ 2 ಗಂಟೆಯಿಂದ ಶ್ರೀವಾರಿಯ ದರ್ಶನ ಪ್ರಾರಂಭವಾಗುತ್ತದೆ. ಆಗ ಭಕ್ತರು 300 ರೂಪಾಯಿಗಳ ಸರತಿ ಸಾಲಿನಲ್ಲಿ ನಿಲ್ಲಬಹುದು. ಈ ರೀತಿಯಾಗಿ, ಶ್ರೀವಾರಿಯ ದರ್ಶನ ಪಡೆದು ಆತನ ಕೃಪೆಗೆ ಪಾತ್ರರಾಗಬಹುದು. ಪ್ರತಿ ತಿಂಗಳು ಸಾವಿರಾರು ಜನರು ಈ ಸೇವೆಯಲ್ಲಿ ಭಾಗವಹಿಸುತ್ತಾರೆ. ಟಿಕೆಟ್ ಬುಕ್ ಮಾಡುವಾಗ ಹೆಸರು ಮತ್ತು ಆಧಾರ್‌ನಂತಹ ವಿವರಗಳನ್ನು ಸರಿಯಾಗಿ ನಮೂದಿಸಬೇಕು.

ಟಿಕೆಟ್‌ ಬುಕಿಂಗ್ ಮಾಡಿದ ನಂತರ, ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಸೇವೆಯ ದಿನದಂದು ಅದನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ಇಲ್ಲಿ ಮುಖ್ಯವಾದ ವಿಷಯ ಎಂದರೆ ಟಿಟಿಡಿ ನಿಯಮಗಳು, ಟಿಕೆಟ್ ಬೆಲೆಗಳು ಅಥವಾ ಬುಕಿಂಗ್ ಕಾರ್ಯವಿಧಾನಗಳು ಕಾಲಕಾಲಕ್ಕೆ ಬದಲಾಗುವ ಸಾಧ್ಯತೆ ಇದೆ. ಹಾಗಾಗಿ ಈ ಸೇವೆಯನ್ನು ಬುಕ್ ಮಾಡುವ ಮೊದಲು ಟಿಟಿಡಿ ಅಧಿಕೃತ ವೆಬ್‌ಸೈಟ್‌ನಲ್ಲಿ ಇತ್ತೀಚಿನ ವಿವರಗಳನ್ನು ಪರಿಶೀಲಿಸುವುದು ಸೂಕ್ತ.

ನೀವು ಮುಂಚಿತವಾಗಿ ಯೋಜನೆ ರೂಪಿಸಿಕೊಂಡರೆ ಶ್ರೀನಿವಾಸ ದಿವ್ಯಾನುಗ್ರಹ ಹೋಮದಲ್ಲಿ ಭಾಗವಹಿಸಲು ಮತ್ತು ಶ್ರೀವರ ಆಶೀರ್ವಾದವನ್ನು ಪಡೆಯಲು ನಿಮಗೆ ಸುಲಭವಾಗಿ ಅವಕಾಶ ಸಿಗುತ್ತದೆ.

(ಬರಹ :ರಂಜಿತಾ ಆರ್.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+