ಜಾಹೀರಾತು, ಕೋಟ್ಯಂತರ ಬಂಡವಾಳವಿಲ್ಲದೆ ಕೇವಲ 5 ರೂ. ಪೆನ್‌ನಿಂದ 400 ಕೋಟಿ ಮೌಲ್ಯದ ಬ್ರ್ಯಾಂಡ್ ಕಟ್ಟಿದ ಸೂರಜ್
ದೊಡ್ಡ ಮಟ್ಟದ ಸೆಲೆಬ್ರಿಟಿಗಳ ಯಾವುದೇ ಪ್ರಚಾರವಿಲ್ಲದೆ, ಆರಂಭದಲ್ಲಿ ದೊಡ್ಡ ಬಂಡವಾಳವಿಲ್ಲದೆ ಅಥವಾ ಇಂದಿನ ಕಾಲದ ವೈರಲ್ ಮಾರ್ಕೆಟಿಂಗ್ ತಂತ್ರಗಳಿಲ್ಲದೆ ಕೇವಲ 5 ರೂಪಾಯಿಯ ಪೆನ್ ಒಂದು 400 ಕೋಟಿ ರೂಪಾಯಿ ಮೌಲ್ಯದ ಬೃಹತ್ ಬ್ರ್ಯಾಂಡ್ ಆಗಿ ಬೆಳೆಯಲು ಸಾಧ್ಯವೇ? ಮೇಲ್ನೋಟಕ್ಕೆ ಇದು ಅಸಾಧ್ಯ ಎನಿಸಿದರೂ, ಭಾರತದ ಲಕ್ಷಾಂತರ ಜನರ ಸಮಸ್ಯೆಯೊಂದಕ್ಕೆ ಸರಳ ಹಾಗೂ ಕೈಗೆಟಕುವ ದರದಲ್ಲಿ ಪರಿಹಾರ ಒದಗಿಸುವ ಮೂಲಕ ಲಿಂಕ್ ಎನ್ನುವ ಈ ಪೆನ್ ಇಂತಹದ್ದೊಂದು ಸಾಧನೆ ಮಾಡಿದೆ.
ರಾಜಸ್ಥಾನದಿಂದ ಕೋಲ್ಕತ್ತಾಗೆ: ಸೂರಜ್ ಮಲ್ ಜಲಾನ್ ಅವರ ಆರಂಭಿಕ ದಿನಗಳು
ರಾಜಸ್ಥಾನದ ಪುಟ್ಟ ಗ್ರಾಮವೊಂದರಲ್ಲಿ ಜನಿಸಿದ ಯುವಕ ಸೂರಜ್ ಮಲ್ ಜಲಾನ್ ತಮ್ಮ 19ನೇ ವಯಸ್ಸಿನಲ್ಲಿ ಬರಿಗೈಯಲ್ಲಿ ಕೋಲ್ಕತ್ತಾ ನಗರಕ್ಕೆ ಬಂದರು. ರೈಲಿನಲ್ಲಿ ಪ್ರಯಾಣಿಸುವಾಗ ದಾರಿಯಲ್ಲಿ ಊಟ ಖರೀದಿಸಲೂ ಕೂಡ ಅವರ ಬಳಿ ಹಣವಿರಲಿಲ್ಲ.

ಹೀಗಾಗಿ ಮನೆಯಿಂದಲೇ ಕಟ್ಟಿಕೊಂಡು ಹೋದ ಬುತ್ತಿಯೇ ಅವರಿಗೆ ಆಸರೆಯಾಗಿತ್ತು. ಕೋಲ್ಕತ್ತಾದಲ್ಲಿ ತಿಂಗಳಿಗೆ ಕೇವಲ 60 ರೂ. ಸಂಪಾದಿಸುತ್ತಿದ್ದ ಸೂರಜ್, ರಾತ್ರಿ ಮಲಗಲು ಸರಿಯಾದ ಜಾಗವಿಲ್ಲದೇ ಸಿಕ್ಕ ಸಿಕ್ಕ ಕಡೆ ಮಲಗಿ ರಾತ್ರಿ ಕಳೆಯುತ್ತಿದ್ದರು. ಆದರೆ,ಎಷ್ಟೇ ಕಷ್ಟ ಬಂದರೂ ಕೂಡ ಅವರಲ್ಲಿದ್ದ ಸಾಧಿಸುವ ಛಲ ಮಾತ್ರ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ.
ಲಿಂಕ್ ಪೆನ್ ಆರಂಭ: ದುಬಾರಿ ರಿಫಿಲ್ ಬದಲಿಗೆ ಕೈಗೆಟಕುವ ಪೆನ್
1970ರ ದಶಕದಲ್ಲಿ ಭಾರತದಲ್ಲಿ ಬಹುತೇಕ ಬಾಲ್ ಪೆನ್‌ಗಳನ್ನಾ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದರು. ಅದರಲ್ಲಿ ದುಬಾರಿ ಸ್ಟೀಲ್ ರಿಫಿಲ್‌ಗಳನ್ನ ಬಳಸಲಾಗುತ್ತಿತ್ತು. ಮಾರುಕಟ್ಟೆಯಲ್ಲಿದ್ದ ಇತರರು ಇದೇ ವಿಧಾನವನ್ನು ಅನುಸರಿಸುತ್ತಿದ್ದಾಗ, ಸೂರಜ್ ಮಲ್ ಜಲಾನ್ ಅವರು ಸ್ವಲ್ಪ ಭಿನ್ನವಾಗಿ ಆಲೋಚಿಸಲು ಶುರು ಮಾಡಿದರು. "ವಿದೇಶಿ ದುಬಾರಿ ರಿಫಿಲ್‌ಗಳ ಬದಲಿಗೆ, ನಾವೇ ಸ್ವತಃ ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಪೆನ್ ತಯಾರಿಸಿದರೆ ಹೇಗೆ?" ಎಂದು ಯೋಚಿಸಿದರು. ತಮ್ಮಲ್ಲಿದ್ದ ಸಂಪನ್ಮೂಲಗಳನ್ನ ಬಳಸಿಕೊಂಡು ಒಂದು ಸಣ್ಣ ಕೊಠಡಿಯಲ್ಲಿ ಪ್ಲಾಸ್ಟಿಕ್ ಪೆನ್ ಬಿಡಿಭಾಗಗಳನ್ನ ತಯಾರಿಸಲು ಆರಂಭಿಸಿದರು. 1976ರಲ್ಲಿ ಕೇವಲ 3 ಲಕ್ಷ ರೂ. ಬಂಡವಾಳ, ಒಂದು ಬಾಡಿಗೆ ಕೊಠಡಿ ಹಾಗೂ ಬೆರಳೆಣಿಕೆಯ ಕಾರ್ಮಿಕರೊಂದಿಗೆ 'ಲಿಂಕ್ ಪೆನ್ ಆ್ಯಂಡ್ ಪ್ಲಾಸ್ಟಿಕ್ಸ್' ಎಂಬ ಸಂಸ್ಥೆಯನ್ನು ಅಧಿಕೃತವಾಗಿ ಹುಟ್ಟುಹಾಕಿದರು.
5 ರೂ. ಲಿಂಕ್ ಓಷನ್ ಜೆಲ್ ಪೆನ್ ಕ್ರಾಂತಿ
ನಂತರದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬದಲಾವಣೆಗಳಾದವು. ಕೆಲವು ವರ್ಷಗಳ ನಂತರ ಮಾರುಕಟ್ಟೆಯಲ್ಲಿ ಜೆಲ್ ಪೆನ್‌ಗಳ ಟ್ರೆಂಡ್ ಶುರುವಾಯಿತು. ಆದರೆ ಆ ಸಮಯದಲ್ಲಿ ಮಾರುಕಟ್ಟೆಯಲ್ಲಿದ್ದ ಜೆಲ್ ಪೆನ್‌ಗಳ ಬೆಲೆ ಸುಮಾರು 20-25 ರೂ. ಇತ್ತು. ಇದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೊರೆಯಾಯಿತು. ಈ ಹಂತದಲ್ಲಿ ಹೆಚ್ಚಿನ ಲಾಭದ ಹಿಂದೆ ಹೋಗದ ಸೂರಜ್ ಅವರು, ಕೇವಲ 5 ರೂಪಾಯಿಗೆ 'ಲಿಂಕ್ ಓಷನ್ ಜೆಲ್ ಪೆನ್' ಅನ್ನು ಮಾರುಕಟ್ಟೆಗೆ ಪರಿಚಯಿಸಿದರು. ಇಷ್ಟು ಕಡಿಮೆ ಬೆಲೆಗೆ ಗುಣಮಟ್ಟದ ಜೆಲ್ ಪೆನ್ ನೀಡುವುದು ಅಸಾಧ್ಯವೆಂದು ಹಲವರು ಭಾವಿಸಿದ್ದರು, ಆದರೆ ಅದು ಭಾರತದ ಮಾರುಕಟ್ಟೆಯಲ್ಲಿ ಭಾರಿ ಕ್ರಾಂತಿಯನ್ನೇ ಸೃಷ್ಟಿಸಿತು. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಕಚೇರಿ ಉದ್ಯೋಗಿಗಳ ಕೈಯಲ್ಲೂ ಲಿಂಕ್ ಪೆನ್ ಕಾಣ ಸಿಗ ತೊಡಗಿತು.
400 ಕೋಟಿ ರೂ. ವಹಿವಾಟು
ಭಾರತದಂತಹ ದೇಶದಲ್ಲಿ ಜನರಿಗೆ ಯಾವಾಗಲೂ ಅತ್ಯಂತ ದುಬಾರಿ ಅಥವಾ ಪ್ರೀಮಿಯಂ ಉತ್ಪನ್ನಗಳೇ ಬೇಕೆಂದಿಲ್ಲ, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಉತ್ತಮ ವಸ್ತುಗಳು ಸಿಕ್ಕರೆ ಸಾಕು ಎಂಬುದನ್ನು ಈ 5 ರೂ. ಪೆನ್ ಸಾಬೀತುಪಡಿಸಿತು. ಇಂದು ಲಿಂಕ್ ಲಿಮಿಟೆಡ್ ಕಂಪನಿಯು ಪ್ರತಿದಿನ ಲಕ್ಷಾಂತರ ಪೆನ್‌ಗಳನ್ನು ಉತ್ಪಾದಿಸುತ್ತಿದ್ದು, ಪ್ರಪಂಚದ ಡಜನ್‌ಗಟ್ಟಲೆ ದೇಶಗಳಿಗೆ ತನ್ನ ಉತ್ಪನ್ನಗಳನ್ನ ರಫ್ತು ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಂಪನಿಯ ವಾರ್ಷಿಕ ವರಮಾನವು 350-400 ಕೋಟಿ ರೂ.ಗಳ ಗಡಿ ತಲುಪಿದೆ.
ಹೊಸದನ್ನೇನನ್ನಾದರೂ ಆವಿಷ್ಕರಿಸುವುದಕ್ಕಿಂತ, ದೈನಂದಿನ ಅಗತ್ಯಗಳನ್ನ ಸಾಮಾನ್ಯ ಜನರಿಗೆ ಕೈಗೆಟಕುವಂತೆ ಮಾಡುವುದು ಕೂಡ ಅತಿದೊಡ್ಡ ಆವಿಷ್ಕಾರ ಮತ್ತು ಯಶಸ್ವಿ ಬಿಸಿನೆಸ್ ಎಂಬುದಕ್ಕೆ ಈ ಲಿಂಕ್ ಪೆನ್ ಯಶೋಗಾಥೆ ಅತ್ಯುತ್ತಮ ಉದಾಹರಣೆಯಾಗಿದೆ.


Click it and Unblock the Notifications
