"ನಾನು ರೈತನಾಗಬೇಕು": ಸೇನೆ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಈಗ ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷಾಧಿಪತಿ
ದೇಶದ ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ, ನಂತರ ಪೊಲೀಸ್ ಇಲಾಖೆಯಲ್ಲೂ ಕರ್ತವ್ಯ ನಿರ್ವಹಿಸಿದ ವ್ಯಕ್ತಿಯೊಬ್ಬರು ತಮ್ಮ ನಿವೃತ್ತಿಯ ನಂತರ ಸಾಮಾನ್ಯವಾಗಿ ವಿಶ್ರಾಂತ ಜೀವನವನ್ನ ಬಯಸುತ್ತಾರೆ ಇದು ಸಹಜ ಕೂಡ. ಏಕೆಂದರೆ ಬಿಡುವಿಲ್ಲದೇ ದುಡಿದ ಜೀವಕ್ಕೆ ವಿಶ್ರಾಂತಿಯ ಅಗತ್ಯಯಿರುತ್ತದೆ. ಆದರೆ, ಒಡಿಶಾದ ಬಾಲಸೋರ್ ಜಿಲ್ಲೆಯ ಮುಕುಲಿಶಿ ಗ್ರಾಮದ 61 ವರ್ಷದ ಪ್ರತಾಪ್ ಚಂದ್ರ ರೌಲ್ ಅವರ ಆಲೋಚನೆಯೇ ಬೇರೆ.
ಹೌದು, ತಮ್ಮ ವೃತ್ತಿಯಿಂದ ನಿವೃತ್ತರಾದ ನಂತರ ಪ್ರತಾಪ್ ತಮ್ಮ ಗ್ರಾಮಕ್ಕೆ ಮರಳಿ, ಕೇವಲ 8,500 ಚದರ ಅಡಿ ಜಾಗದಲ್ಲಿ ಸಾವಯವ ಕೃಷಿ ಕೈಗೊಂಡು ವರ್ಷಕ್ಕೆ ಬರೋಬ್ಬರಿ 4 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ಅವರು ಕಂಡ ಯಶಸ್ಸು ಇಂದು ಅನೇಕರಿಗೆ ಸ್ಫೂರ್ತಿ.

ನಿವೃತ್ತ ಯೋಧನಿಗೆ ಕೃಷಿ ಕನಸು
1984ರಲ್ಲಿ ಭಾರತೀಯ ಸೇನೆಗೆ ಸೇರಿದ ಪ್ರತಾಪ್ ಚಂದ್ರ ರೌಲ್, 2010ರಲ್ಲಿ ನಿವೃತ್ತರಾಗಿದ್ದರು. ಆ ನಂತರ ಒಡಿಶಾ ಪೊಲೀಸ್ ಇಲಾಖೆಯಲ್ಲಿ ಹವಾಲ್ದಾರ್ ಆಗಿ ಸುಮಾರು ಒಂದು ದಶಕಗಳ ಕಾಲ ಸೇವೆ ಸಲ್ಲಿಸಿ, 2020ರಲ್ಲಿ ಸ್ವಯಂ ನಿವೃತ್ತಿ ಪಡೆದು ತಮ್ಮ ಹುಟ್ಟೂರಿಗೆ ಮರಳಿದ್ದಾರೆ. "ನಾನು ರೈತನಾಗಬೇಕು ಮತ್ತು ನಮ್ಮ ಭಾಗದ ಜನರು ಈ ಹಿಂದೆ ತಿಂದಿರದ ಹೊಸ ಬೆಳೆಯೊಂದನ್ನು ಬೆಳೆಯಬೇಕು ಎಂಬುದು ನನ್ನ ಕನಸಾಗಿತ್ತು. ಜತೆಗೆ, ಸಣ್ಣ ಜಾಗದಲ್ಲೂ ಕೃಷಿ ಮಾಡಿ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಸಾಬೀತುಪಡಿಸಬೇಕಿತ್ತು" ಎನ್ನುತ್ತಾರೆ ಪ್ರತಾಪ್. ಕೃಷಿಯ ಯಾವುದೇ ಹಿನ್ನೆಲೆ ಇಲ್ಲದಿದ್ದರೂ, ಯೂಟ್ಯೂಬ್ ಮತ್ತು ಫೇಸ್‌ಬುಕ್ ಮೂಲಕ ಮಾಹಿತಿ ಕಲೆಹಾಕಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ನಿರ್ಧರಿಸಿದರು.
ಡ್ರ್ಯಾಗನ್ ಫ್ರೂಟ್ ಕೃಷಿ
ಕಡಿಮೆ ನೀರು, ಬಿಸಿಲಿನ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುವ ಮತ್ತು 25 ವರ್ಷಗಳವರೆಗೆ ಇಳುವರಿ ನೀಡಬಲ್ಲ ಡ್ರ್ಯಾಗನ್ ಫ್ರೂಟ್ ಕೃಷಿ ಮಾಡಲು ಪ್ರತಾಪ್ ಮುಂದಾದರು. ಮಾರ್ಚ್ 2022ರಲ್ಲಿ ಕೇವಲ 1.3 ಲಕ್ಷ ರೂಪಾಯಿ ಬಂಡವಾಳ ಹಾಕಿ ಗುಜರಾತ್‌ನಿಂದ ವಿಯೆಟ್ನಾಂ ರೆಡ್, ಥಾಯ್ ಜಂಬೋ, ತೈವಾನ್ ಪಿಂಕ್ ಸೇರಿದಂತೆ 7 ಪ್ರೀಮಿಯಂ ತಳಿಗಳ 1,000 ಗಿಡಗಳನ್ನು ತರಿಸಿದರು. ಸಾಮಾನ್ಯ ಕಂಬದ ವಿಧಾನದ ಬದಲಾಗಿ, ಹೈ-ಡೆನ್ಸಿಟಿ ರೈಲಿಂಗ್ ವಿಧಾನವನ್ನು ಅಳವಡಿಸಿಕೊಂಡರು. ಇದರಿಂದಾಗಿ ಕಡಿಮೆ ಜಾಗದಲ್ಲಿ ದುಪ್ಪಟ್ಟು ಗಿಡಗಳನ್ನ ಬೆಳೆಸಲು ಅವರಿಗೆ ಸಾಧ್ಯವಾಯಿತು.
ಮೊದಲ ಬಾರಿಗೆ ಕೃಷಿ ಮಾಡುತ್ತಿದ್ದ ಪ್ರತಾಪ್ ಅವರಿಗೆ ಆರಂಭದಲ್ಲಿಯೇ ಯಶಸ್ಸು ಸಿಗಲಿಲ್ಲ. ಮಾರ್ಚ್ 2023ರ ಮೊದಲ ಫಸಲಿನಲ್ಲಿ ಕೇವಲ 50 ಕೆ.ಜಿ ಇಳುವರಿ ಬಂತು ಹಾಗೂ ಹಣ್ಣುಗಳ ಗಾತ್ರವೂ ಕೂಡ ತೀರಾ ಚಿಕ್ಕದಾಗಿತ್ತು. ಆದರೆ ಇದರಿಂದ ಹೆದರದೆ, ರಾಸಾಯನಿಕ ಗೊಬ್ಬರಗಳನ್ನು ಬಿಟ್ಟು ಸಂಪೂರ್ಣ ಸಾವಯವ ಕೃಷಿಯತ್ತ ಮುಖ ಮಾಡಿದರು. ಸಗಣಿ, ಗೋಮೂತ್ರ, ಹಣ್ಣು-ತರಕಾರಿ ತ್ಯಾಜ್ಯ, ಈರುಳ್ಳಿ ಸಿಪ್ಪೆ ಮತ್ತು ಎರೆಹುಳುಗಳನ್ನು ಬಳಸಿ ತಾವೇ ಸ್ವತಃ ಸಾವಯವ ಗೊಬ್ಬರ ತಯಾರಿಸಿದರು. ಈ ಬದಲಾವಣೆಯು ಗಿಡಗಳ ಆರೋಗ್ಯವನ್ನು ಹೆಚ್ಚಿಸಿದ್ದಲ್ಲದೆ, ಹಣ್ಣಿನ ಗಾತ್ರ ಮತ್ತು ಇಳುವರಿಯನ್ನ ಕೂಡ ತುಂಬ ಹೆಚ್ಚಿಸಿತು.
ಅದ್ಭುತ ಆದಾಯ ತಂದುಕೊಟ್ಟ ಡ್ರ್ಯಾಗನ್ ಫ್ರೂಟ್
ಈ ಸಾವಯವ ಗೊಬ್ಬರ ಮಾಡಲು ಹಾಕಿದ ಪರಿಶ್ರಮ 2024ರಲ್ಲಿ ಫಲ ನೀಡಿತು. ಆ ವರ್ಷ 200 ಕೆ.ಜಿ ಇಳುವರಿ ಪಡೆದು 50,000 ರೂಪಾಯಿ ಆದಾಯ ಗಳಿಸಿದರು. ಗುಣಮಟ್ಟ ಚೆನ್ನಾಗಿದ್ದರಿಂದ ಗ್ರಾಹಕರು ಖರೀದಿಗೆ ಮುಗಿಬಿದ್ದರು. 2025ರ ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ಇಳುವರಿ ಬರೋಬ್ಬರಿ 900 ಕೆ.ಜಿಗೆ ಏರಿಕೆಯಾಯಿತು. ಹಣ್ಣುಗಳನ್ನು ನೇರವಾಗಿ ಕೆ.ಜಿಗೆ 220 ರೂ. ಹಾಗೂ ಸಗಟು ದರದಲ್ಲಿ 200 ರೂ.ಗೆ ಮಾರಾಟ ಮಾಡಿ ಹಣ್ಣಿನಿಂದಲೇ ಸುಮಾರು 3 ಲಕ್ಷ ರೂಪಾಯಿ ಆದಾಯ ಗಳಿಸಿದರು.
ಇದರ ಜತೆಗೆ, ನರ್ಸರಿ ಮೂಲಕ ವರ್ಷಕ್ಕೆ 2,000 ಡ್ರ್ಯಾಗನ್ ಫ್ರೂಟ್ ಸಸಿಗಳನ್ನ ಮಾರಾಟ ಮಾಡಿ ಹೆಚ್ಚುವರಿ 50,000 ಸಂಪಾದಿಸುತ್ತಿದ್ದಾರೆ. ತಮ್ಮ ಮನೆಯ ಮೇಲ್ಛಾವಣಿಯ ಮೇಲೂ 22 ಗಿಡಗಳನ್ನು ಬೆಳೆಸಿರುವ ಇವರು, ಆಫ್-ಸೀಸನ್‌ನಲ್ಲಿ ಸ್ಟ್ರಾಬೆರಿ ಕೃಷಿ ಮಾಡುವ ಮೂಲಕ ಕೃಷಿಯಲ್ಲಿ ಹೊಸ ಮೈಲುಗಲ್ಲು ಸಾಧಿಸುತ್ತಿದ್ದಾರೆ.


Click it and Unblock the Notifications
