ಕೂಡಿಟ್ಟ ಹಣವನ್ನು ರಾಮ ಮಂದಿರಕ್ಕೆ ನೀಡಿದ ಬಾಲಕ
ರಾಮನಗರ, ಜನವರಿ 29: ದೇಶದ ಮೂಲೆ ಮೂಲೆಯಲ್ಲೂ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಕಾರ್ಯ ಆರಂಭಗೊಂಡಿದೆ. ಜನರು ಉತ್ಸಾಹದಿಂದ ತಮ್ಮ ಕೈಲಾದ ದೇಣಿಗೆ ನೀಡುತ್ತಿದ್ದಾರೆ.
ಚನ್ನಪಟ್ಟಣದ ಮಂಡಿಪೇಟೆ ಬಡಾವಣೆಯ 10 ವರ್ಷದ ಬಾಲಕ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ದೇಣಿಗೆ ನೀಡಿದ್ದಾನೆ. ಒಂದು ವರ್ಷದಿಂದ ತನ್ನ ಮನೆಯವರು ತಿಂಡಿಗೆ ನೀಡಿದ ಹಣವನ್ನು ಉಳಿಸಿದ್ದ ಬಾಲಕ ಮಂದಿರ ನಿರ್ಮಾಣಕ್ಕೆ ಅದನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ಮಂಡಿಪೇಟೆಯ ವರ್ತಕ ಲೋಕೇಶ್ ಪುತ್ರ ನಿಖಿಲ್ ತಾನು ವರ್ಷದಿಂದ ಕೂಡಿಟ್ಟಿದ್ದ ಹುಂಡಿಯ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ಸಮರ್ಪಣೆ ಮಾಡಿದ್ದಾನೆ. ಬಾಲಕ ನೀಡಿದ ಹುಂಡಿ ಹಣವನ್ನು ಸಮರ್ಪಣಾ ಸಮಿತಿಯ ಸದಸ್ಯರು ಎಣಿಕೆ ಮಾಡಿದಾಗ 5,260 ರೂ. ಇತ್ತು.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಮಾತನಾಡಿದ ಬಾಲಕ ನಿಖಿಲ್, "ಶ್ರೀರಾಮ ನಮ್ಮೆಲ್ಲರ ಅಭಿಮಾನದ ದೇವರು. ರಾಮ ಮಂದಿರ ನಿರ್ಮಾಣ ಸಂತಸದ ವಿಷಯವಾಗಿದೆ. ನಮ್ಮ ಅಜ್ಜಿ, ಅಜ್ಜ, ತಾಯಿ, ತಂದೆ ಹೇಳುತ್ತಿದ್ದನ್ನು ಕೇಳಿ ಶ್ರೀ ರಾಮ ಮಂದಿರಕ್ಕೆ ಹಣ ನೀಡಬೇಕೆಂದು ತೀರ್ಮಾನಿಸಿದೆ" ಎಂದು ಹೇಳಿದ್ದಾನೆ.
ಜನವರಿ 15ರಿಂದ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. "ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ 45 ದಿನಗಳ ಕಾಲ ದೇಣಿಗೆ ಸಂಗ್ರಹ ಅಭಿಯಾನ ನಡೆಯಲಿದೆ" ಎಂದು ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.












Click it and Unblock the Notifications