ಕನಕಪುರದಲ್ಲಿ ಆರ್. ಅಶೋಕಗೆ ಎರಡು ಟಾಸ್ಕ್ ಕೊಟ್ಟ ಬಿಜೆಪಿ!
ರಾಮನಗರ, ಮೇ 6; ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗಮನ ಸೆಳೆದಿರುವ ಕ್ಷೇತ್ರ ಕನಕಪುರ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಎದುರು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಅಶೋಕ ಕಣಕ್ಕಿಳಿಸುವ ಮೂಲಕ ಪಕ್ಷ ಚುನಾವಣೆ ಕಾವು ಹೆಚ್ಚಿಸಿದೆ. ಕನಕಪುರದಲ್ಲಿ ಗೆಲವು ಯಾರಿಗೆ? ಎಂಬುದು ಮೇ 13ರಂದ ತಿಳಿಯಲಿದೆ.
ಸಾತನೂರಿನಲ್ಲಿ 4 ಬಾರಿ ಗೆಲುವು ಸಾಧಿಸಿದರುವ ಡಿ. ಕೆ. ಶಿವಕುಮಾರ್ ಕನಕಪುರವನ್ನು 4ನೇ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬಹುದು ಎಂಬ ಅಂಶ ಸಹ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ. ಇದೇ ಮೊದಲ ಬಾರಿಗೆ ಡಿ. ಕೆ. ಶಿವಕುಮಾರ್ ಎದುರು ಪ್ರಭಾವಿ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ ಎಂಬುದು ಸ್ಥಳೀಯರ ಮಾತು.

"ಬಿಜೆಪಿ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. ಡಿ. ಕೆ. ಶಿವಕುಮಾರ್ ಗೆಲ್ಲುತ್ತಾರೆ. ಆದರೆ ಅವರ ಗೆಲುವಿನ ಅಂತರ ಕಡಿಮೆಯಾಗಲಿದೆ" ಎಂದು ಕ್ಷೇತ್ರದ ಮತದಾರ, ರೈತ ಶಿವಣ್ಣ ಗೌಡ ಹೇಳಿದರು. ಬಿಜೆಪಿಯ ವಿವಿಧ ನಾಯಕರು ಆರ್. ಅಶೋಕಗೆ ಬೆಂಬಲವಾಗಿ ನಿಂತಿದ್ದಾರೆ, ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಎರಡು ಟಾಸ್ಕ್ ಕೊಟ್ಟ ಬಿಜೆಪಿ; ಆರ್. ಅಶೋಕ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ. ಈ ಬಾರಿಯ ಚುನಾವಣೆಯಲ್ಲಿ ಪದ್ಮನಾಭನಗರ ಮತ್ತು ಕನಕಪುರದಲ್ಲಿ ಅವರಿಗೆ ಚುನಾವಣಾ ಕಣಕ್ಕಿಳಿಯಲು ಅವಕಾಶ ನೀಡಲಾಗಿದೆ. ಎರಡು ಕಡೆ ಸ್ಪರ್ಧಿಸಲು ಅವಕಾಶ ಕೊಟ್ಟ ಪಕ್ಷ ಎರಡು ಟಾಸ್ಕ ಸಹ ನೀಡಿದೆ.
ಕಂದಾಯ ಸಚಿವರೂ ಆಗಿರುವ ಆರ್. ಅಶೋಕಗೆ ಕನಕಪುರದಲ್ಲಿ ಈ ಬಾರಿ ಗೆಲುವು ಸಾಧಿಸುವುದು ಮತ್ತು ಪಕ್ಷ ಕಟ್ಟುವುದು ಎಂಬ ಎರಡು ಟಾಸ್ಕ್ ಅನ್ನು ಬಿಜೆಪಿ ನೀಡಿದೆ. ಕನಕಪುರದಲ್ಲಿ ಬಿಜೆಪಿಯ ಮತಗಳಿಕೆ 1983ರ ಬಳಿಕ ಶೇ 2.6ರಷ್ಟಿದೆ. ಆದರೆ ಈ ಚುನಾವಣೆಯಲ್ಲಿ ಈ ಚಿತ್ರಣ ಬದಲಾಗಲಿದೆ ಎಂಬ ನಿರೀಕ್ಷೆ ಇದೆ.

ಕನಕಪುರದ ಸ್ಪರ್ಧೆ ಕುರಿತು ಮಾತನಾಡಿರುವ ಆರ್. ಅಶೋಕ, "ಈ ಹಿಂದೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಲು ಹೋದರೆ 5 ಜನರು ಮಾತ್ರ ಇರುತ್ತಿದ್ದರು. ಈ ಬಾರಿ 5 ಸಾವಿರ ಜನರು ಸೇರಿದ್ದರು. ಈ ಬಾರಿ ಗೆಲ್ಲುವ ಜೊತೆಗೆ ಪಕ್ಷ ಕಟ್ಟಲು ನನ್ನನ್ನು ಕಳಿಸಿದ್ದಾರೆ" ಎಂದು ಹೇಳಿದ್ದಾರೆ.
ಆರ್. ಅಶೋಕ ಚುನಾವಣಾ ಪ್ರಚಾರಕ್ಕೆ ಬಿ. ಎಲ್. ಸಂತೋಷ್ ಮತ್ತು ಸಿ. ಟಿ. ರವಿ ಬೆಂಬಲವಾಗಿ ನಿಂತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕನಕಪುರದ ಚುನಾವಣಾ ಚಿತ್ರಣವೇ ಬದಲಾಗಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ, ಡಿ. ಕೆ. ಶಿವಕುಮಾರ್ ಗೆಲ್ಲುವುದು ಖಚಿತ, ಎಷ್ಟು ಮತಗಳ ಅಂತರದಲ್ಲಿ ಎಂದು ಮಾತ್ರ ನೋಡಬೇಕು? ಎಂದು ಕಾಂಗ್ರೆಸ್ ಕಾರ್ಯರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕನಕಪುರದಲ್ಲಿರುವ ಒಕ್ಕಲಿಗರ ಮತಗಳು ಸುಮಾರು 80 ಸಾವಿರ. ಈ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಆರ್. ಅಶೋಕರನ್ನು ಕಣಕ್ಕಿಳಿಸಿದ ಒಕ್ಕಲಿಗ ದಾಳ ಉರುಳಿಸಿದೆ. ಜೆಡಿಎಸ್ ನಾಗರಾಜು ಎಂಬುವವರನ್ನು ಅಭ್ಯರ್ಥಿಯಾಗಿ ಮಾಡಿದೆ. ಆದರೆ ನೇರ ಪೈಪೋಟಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎಂಬುದು ಸ್ಥಳೀಯರ ಮಾತು.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ 47 ಸಾವಿರ ಮತಗಳನ್ನು ಪಡೆದಿದ್ದ ನಾರಾಯಣ ಗೌಡ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಆದ್ದರಿಂದ ಈ ಬಾರಿ ಜೆಡಿಎಸ್‌ನ ಪ್ರಚಾರಕ್ಕಾಗಲಿ, ಸ್ಪರ್ಧೆಗಾಗಲಿ ಅಂತಹ ಮಹತ್ವ ಉಳಿದಿಲ್ಲ.
ಆರ್. ಅಶೋಕ ಪುತ್ರನಿಗೆ ಈ ಚುನಾವಣೆ ಒಂದು ಪಾಠವಾಗಲಿದೆ. 30 ವರ್ಷದ ಎಂಬಿಎ ಪದವೀಧರ ಅಜಯ್ ಅಶೋಕ ಕನಕಪುರದಲ್ಲಿ ತಳಮಟ್ಟದಲ್ಲಿ ಕಾರ್ಯಕರ್ತರ ಜೊತೆ ಕೆಲಸ ಮಾಡುತ್ತಿದ್ದಾರೆ. ನನಗೆ ರಾಜಕಾರಣಿ ಆಗುವ ಆಸೆ ಇಲ್ಲ, ಉದ್ಯಮದಲ್ಲಿ ತೊಡಗಿದ್ದೇನೆ. ಚುನಾವಣೆಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದೇನೆ ಎಂದು ಅಜಯ್ ಅಶೋಕ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರಾಜ್ಯಾದ್ಯಂತ ಪ್ರಚಾರದ ಹೊಣೆ ಹೊತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಪತ್ನಿ ಉಷಾ ಶಿವಕುಮಾರ್, ಸಹೋದರ ಡಿ. ಕೆ. ಸುರೇಶ್ ಕನಕಪುರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕನಕಪುರದಲ್ಲಿ ಯಾರಿಗೆ ಸಿಗಲಿದೆ? ಗೆಲುವು.












Click it and Unblock the Notifications